ನಮ್ಮ ಊರಿನ ಒಬ್ಬ ರೈತರು ಟೆಫ್ ಎಂಬ ಹೊಸ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅದು ಯಾವ ಬೆಳೆ, ಹೇಗೆ ಬೆಳೆಯಬೇಕು ಇತ್ಯಾದಿ ಮಾಹಿತಿ ನೀಡುವಿರಾ?
– ಮಂಜುನಾಥ ಪಟೇಲ್, ದಾವಣಗೆರೆ
ಟೆಫ್ ಎಂಬುದು ಒಂದು ಹೊಸ ಸಿರಿಧಾನ್ಯ ಬೆಳೆ. ಇದನ್ನು ಕಡಿಮೆ ಮಳೆ ಬೀಳುವ ಪ್ರದೇಶದಲ್ಲೂ ಬೆಳೆಯಬಹುದು. ಇದನ್ನು, ಮೊಟ್ಟೆಯ ಸಿರಿಧಾನ್ಯ ರೂಪ ಎಂದು ಕರೆಯಬಹುದು. ಗೋಧಿ, ಬಾರ್ಲಿ ಮುಂತಾದ ಧಾನ್ಯಗಳಲ್ಲಿ ಗ್ಲುಟೆನ್ ಎನ್ನುವ ಅಂಶವಿರುತ್ತದೆ. ಅದು ಕರುಳು ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಪರಿಣತರು. ಟೆಫ್ನಲ್ಲಿ ಗ್ಲುಟೆನ್ ಇರುವುದಿಲ್ಲ ಎನ್ನುವುದು ಅದರ ಹೆಗ್ಗಳಿಕೆ. ಬದಲಾಗಿ ಟೆಫ್ನಲ್ಲಿ ರೋಗ ನಿರೋಧಕ ಗುಣ, ಜೀರ್ಣಕ್ರಿಯೆ ಹೆಚ್ಚಿಸುವ ಅಂಶ ಇರುವುದಲ್ಲದೆ ಕ್ಯಾಲ್ಸಿಯಂ, ವಿಟಮಿನ್ “ಸಿ’ ಮತ್ತಿತ್ತರ ಪೋಷಕಾಂಶಗಳ ಆಗರವಿರುತ್ತದೆ. ಈ ಕಾರಣಗಳಿಗೇ ಇದೊಂದು ಸಮತೋಲಿತ ಎನ್ನುವ ದೃಷ್ಟಿಯಿಂದ ಟೆಫ್ಅನ್ನು- “ಮೊಟ್ಟೆಯ ಸಿರಿಧಾನ್ಯ ರೂಪ’ ಎನ್ನುತ್ತಾರೆ.
ಮೈಸೂರಿನ
ADUSM ಸಂಸ್ಥೆಯು ಈ ಬೆಳೆಯನ್ನು ಸ್ಥಳೀಯವಾಗಿ ಎಲ್ಲರಿಗೂ ಕೈಗುಟುಕುವ ಬೆಲೆಯಲ್ಲಿ ಮೊದಲ ಬಾರಿಗೆ ಪರಿಚಯಿಸಿತು. ಇದು, ಎಲ್ಲಾ ರೀತಿಯ ಹವಾಮಾನಗಳಿಗೂ ಹೊಂದಿಕೊಳ್ಳುತ್ತದೆ. ಒಣಬೇಸಾಯ ಪದ್ಧತಿಯಲ್ಲೂ ಮುಂಗಾರಿನ (ಜೂನ್- ಜುಲೈ) ಮತ್ತು ಹಿಂಗಾರಿನ (ಅಕ್ಟೋಬರ್- ನವೆಂಬರ್) ಬೆಳೆಯಾಗಿಯೂ ಬೆಳೆಯಬಹುದಾಗಿದೆ. ಎಕರೆಗೆ 50 ಗ್ರಾಂ ಟೆಫ್ ಬೀಜಗಳನ್ನು ತೆಗೆದುಕೊಂಡು ಅದೇ ಪ್ರಮಾಣದ ಮರಳಿನೊಂದಿಗೆ ಮಿಶ್ರಗೊಳಿಸಿ ಮಡಿಯಲ್ಲಿ ಬೆಳೆಸಬೇಕು. ಆದಾದ 21 ದಿನಗಳಲ್ಲಿ ಸಸಿಗಳ ನಾಟಿ ಮಾಡಲು ಸಾಲಿನಿಂದ ಸಾಲಿಗೆ 20 ಸೆಂ.ಮೀ. ಗಿಡದಿಂದ ಗಿಡಕ್ಕೆ 8-10 ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು. ಮಣ್ಣಿನ ತೇವಾಂಶ ನೋಡಿಕೊಂಡು 7- 10 ದಿನಗಳಿಗೊಮ್ಮೆ ಅವಶ್ಯಕತೆ ಇದ್ದಲ್ಲಿ ತೆಳುವಾಗಿ ನೀರು ಹಾಯಿಸಬೇಕು. ಕೀಟ ಮತ್ತು ರೋಗ ಬಾಧೆ ಅಷ್ಟಾಗಿ ಕಂಡುಬರುವುದಿಲ್ಲ. ಈ ಬೆಳೆ 90ರಿಂದ 110 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಸಂಪೂರ್ಣ ಗಿಡವನ್ನು ಕತ್ತರಿಸಿ/ ಕಟಾವು ಮಾಡಿ ಧಾನ್ಯಗಳನ್ನು ರಾಶಿ ಮಾಡಬೇಕು. ಪ್ರತಿ ಎಕರೆಗೆ 250- 300 ಕಿ.ಗ್ರಾಂ ಟೆಫ್ ಧಾನ್ಯವನ್ನು ಪಡೆಯಬಹುದು. ಈ ಧಾನ್ಯ ಹೊಸ ಬೆಳೆಯಾಗಿರುವುದರಿಂದ ಹೆಚ್ಚಿನ ಮಾರುಕಟ್ಟೆ ಸೌಲಭ್ಯವಿಲ್ಲ. ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕದಂಬ ಸೊಸೈಟಿಯಲ್ಲಿ ಒಪ್ಪಂದ ಕೃಷಿ ಮೂಲಕ ಈ ಬೆಳೆಯನ್ನು ಬೆಳೆಯಬಹುದಾಗಿದೆ. ಈ ಬೆಳೆಯ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
-ಡಾ. ಅಶೋಕ್ ಪಿ.,
ಹಿರಿಯ ವಿಜ್ಞಾನಿ ಹಾಗೂ
ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ