Advertisement

ವಿಮಾನ-ರೈಲು ಬರುತಾ, ಆನೆ ಕಾರಿಡಾರ್‌ ಆಗುತ್ತಾ

04:30 PM Feb 01, 2018 | Team Udayavani |

ಹಾಸನ: ಕಳೆದ ವರ್ಷದಿಂದ ಸಾಮಾನ್ಯ ಬಜೆಟ್‌ ನಲ್ಲಿಯೇ ರೈಲ್ವೆ ಬಜೆಟ್‌ ಕೂಡ ಸೇರ್ಪಡೆಯಾಗಿರುವುದರಿಂದ ಬಜೆಟ್‌ನಲ್ಲಿ ರೈಲ್ವೆ ಜಾಲದ ಅಭಿವೃದ್ಧಿಯ ಕುತೂಹಲವೂ ಸಾಮಾನ್ಯವಾಗಿದೆ. ಬಜೆಟ್‌ನಲ್ಲಿ ತೆರಿಗೆ ಬಗ್ಗೆ ಆರ್ಥಿಕ ತಜ್ಞರು ಹಾಗೂ ವರ್ತಕ ಸಮುದಾಯಕ್ಕೆ ಕುತೂಹಲವಿದ್ದರೆ ಜನಸಾಮಾನ್ಯರಿಗೆ ಹೊಸ ಘೋಷಣೆಗಳು ಹಾಗೂ ರೈಲ್ವೆ ಯೋಜನೆಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಜನರನ್ನು ಸೆಳೆಯಲು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ವಿವಿಧ ಘೋಷಣೆಗಳನ್ನು ಪ್ರಕಟಿಸಬಹುದೆಂಬ ನಿರೀಕ್ಷೆಯಿದ್ದು ಜಿಲ್ಲೆಯ ಜನರಲ್ಲೂ ಕುತೂಹಲವಿದೆ. 

Advertisement

ಏನೇನು ನಿರೀಕ್ಷೆ?: ವಿಮಾನ ನಿಲ್ದಾಣ, ಐಐಟಿ, ಕೇಂದ್ರಿಯ ವಿವಿ, ಆನೆ ಕಾರಿಡಾರ್‌, ಹಾಸನ – ಬೇಲೂರು – ಚಿಕ್ಕಮಗಳೂರು – ಶೃಂಗೇರಿ ರೈಲು ಮಾರ್ಗ, ಚಳ್ಳಕೆರೆ – ತುರುವೇಕೆರೆ, ಕೆ.ಬಿ.ಕ್ರಾಸ್‌ ,ಚನ್ನರಾಯಟ್ಟಣ ರೈಲು ಮಾರ್ಗ, ಅರಸೀಕೆರೆ ರೈಲು ನಿಲ್ದಾಣದ ಅಭಿವೃದ್ಧಿ, ಬೆಂಗಳೂರು – ಹಾಸನ – ಮಂಗಳೂರು, ಅರಸೀಕೆರೆ – ಹಾಸನ- ಮೈಸೂರು ನಡುವೆ ಹೊರ ರೈಲುಗಳ ಸಂಚಾರ, ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್‌ನಲ್ಲಿ ಜೈಕಾ ನೆರವಿನ ಚತುಷ್ಪಥ ಮೇಲ್ಸೇತುವೆ ಮತ್ತು ಸುರಂಗ ಮಾರ್ಗದ ನಿರ್ಮಾಣ ಹಾಗೂ ಹಾಸನ ಸ್ಮಾರ್ಟ್‌ಸಿಟಿ, ಹಾಸನದಲ್ಲಿ ಮೆಗಾ ಡೇರಿ ನಿರ್ಮಾಣ ಯೋಜನೆ ಮಂಜೂರಾತಿ.

ಹಾಸನ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಆದರೆ ಅದಕ್ಕೆ ಪೂರಕ ಬೆಂಬಲ ಕೇಂದ್ರ ಸರ್ಕಾರದಿಂದ ಸಿಗುತ್ತಿಲ್ಲ ಎಂಬ ಕೊರಗು ಇದೆ. ಈ ಬಾರಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಫೆಬ್ರವರಿಯಲ್ಲಿ ನಡೆಯುತ್ತಿದೆ. ಆದರೆ ಈ ಬಾರಿ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ನೆರವು ಘೋಷಣೆಯಾಗಬಹುದೆಂಬ ನಿರೀಕ್ಷೆ ಗರಿಗೆದರಿದೆ.

 ರೈಲ್ವೆ ಯೋಜನೆಗಳು: ಕಳೆದ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಹಾಸನ – ಬೇಲೂರು – ಚಿಕ್ಕಮಗಳೂರು – ಶೃಂಗೇರಿ ರೈಲು ಮಾರ್ಗ, ಚಳ್ಳಕೆರೆ – ತುರುವೇಕೆರೆ, ಕೆ.ಬಿ.ಕ್ರಾಸ್‌, ಚನ್ನರಾಯಟ್ಟಣ ರೈಲು ಮಾರ್ಗಗಳ ಸಮೀಕ್ಷೆ ಘೋಷಣೆ ಮಾಡಿತ್ತು. ಈ ಬಾರಿ ಮಾರ್ಗಗಳ ಮಂಜೂರಾತಿ ಘೋಷಣೆ ಆಗಬಹುದೆಂಬ ಕುತೂಹಲವಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಶಾಸಕ ಎಚ್‌.ಡಿ. ರೇವಣ್ಣ ಒಂದು ತಿಂಗಳ ಹಿಂದೆಯೇ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ರನ್ನು ದೆಹಲಿಯಲ್ಲಿ ಭೇಟಿಯಾಗಿ ಜಿಲ್ಲೆ ಮೂಲಕ ಹಾದು ಹೋಗುವ ರೈಲು ಮಾರ್ಗಗಳ ಮಂಜೂರಾತಿಗೆ ಮನವಿ ಸಲ್ಲಿಸಿದ್ದಾರೆ.

ವಿಶೇಷವಾಗಿ ಹಾಸನ – ಬೇಲೂರು – ಚಿಕ್ಕಮಗಳೂರು- ಶೃಂಗೇರಿ ರೈಲು ಮಾರ್ಗ ಮಂಜೂರಾಗುವ ನಿರೀಕ್ಷೆಯಿದೆ. ಅರಸೀಕೆರೆ ರೈಲು ನಿಲ್ದಾಣ ಮೇಲ್ದರ್ಜೆಗೆ, ಹಾಸನ ಬಸ್‌ ನಿಲ್ದಾಣ ಬಳಿ ರೈಲ್ವೆ ಮೇಲ್ಸೇತುವೆ ಮಂಜೂರಾಗಿದ್ದು, ತ್ವರಿತ ಅನುಷ್ಠಾನದ ಭರವಸೆ ಸಿಗಬಹುದು. ಆನೆ ಕಾರಿಡಾರ್‌: ಸಕಲೇಶಪುರ, ಆಲೂರು ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಆ ನಿಟ್ಟಿನಲ್ಲಿ ಸಕಲೇಶಪುರ ತಾಲೂಕಿನ ಹೊಂಗಡಹಳ್ಳ ಭಾಗದಲ್ಲಿ ಆನೆ ಕಾರಿಡಾರ್‌ ಒತ್ತಾಯ ಇದೆ. ಇದು ಸುಮಾರು 500 ಕೋಟಿ ರೂ. ಯೋಜನೆ. ಕೇಂದ್ರ ಸರ್ಕಾರದಿಂದಲೇ ಮಂಜೂರಾಗಬೇಕು. ಈಗಾಗಲೇ ಕೇಂದ್ರ ಸರ್ಕಾರದ ಮೇಲೆ ಜಿಲ್ಲೆಯ ಜನಪ್ರತಿನಿಧಿಗಳು ಒತ್ತಡ ಹೇರಿದ್ದಾರೆ. ಈ ಬಜೆಟ್‌ನಲ್ಲಿ ಈ ಯೋಜನೆಯ ಘೋಷಣೆ ಆಗಬಹುದೇ ಎಂಬ ಕುತೂಹಲವಿದೆ.

Advertisement

ಸ್ಮಾರ್ಟ್‌ ಸಿಟಿ: ಸ್ವತ್ಛ ಭಾರತ್‌ ಘೋಷಣೆಯಡಿ ಹಾಸನ ನಗರ 2ನೇ ಸ್ಥಾನವನ್ನು 2 ವರ್ಷಗಳ ಹಿಂದೆ ಪಡೆದುಕೊಂಡಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಸ್ಮಾರ್ಟ್‌ ಸಿಟಿಗಳನ್ನು ಘೋಷಣೆ ಮಾಡಿದರೆ ಹಾಸನವೂ ಸೇರಲಿ ಎಂಬ ಆಸೆ ಹಾಸನದ ನಾಗರಿಕರದ್ದು. ಹಾಸನದ ಕೈಗಾರಿಕಾಭಿವೃದ್ಧಿ ಕೇಂದ್ರ ಹಾಗೂ ವಿಶೇಷ ಆರ್ಥಿಕ ವಲಯವೂ ನಿರ್ಮಾಣ ವಾಗಿರುವುದರಿಂದ ಕೈಗಾರಿಕಾಭಿವೃದ್ಧಿಗೆ ಪೂರಕ ಘೋಷಣೆಗಳ ನಿರೀಕ್ಷೆಯಿದೆ. ಹಾಸನಕ್ಕೆ ಐಐಟಿ ಬೇಡಿಕೆ ಹಳೆಯದು. ಈಗ ಧಾರವಾಡ
ದಲ್ಲಿ ಐಐಟಿ ಸ್ಥಾಪನೆಯಾಗಿದೆ. ಆದರೆ ಐಐಟಿ ಯಾಗಿ ಕಾಯ್ದಿರಿಸಿದ 1000 ಎಕರೆ ಭೂಮಿ ಐಐಟಿ ನಿರೀಕ್ಷೆಯಲ್ಲಿದೆ. ಹಾಗೆಯೇ ಕೇಂದ್ರೀಯ ವಿವಿ ಬೇಡಿಕೆಯೂ ಹಳೆಯದು. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗಬಹುದೇ ಎಂಬ ಸಣ್ಣ ಆಸೆಯಂತೂ ಜಿಲ್ಲೆಯ ಜನರಲ್ಲಿದೆ.

ಮೆಗಾಡೇರಿ: ಹಾಸನ ಹಾಲು ಒಕ್ಕೂಟವು ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನ ದಲ್ಲಿದೆ. ಮೆಗಾಡೇರಿ ಸ್ಥಾಪನೆ 320 ಕೋಟಿ ರೂ. ಯೋಜನೆಗೆ ಕೇಂದ್ರ ಸರ್ಕಾರ, ಎನ್‌ಡಿಡಿಬಿ ನೆರವು ಕೋರಿ 1 ವರ್ಷದ ಹಿಂದೆಯೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇತ್ತೀಚೆಗೆ ಕೇಂದ್ರ ಕೃಷಿ ಸಚಿವರನ್ನು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್‌.ಡಿ.ರೇವಣ್ಣ ಅವರು ಭೇಟಿಯಾಗಿ ಆರ್ಥಿಕ ನೆರವು ಕೋರಿದ್ದಾರೆ. ಈ ಬಜೆಟ್‌ನಲ್ಲಿ ನೆರವು ಘೋಷಣೆಯಾಗಬಹುದೆಂಬ ನಂಬಿಕೆಯಿದೆ.

ಬರುವುದೇ ವಿಮಾನ ನಿಲ್ದಾಣ ಇದು ಹಾಸನದ ಜನರ ದಶಕಗಳ ಬೇಡಿಕೆ. ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಪೂರ್ಣಗೊಂಡಿದೆ. ಶಿಲಾನ್ಯಾಸವೂ ನಡೆದಿತ್ತು. ಆದರೆ ಇದುವರೆಗೂ ವಿಮಾನ ನಿಲ್ದಾಣ ನಿರ್ಮಾಣವಾಗಿಲ್ಲ. ನಾಗರಿಕ ವಿಮಾನಯಾನಕ್ಕಿಂತ ಕಾರ್ಗೋ ವಿಮಾನಗಳ ಹಾರಾಟ ಹಾಗೂ ವಿಮಾನಗಳ ದುರಸ್ತಿ ಉದ್ದೇಶದ ವಿಮಾನ ನಿಲ್ದಾಣ ನಿರ್ಮಾಣದ ಘೋಷಣೆ ಕೇಂದ್ರ ಬಜೆಟ್‌ನಲ್ಲಿ ಆಗಬಹುದೇ ಎಂಬ ನಿರೀಕ್ಷೆ ಜಿಲ್ಲೆಯ ಜನರದ್ದು.

 ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next