Advertisement

ಮರಳು ಸರಳವಾಗಿ ಸಿಗಲು ಕ್ರಮ

06:23 PM Nov 10, 2021 | Team Udayavani |

ಕೊಪ್ಪಳ: ಮರಳು ಗಣಿಗಾರಿಕೆಗಾಗಿ ಹೊಸ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಗ್ರಾಹಕರಿಗೆ ಸರಳವಾಗಿ ಮರಳು ಸಿಗುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಡವರು, ಸಾರ್ವಜನಿಕರು ಮನೆ ಹಾಗೂ ಕಟ್ಟಡ ಕಟ್ಟಿಸಿಕೊಳ್ಳಲು ಸುಲಭವಾಗಿ ಮರಳು ಲಭ್ಯವಾಗುವಂತೆ ಮಾಡಲು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಬೇಕು. ಅಕ್ರಮ ಮರಳು ಸಾಗಾಟದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟ ತಡೆಗಟ್ಟಿ, ಸರ್ಕಾರಕ್ಕೆ ಬರುವ ಆದಾಯ ಹೆಚ್ಚಿಸಿಕೊಳ್ಳಲೂ ಕ್ರಮ ಕೈಗೊಳ್ಳಬೇಕಿದೆ. ಅದರ ಜೊತೆಗೆ ಸಾರ್ವಜನಿಕರಿಗೆ ಮರಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.

ಮರಳು ಗಣಿಗಾರಿಕೆ ಸುಗಮಗೊಳಿಸಲು ಹಾಗೂ ಜನತೆಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ನಮ್ಮ ಇಲಾಖೆಯಿಂದ ಹಲವಾರು ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಇದರಿಂದ ಸುಲಭವಾಗಿ ಮರಳು ಸಿಗುವ ನಿಟ್ಟಿನಲ್ಲಿ ಗ್ರಾಪಂ ಮಟ್ಟದಿಂದಲೇ ಅನುಮತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ವರದಿ ಸಲ್ಲಿಸಬೇಕು. ಗ್ರಾನೈಟ್‌ ಕ್ವಾರಿ ಲೀಸ್‌, ಕ್ರಷರ್‌ಗಳಿಗೆ ಅನುಮತಿ ಹಾಗೂ ನವೀಕರಣಕ್ಕೆ ಸಲ್ಲಿಸಿದ ಅರ್ಜಿಗಳ
ವಿಲೇವಾರಿ ಯಾವುದೇ ಕಾರಣಕ್ಕೆ ವಿಳಂಬವಾಗದಂತೆ ಕಾಲಮಿತಿಯೊಳಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.

ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಗೆ ನೀಡಿದ್ದು, ಅಕ್ರಮ ಮರುಳು ಸಾಗಾಟ ಮಾಡುವ ಸ್ಥಳ ಗುರುತಿಸಿ, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಿಗ, ಪಿಡಿಒಗೆ ಜಬಾಬ್ದಾರಿ ವಹಿಸಬೇಕು. ಆ ಪ್ರದೇಶಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಪ್ರತಿ ತಿಂಗಳು ಸಂಬಂ ಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದರು.

Advertisement

ಈಗಾಗಲೇ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗಿವೆ. ಕೇಂದ್ರಗಳಿಗೆ ದಾಖಲಾಗುವ ಮಕ್ಕಳಿಗೆ ಅಗತ್ಯ ಸೇವೆ ಒದಗಿಸಬೇಕು. ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಇಲಾಖೆಯಿಂದ ಪೂರೈಕೆ ಮಾಡುವ ಪೌಷ್ಟಿಕ ಆಹಾರ ಉತ್ತಮ ಗುಣಮಟ್ಟದಲ್ಲಿರಬೇಕು. ಅಂಗನವಾಡಿ ಕಟ್ಟಡಗಳಿಗೆ ಮಕ್ಕಳನ್ನು ಆಕರ್ಷಿಸುವಂತಹ ಬಣ್ಣಗಳು, ಗೊಡೆ ಬರಹಗಳು ಹಾಗೂ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳ ಮಾನಸಿಕ ಬೆಳವಣಿಗೆ ವಿಭಿನ್ನ ರೀತಿಯ ಬದಲಾವಣೆ ತರುವ ಹಲವಾರು ಕಾರ್ಯಕ್ರಮಗಳನ್ನು ರೂಪಿಸಬೇಕೆಂದರು.

ಇತ್ತೀಚೆಗೆ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದಾಗ ಅಲ್ಲಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದೆ. ಅಲ್ಲಿ ಉತ್ತಮ ಕಟ್ಟಡ, ಕಿಚನ್‌, ಹಾಲ್‌ ಮತ್ತು ಮಕ್ಕಳ ವಿವಿಧ ಆಟಿಕೆ ಸಾಮಾಗ್ರಿಗಳನ್ನು ನೋಡಿ ಇದು ರಾಜ್ಯದಲ್ಲೇ ಮಾದರಿ ಅಂಗನವಾಡಿಯಂತೆ ಕಂಡಿತು. ಅವರು ಸಿಎಸ್‌ಆರ್‌ ಅನುದಾನವನ್ನು ಬಳಸಿಕೊಂಡು ಮಾದರಿ ಅಂಗನವಾಡಿ ಕೇಂದ್ರ ನಿರ್ಮಿಸಿದ್ದು, ಇದು ನಮ್ಮ ಜಿಲ್ಲೆಯಲ್ಲೂ ಯಾಕೆ ಆಗಬಾರದು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಬಸವರಾಜ ದಢೇಸುಗೂರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ರಾಮಪ್ರಸಾದ್‌ ಮನೋಹರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಪ್ರಿಯಂಕಾ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ ವಿಕಾಸ ಕಿಶೋರ್‌, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌, ಎಸ್ಪಿ ಟಿ. ಶ್ರೀಧರ್‌, ಎಡಿಸಿ ಎಂ.ಪಿ. ಮಾರುತಿ, ಉಪ ಅರಣ್ಯ ಸಂರಕ್ಷಣಾಧಿ ಕಾರಿ ಹರ್ಷಕುಮಾರ್‌, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ಕೊಪ್ಪಳ ಹಿರಿಯ ಭೂವಿಜ್ಞಾನಿ ಮುತ್ತಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಸೇರಿದಂತೆ ಇತರರಿದ್ದರು.

ಜಿಲ್ಲೆಯ ಐತಿಹಾಸಿಕ ಸುಪ್ರಸಿದ್ಧ ಕ್ಷೇತ್ರ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗಾಗಿ ಶೀಘ್ರದಲ್ಲೇ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಟೆಂಡರ್‌ ಕರೆದು ಅದರ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸುವ ಮೂಲಕ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಪಂಕಜ್‌ ಕುಮಾರ್‌ ಪಾಂಡೆ,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next