Advertisement

ಶಂಕಿತ ಉಗ್ರನಿಗೆ ನಕಲಿ ಶ್ಯೂರಿಟಿ ನೀಡುತ್ತಿದ್ದ ಆರೋಪಿ ಬಂಧನ

02:28 PM Oct 21, 2022 | Team Udayavani |

ಬೆಂಗಳೂರು: ನಿಷೇಧಿತ ಸಿಮಿ ಹಾಗೂ ಅಲ್‌ -ಹಿಂದ್‌ ಉಗ್ರ ಸಂಘಟನೆ ಜತೆ ಸಂಪರ್ಕ ಹಾಗೂ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಆರೋಪ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಆರೋಪಿಗೆ ನಕಲಿ ಶ್ಯೂರಿಟಿ ನೀಡಲು ಬಿಡುಗಡೆ ಯತ್ನಿಸಿದ ಆರೋಪಿಯನ್ನು ಕೋರ್ಟ್‌ ವಶಕ್ಕೆ ಪಡೆಯುವಂತೆ ಸೂಚಿಸಿದ್ದು, ಆರೋಪಿಯನ್ನು ಹಲಸೂರುಗೇಟ್‌ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೋಣನಕುಂಟೆ ನಿವಾಸಿ ಕೆ.ಜಿ. ನಾಗಭೂಷಣ್‌ ನನ್ನು ವಶಕ್ಕೆ ಪಡೆಯಲು ಕೋರ್ಟ್‌ ಸೂಚಿಸಿದೆ. ಆರೋಪಿ 2020ರಲ್ಲಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ 11ನೇ ಆರೋಪಿ ಸಲೀಂ ಖಾನ್‌ ಆಲಿಯಾಸ್‌ ಕೋಲಾರ ಸಲೀಂಗೆ ನಕಲಿ ಶ್ಯೂರಿಟಿ ನೀಡಿದ್ದ ಎಂದು ಮೂಲಗಳು ತಿಳಿಸಿವೆ.

ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದಲ್ಲದೆ, ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ತಮಿಳುನಾಡಿನ ಕ್ಯೂಬ್ರ್ಯಾಚ್‌ ಪೊಲೀಸ್‌
ಮತ್ತು ಸ್ಥಳೀಯರ ಪೊಲೀಸರ ಕಾರ್ಯಾಚರಣೆಯಲ್ಲಿ ಸುಮಾರು 14ಕ್ಕೂ ಅಧಿಕ ಮಂದಿ ಶಂಕಿತರನ್ನು ಬಂಧಿಸಲಾಗಿತ್ತು. ಈ ವೇಳೆ ಕೋಲಾರದ ರಹಮತ್‌ ನಗರ ನಿವಾಸಿ ಸಲೀಂ ಖಾನ್‌ನನ್ನು ಬಂಧಿಸಲಾಗಿತ್ತು. ಇತ್ತೀಚೆಗೆ ಈತನಿಗೆ ಕೋರ್ಟ್‌ ಈತನಿಗೆ ಷರತ್ತುಬದ್ಧ ಜಾಮೀನು ಮಂಜೂರಿಗೆ ಅವಕಾಶ ನೀಡಿತ್ತು.

ಆಗ ಆರೋಪಿ ನಾಗ ಭೂಷಣ್‌ ಮುಳಬಾಗಿಲು ತಾಲೂಕಿನ ಸರ್ವೆ ನಂ 158/3ರ 0.13 ಗುಂಟೆಗೆ ಸಂಬಂಧಿಸಿದ ಆರ್‌ಟಿಸಿ, ಆಧಾರ್‌ ಕಾರ್ಡ್‌ ಹಾಗೂ ಇತರೆ ದಾಖಲೆಗಳನ್ನು ಲಗತ್ತಿಸಿ ಸಲೀಂ ಖಾನ್‌ಗೆ ಶ್ಯೂರಿಟಿ ನೀಡಲು ಬಂದಿದ್ದ. ಈ ನಿವೇಶನದ ಮಾರು ಕಟ್ಟೆ ಮೌಲ್ಯ ಅಂದಾಜು 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ದಾಖಲೆಗಳ ಪರಿಶೀಲನೆ ವೇಳೆ ನಕಲಿ ಎಂಬುದು ಗೊತ್ತಾಗಿತ್ತು. ಹೀಗಾಗಿ ಕೋರ್ಟ್‌ ಎಚ್ಚರಿಕೆ ನೀಡಿತ್ತು. ಅಲ್ಲದೆ, ಆರೋಪಿ ಇದೇ ರೀತಿ ಸುಮಾರು ನಾಲ್ಕು ಬಾರಿ ಕೋರ್ಟ್‌ಗೆ ವಂಚಿಸಲು ಯತ್ನಿಸಿದ್ದ. ಆಗ ಕಠಿಣವಾದ ಶಿಕ್ಷೆ ನೀಡವುದಾಗಿ ಎಚ್ಚರಿಕೆ ನೀಡಿತ್ತು. ಅಲ್ಲದೆ, ಈ ದಾಖಲೆಗಳ ಬಗ್ಗೆ ಮಾಹಿತಿ ನೀಡುವಂತೆ ಖುದ್ದು ಕೋರ್ಟ್‌ ಮುಳಬಾಗಿಲು ಉಪನೋಂದಣಾಧಿಕಾರಿಗಳಿಗೆ ಸೂಚಿಸಿತ್ತು.

Advertisement

ಹೀಗಾಗಿ ಸಬ್‌ರಿಜಿಸ್ಟ್ರಾರ್‌ ಪರಿಶೀಲಿಸಿದಾಗ, ಆರೋಪಿ ಇದೇ ದಾಖಲೆಗಳನ್ನು ಬೇರೆ ಕೋರ್ಟ್‌ಗಳಿಗೆ ಕೆಲ ಪ್ರಕರಣಗಳ ಆರೋಪಿ ಗಳಿಗೆ ಜಾಮೀನು ನೀಡಲು ಸಲ್ಲಿಸಿರುವುದು ಪತ್ತೆಯಾ ಗಿತ್ತು. ಆದರೂ ಐದನೇ ಬಾರಿಗೆ ಶ್ಯೂರಿಟಿ ನೀಡಲು ಮುಂದಾಗಿದ್ದ. ಗುರುವಾರ ವಿಚಾರಣೆ ಹಾಜರಾಗಿದ್ದ ಆರೋಪಿ ನಾಗಭೂಷಣ್‌ ವಿರುದ್ಧ ಕಾನೂನುಕ್ರಮಕೈಗೊಂಡು ವಶಕ್ಕೆ ಪಡೆಯುವಂತೆ ಕೋರ್ಟ್‌ ಸೂಚನೆ ನೀಡಿತ್ತು.ಆರೋಪಿಯನ್ನು ಹಲಸೂರು ಗೇಟ್‌ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಎನ್‌ಐಎ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್‌ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next