ಪಡುಬಿದ್ರಿ: ಕಳೆದ 27 ವರ್ಷಗಳಿಂದ ನ್ಯಾಯಾಲಯದಲ್ಲಿನ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಸಂಸಾರದೊಂದಿಗೆ ವಾಸವಿದ್ದ ಆರೋಪಿ ಕುಂದಾಪುರದ ಜಮಾಲ್‌ನನ್ನು ಬೆಂಗಳೂರಿನಲ್ಲಿ ಪಡುಬಿದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಂದು ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಮೇಲೆ ಮಣಿಪಾಲ ಹಾಗೂ ಉಡುಪಿಯ ಲಾಡ್ಜ್ ಗಳಲ್ಲಿ ಅತ್ಯಾಚಾರ ನಡೆಸಿದ್ದ ಪ್ರಕರಣದ ಆರೋಪಿ ಕುಂದಾಪುರದ ಜಮಾಲ್‌ನನ್ನು ಪಡುಬಿದ್ರಿ ಠಾಣೆಯ ಎಎಸ್‌ಐ ರಾಜೇಶ್, ಎಚ್‌ಸಿ ರಾಜೇಶ್ ಹೆರ್ಗ, ಪಿಸಿ ಸಂದೇಶ್ ಅವರ ತಂಡ ಬಂಧಿಸಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಪಡುಬಿದ್ರಿ ಠಾಣೆ ವ್ಯಾಪ್ತಿಯ ಉಚ್ಚಿಲದ ನಿವಾಸಿ ನಸೀಮಾ ಬಾನು ಅವರ ಮನೆಯಲ್ಲಿ ಕೆಲಸಕ್ಕಿದ್ದ ಬಾಲಕಿ, ಮನೆಯಲ್ಲಿ ಹೇಳದೆ ಹೋಗಿದ್ದ ಬಗ್ಗೆ 1997ರ ಆ. 6ರಂದು ನಸೀಮಾ ಪೊಲೀಸ್ ದೂರು ನೀಡಿದ್ದರು. ಹುಡುಗಿಯನ್ನು ಪುಸಲಾಯಿಸಿದ್ದ ಜಮಾಲ್, ಮಣಿಪಾಲದ ಲಾಡ್ಜ್ ಒಂದರಲ್ಲಿ ಸುಮಾರು 12 ದಿನಗಳ ಕಾಲ ದಿಗ್ಬಂಧನದಲ್ಲಿರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಆಕೆಯನ್ನು ಊರಿಗೆ ಕಳುಹಿಸುವ ನೆಪದಲ್ಲಿ ಉಡುಪಿ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದು ಉಡುಪಿಯಲ್ಲೂ ಒಂದು ಲಾಡ್ಜ್ ನಲ್ಲಿ ರೂಂ ಮಾಡಿದ್ದ.
ಲಾಡ್ಜ್ ನವರು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಬಾಲಕಿಯನ್ನು ವಿಚಾರಿಸಿದಾಗ ನಡೆದದ್ದನ್ನೆಲ್ಲಾ ವಿವರಿಸಿದ್ದಳು. ಅದರಂತೆ ಆರೋಪಿ ಜಮಾಲ್‌ನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಜಮಾಲ್‌ನನ್ನು ಅಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ಆರೋಪಿ ಜಾಮೀನು ಪಡೆದಿದ್ದ. ಅನಂತರ ಸುಮಾರು 27 ವರ್ಷಗಳಿಂದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ಕೋರ್ಟ್ ವಾರಂಟ್ ಹೊರಡಿಸಿತ್ತು.