Advertisement

ಮೈತ್ರಿಗೆ 20 ಸ್ಥಾನಗಳಲ್ಲಿ ಗೆಲುವು: ಸಿದ್ದರಾಮಯ್ಯ

12:27 AM Apr 09, 2019 | Lakshmi GovindaRaju |

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ಸೋಮವಾರ ಕ್ಷೇತ್ರದ ಹಲವೆಡೆ ಪ್ರಚಾರ ಕೈಗೊಂಡ ಅವರು, ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಯಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳು ಹೆಚ್ಚು ಗೆಲ್ಲಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಯಾವುದೇ ಗೊಂದಲ ಇಲ್ಲ. ವದಂತಿಗಳಿಗೆ ಯಾರೂ ಕಿವಿಗೊಡಬೇಡಿ. ಎರಡೂ ಪಕ್ಷಗಳು ಒಟ್ಟಾಗೇ ಇವೆ. ನಾನು ಹಾಗೂ ದೇವೇಗೌಡರು ಎಲ್ಲ ಕ್ಷೇತ್ರಗಳಲ್ಲಿ ಜತೆಗೂಡಿ ಪ್ರಚಾರ ಮಾಡಲಿದ್ದೇವೆ ಎಂದು ಹೇಳಿದರು.

ಬಿಜೆಪಿ ಪ್ರಣಾಳಿಕೆ ಒಂದು ಸುಳ್ಳಿನ ಕಂತೆ. ಐದು ವರ್ಷ ಅಧಿಕಾರದಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಏನೂ ಮಾಡಲಿಲ್ಲ. ಇದೀಗ ಹೊಸ ಸುಳ್ಳು ಹೇಳಿ ಜನರ ಮುಂದೆ ಬಂದಿದ್ದಾರೆ. ಹೀಗಾಗಿ, ಅದಕ್ಕೆ ಮಹತ್ವ ಇಲ್ಲ ಎಂದು ಹೇಳಿದರು. ಸಚಿವ ಜಮೀರ್‌ ಅಹಮದ್‌ ಇದ್ದರು.

ಉತ್ತರದಲ್ಲೂ ಪ್ರಚಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಉತ್ತರ ಕ್ಷೇತ್ರದ ಕೆಲವೆಡೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಜತೆಗೂಡಿ ಕೃಷ್ಣ ಬೈರೇಗೌಡ ಪರ ಪ್ರಚಾರ ಮಾಡಿದರು.

Advertisement

“ಮಾಜಿ ಸಿಎಂ ಕುಮಾರಸ್ವಾಮಿ’: ಭಾಷಣದ ಮಧ್ಯೆ, ನನ್ನ ನಂತರ “ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ’ ಭಾಷಣ ಮಾಡ್ತಾರೆ ಎಂದು ಬಾಯ್ತಪ್ಪಿ ಹೇಳಿದರು. ಸಭಿಕರು ಮಾಜಿ ಅಲ್ಲ ಎಂದಾಗ, “ಮಾನ್ಯ ಮುಖ್ಯಮಂತ್ರಿಯವರು ಭಾಷಣ ಮಾಡ್ತಾರೆ’ ಎಂದು ಹೇಳಿದರು.

ನೀವು ಸುಮಲತಾರನ್ನ ಗೆಲ್ಲಿಸಿಕೊಡಿ: ಬೆಂಗಳೂರು ಕೇಂದ್ರ ಲೋಸಕಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ನೆರೆದಿದ್ದ ಜನರ ನಡುವಿನಿಂದ ಕೆಲವರು, “ನಾವು ಇಲ್ಲಿ ರಿಜ್ವಾನ್‌ರನ್ನು ಗೆಲ್ಲಿಸುತ್ತೇವೆ. ಮಂಡ್ಯದಲ್ಲಿ ನೀವು ಸುಮಲತಾರನ್ನು ಗೆಲ್ಲಿಸಿಕೊಡಿ’ ಎಂದು ಕೂಗಿದರು. ಆದರೆ, ಅದರ ಬಗ್ಗೆ ಗಮನ ನೀಡದ ಸಿದ್ದರಾಮಯ್ಯ, ಭಾಷಣ ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next