ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಾಲ್ಕು ವರ್ಷಗಳ ಸಾಧನೆಯನ್ನು ಮನೆ-ಮನೆಗೆ ತಲುಪಿಸುವ ಕಾರ್ಯವನ್ನು ರಾಜ್ಯದ ಸುಮಾರು 58 ಸಾವಿರ ಬೂತ್ ಕಮಿಟಿಗಳು ಮಾಡಲಿವೆ. ಪ್ರತಿ 15 ದಿನಕ್ಕೊಮ್ಮೆ ಸರಕಾರದ ಸಾಧನೆಗಳ ಮಾಹಿತಿಯ ಕರಪತ್ರಗಳನ್ನು ಜನರಿಗೆ ತಲುಪಿಸಲಾಗುತ್ತದೆ ಎಂದು ಐಎಸಿಸಿ ಕಾರ್ಯದರ್ಶಿ ಮಾಣಿಕ್ಯಂ ಟ್ಯಾಗೋರ್ ಹೇಳಿದರು.
ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ವಿದ್ಯಾನಗರ ಹಾಗೂ ಉಣಕಲ್ಲ ಬ್ಲಾಕ್ ಮಟ್ಟದ ಬೂತ್ ಕಮಿಟಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರತಿ ಬೂತ್ ಮಟ್ಟದಲ್ಲಿ 12 ಜನರ ತಂಡ ರಚಿಸಲಾಗುತ್ತಿದ್ದು, ಈ ತಂಡ ತನ್ನ ವ್ಯಾಪ್ತಿಯ ಸುಮಾರು 120 ಮನೆಗಳಿಗೆ ಭೇಟಿ ನೀಡಿ ರಾಜ್ಯ ಸರಕಾರದ ಸಾಧನೆಗಳನ್ನು ಮನದಟ್ಟು ಮಾಡಬೇಕಿದೆ. ಪ್ರತಿ 15 ದಿನಕ್ಕೊಮ್ಮೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬೂತ್ ಕಮಿಟಿಗಳ ಸಭೆ ಕರೆದು ಚರ್ಚಿಸಬೇಕಿದೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಲಿ ಬೂತ್ ಕಮಿಟಿಗಳವರು ಮಾತ್ರ ಜನರ ಮನೆಗಳಿಗೆ ರಾಜ್ಯ ಸರಕಾರದ ಸಾಧನೆ ಸಂದೇಶ ತೆಗೆದುಕೊಂಡು ಹೋಗಿ ಅವರನ್ನು ಪಕ್ಷದ ಸದಸ್ಯರನ್ನಾಗಿಸಬೇಕು. ತಮ್ಮ ತಮ್ಮ ಬೂತ್‌ಗಳಲ್ಲಿ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ತರುವಂತೆ ನೋಡಿಕೊಳ್ಳಬೇಕು.
ಅತಿ ಹೆಚ್ಚು ಮತ ದೊರಕಿಸುವ ಬೂತ್ ಕಮಿಟಿ ಅಧ್ಯಕ್ಷರನ್ನು ಪಕ್ಷದಿಂದ ಸನ್ಮಾನಿಸಲಾಗುವುದು ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಅವರು ಮೂರು ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿನ ಸುಮಾರು 200 ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆ ಕಾರ್ಯ ಕೈಗೊಳ್ಳಲಿದಾರೆ ಎಂದರು.
ಈ ಬಾರಿ ಶೆಟ್ಟರ ರನ್ ಔಟ್ ಮಾಡಿ..
ಬೂತ್ ಕಮಿಟಿಗಳು ಸಕ್ರಿಯವಾದರೆ ಗೆಲುವು ನಮ್ಮದಾಗಲಿದೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಪಕ್ಷದ ಅಭ್ಯರ್ಥಿ ಗೆದ್ದಿಲ್ಲ. ಈ ಬಾರಿ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪರಿಶ್ರಮ ತೋರುವ ಮೂಲಕ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಅವರನ್ನು ರನ್‌ಔಟ್ ಮಾಡಿ ಎಂದು ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಂ ಟ್ಯಾಗೋರ್ ಕಾರ್ಯಕರ್ತರಿಗೆ ಕರೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಶೆಟ್ಟರ ಗೆಲ್ಲದಂತೆ ಬೂತ್ ಕಮಿಟಿಗಳು ಕಾರ್ಯ ನಿರ್ವಹಿಸಬೇಕು. ನೀವು ಸನ್ನದ್ಧರಾದರೆ ಶೆಟ್ಟರ ಅವರ ವಿಕೆಟ್ ಕೀಳುವುದು ದೊಡ್ಡದಲ್ಲ ಎಂದರು.