Advertisement

ಸ್ಮಶಾನ ಭೂಮಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿದರೆ ಕ್ರಮ

12:18 PM Dec 22, 2018 | |

ಕಲಬುರಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಒದಗಿಸಲು ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಹೇಳಿದರು. 

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ-ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳು-1995ರ ಅನ್ವಯ ಜಿಲ್ಲಾ ಮಟ್ಟದ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್‌.ಸಿ-ಎಸ್‌.ಟಿ ಜನಾಂಗದವರಿಗೆ ಸ್ಮಶಾನ ಭೂಮಿ ಮಂಜೂರು ಮಾಡಲು ಸೂಕ್ತ ಸರ್ಕಾರಿ ಜಮೀನು ಗುರುತಿಸಬೇಕು. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಸಲು ಕ್ರಮ ವಹಿಸುವುದು ಎಂದರು.
 
ಎಸ್‌.ಸಿ.,ಎಸ್‌.ಟಿ. ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವಾಗ ಸರ್ಕಾರದ ಮಾರ್ಗಸೂಚಿ ಅನ್ವಯ ಪರಿಹಾರ ನೀಡಬೇಕು. ಇತ್ತೀಚೆಗೆ ಸಮಾಜದ ಸ್ವಾಸ್ಥ್ಯಾಕ್ಕೆ ಧಕ್ಕೆಯಾಗುವಂತಹ ಕೆಲ ಗಂಭೀರ ಪ್ರಕರಗಳಲ್ಲಿ ಚಾರ್ಜ್‌ ಶೀಟ್‌ ಆದ ನಂತರವು ಆರೋಪಿತರು ಹಾಗೂ ಸಂತ್ರಸ್ತರು ಪರಸ್ಪರ ಒಪ್ಪಂದ ಮಾಡಿಕೊಂಡು ನ್ಯಾಯ ತೀರ್ಪಿಗೆ ಧಕ್ಕೆಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಶೇಷ ಸರ್ಕಾರಿ ಅಭಿಯೋಜಕರು ನಿಗಾವಹಿಸಬೇಕು ಎಂದರು.

ಅಳಂದ ತಾಲೂಕಿನ ಗೋಳ(ಬಿ) ಗ್ರಾಮದಲ್ಲಿ ಎಸ್‌.ಎಸ್‌.ಟಿ. ಕಾಲೋನಿ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಸಮಿತಿ ಸದಸ್ಯ ಡಾ| ಜಿ. ಗೋಪಾಲರಾವ್‌ ಸಭೆ ಗಮನಕ್ಕೆ ತಂದಾಗ, ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಶನಿವಾರ ಮುಂಜಾನೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ. ಸತೀಶ ಮಾತನಾಡಿ, ಡಿ. 2017 ರಿಂದ ನವೆಂಬರ್‌ 2018ರ ವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 235 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ನಾಲ್ಕು ವಿಲೇವಾರಿಯಾಗಿವೆ. ಎರಡು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದ್ದು, ಇನ್ನು 231 ಪ್ರಕರಣಗಳು ಬಾಕಿ ಇವೆ. 2018-19ನೇ ಸಾಲಿನಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಕೋರಿ ಬಂದ 83 ಪ್ರಕರಣಗಳಲ್ಲಿ 62 ಪ್ರಕರಣಗಳನ್ನು ವಿಲೇವಾರಿ ಮಾಡಿ ಸಂತ್ರಸ್ತರ ಕುಟುಂಬಸ್ಥರಿಗೆ 1.17 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

ಪ್ರಸಕ್ತ ಸಾಲಿಗೆ ಅಸ್ಪೃಶ್ಯತಾ ಸಪ್ತಾಹ ಆಚರಣೆಗೆ ಜಿಲ್ಲೆಗೆ ಐದು ಲಕ್ಷ ರೂ. ಮಂಜೂರು ಮಾಡಿದ್ದು, ಇದರಲ್ಲಿ ಹೆದ್ದಾರಿ ಫಲಕಗಳ ಮೇಲೆ ದೌರ್ಜನ್ಯ ಪ್ರಕರಣ ಸಂಬಂಧ ಅರಿವಿನ ಮಾಹಿತಿ ಪ್ರದರ್ಶನ, ಕಾರ್ಯಾಗಾರ, ಕರಪತ್ರಗಳನ್ನು ಮುದ್ರಿಸಿ ಸೂಕ್ತ ಪ್ರಚಾರದ ವ್ಯವಸ್ಥೆ ಮಾಡಲಾಗುವುದು ಎಂದು ಸಭೆಯ ಗಮನಕ್ಕೆ ತಂದರು. 

Advertisement

ಸಮಿತಿ ಸದಸ್ಯರಾದ ಮಲ್ಲಪ್ಪ ಹೊಸಮನಿ, ಚೆನ್ನಪ್ಪ ಸುರಪೂರಕರ್‌, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತ ರೇವಣಸಿದ್ದಪ್ಪ, ಸರ್ಕಾರಿ ಪದವಿ ಮಹಿಳಾ ವಿದ್ಯಾಲಯದ ಉಪನ್ಯಾಸಕ ರಾಮಲಿಂಗ ಎನ್‌.ಭೋಸಲೆ, ವಿಶೇಷ ಸರ್ಕಾರಿ ಅಭಿಯೋಜಕ ಸಫಿರ ಅಹ್ಮದ, ಡಿಎಸ್ಪಿ ಪಾಂಡುರಂಗಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next