Advertisement

ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ; ಡಿ.ಕೆ. ಸುರೇಶ್‌

06:09 PM Jun 11, 2022 | Team Udayavani |

ಹಾಸನ: ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಕಳೆದ ಮೂರು ವರ್ಷಗಳಿಂದ ಸರ್ಕಾರ ಅಭಿವೃದ್ಧಿ ಯೋಜನೆಗಳ ಕ್ರಿಯಾ ಯೋಜನೆ ರೂಪಿಸಿಲ್ಲ. ಭ್ರಷ್ಟ ವ್ಯವಸ್ಥೆ ರಾಜ್ಯದಲ್ಲಿ ಮನೆ ಮಾಡಿದೆ ಎಂದು ಹಾಸನ ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್‌ ಅವರು ಆರೋಪಿಸಿದರು.

Advertisement

ನಗರದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಪ್ರಚಾರ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ, ಜಲಸಂಪನ್ಮೂಲ, ಆರ್‌ ಡಿಪಿಆರ್‌, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕ್ರಿಯಾ ಯೋಜನೆ ರೂಪಿ ಸದೆ ಭ್ರಷ್ಟ ಆಡಳಿತ ವ್ಯವಸ್ಥೆ ನಡೆಯುತ್ತಿದೆ. ಭ್ರಷ್ಟಾಚಾರ ನಡೆಸುವುದೇ ಬಿಜೆಪಿ ಸರ್ಕಾರ ಪ್ರಮುಖ ಅಜೆಂಡಾವಾಗಿದೆ ಎಂದರು.

ಪಿಎಸ್‌ಐ ಹಗರಣ ಹಳ್ಳ ಹಿಡಿಸುತ್ತಿದೆ: ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಮರೆಮಾಚಲು ಪ್ರತಿನಿತ್ಯ ಮಸೀದಿ, ದೇವಸ್ಥಾನ, ಪಠ್ಯಪುಸ್ತಕ, ಅಜಾನ್‌ ವಿಷಯಗಳನ್ನು ಬಿಜೆಪಿ ಪ್ರಸ್ತಾಪ ಮಾಡುವ ಮೂಲಕ ಸರ್ಕಾರ ಪಿಐಸ್‌ಐ ಹಗಣರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ಆಡಳಿತ ದುರುಪಯೋಗ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯನ್ನು ಬಿಜೆಪಿ ಪಕ್ಷ ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಈ ಭಾಗದಲ್ಲಿ ಹಲವು ಸಚಿವ ರು ಹಾಗೂ ಬಿಜೆಪಿ ಶಾಸಕರು ಮತದಾರರಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ ಎಂದು ದೂರಿದರು. ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳಲು, ತಮ್ಮ ಕುರ್ಚಿ ಭದ್ರಪಡಿಸಿಕೊಳಲು ಸರ್ಕಾರದ ಆಡಳಿತ ವ್ಯವಸ್ಥೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಬಸವ ತತ್ವಕ್ಕೆ ತಿಲಾಂಜಲಿ: ಬಾಯಿ ತುಂಬಾ ಬಸವಣ್ಣನವರ ವಚನ ಹೇಳುವ ಬಿಜೆಪಿಗರು, ಅವರ ತತ್ವಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಎಂಬುದನ್ನು ಬಿಜೆಪಿಯವರು ಒಪ್ಪಿವುದಿಲ್ಲ. ಬಿಜೆಪಿಯವರಿಗೆ ಅಂಬೇಡ್ಕರ್‌ ರೂಪಿಸಿದ ಸಂವಿಧಾನ ಬೇಕಿಲ್ಲ. ಕುವೆಂಪು ಅವರ ವಿಶ್ವಮಾನವ ಸಂದೇಶಗಳೂ ಬೇಕಿಲ್ಲ. ಹಾಗಾಗಿಯೇ ಪಠ್ಯ ಪುಸ್ತಕಗಳಲ್ಲಿ ಬಿಜೆಪಿಯವರ ರಹಸ್ಯ ಕಾರ್ಯಸೂಚಿಗಳು ಕಾಣಿಸಿಕೊಳ್ಳುತ್ತಿವೆ. ವಿವಾದಾತ್ಮಕ ಪಠ್ಯಪುಸ್ತಗಳನ್ನು ಹಿಂತೆಗೆದುಕೊಳ್ಳಬೇಕು. ಈಗಾಗಲೇ ಪಠ್ಯಪುಸ್ತಕ ಮುದ್ರಿಸಲು ಖರ್ಚು ಮಾಡಿರುವ ಹಣದ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ನೈತಿಕಹೊಣೆ ಹೊತ್ತು ರಾಜಿನಾಮೆ ಕೊಡಬೇಕು.ಹೈಕೋರ್ಟ್‌ ನ್ಯಾಯಮೂರ್ತಿಯವರಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Advertisement

ಶಾಂತಿ ಭಂಗ ಕಾರ್ಯ: ಎಸ್‌ಡಿಪಿಐ, ಶ್ರೀರಾಮಸೇನೆ, ಭಜರಂಗದಳ ರಾಜ್ಯದಲ್ಲಿ ಶಾಂತಿಭಂಗ ತರುವ ಕೆಲಸ ಮಾಡುತ್ತಿವೆ. ಎಲ್ಲ ಸಮುದಾಯದವರನ್ನು ಜೊತೆಯಲ್ಲಿರಿಸಿಕೊಳ್ಳುವ ಮನಸ್ಥಿತಿ ಕಾಂಗ್ರೆಸ್‌ ಪಕ್ಷದ್ದು. ಮಸೀದಿ ಒಳಗಡೆ ದೇವದಾಸ್ಥಾನದ ವಿವಾದ ಸೃಷ್ಟಿಸುತ್ತಿರುವುದು ಬಿಜೆಪಿಯ ರಾಜಕೀಯ ತಂತ್ರಗಾರಿಕೆ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್‌ ಮಂಜುನಾಥ್‌, ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಎ. ಗೋಪಾಲಸಾcಮಿ, ಪಕ್ಷದ ಮುಖಂಡರಾದ ಎಚ್‌.ಕೆ. ಮಹೇಶ್‌, ದೇವರಾಜೇಗೌಡ, ಬನವಾಸೆ ರಂಗಸ್ವಾಮಿ, ಬಾಗೂರು ಮಂಜೇಗೌಡ, ಮುನಿಸ್ವಾಮಿ, ಬಿ.ಕೆ. ರಂಗಸ್ವಾಮಿ, ಲಕ್ಷ್ಮಣ್‌, ತಾರಚಂದನ್‌, ಶಂಕರ್‌, ವಿನೋದ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next