Advertisement
ಹೀಗೆ ಒಂದು ರೂಪಾಯಿ ನಡೆಸಿದ ಪವಾಡದ ಕತೆ ನನ್ನದೊಂದಿದೆ. ಮುದ್ರಣ ಲೋಪದಿಂದ ಚಲಾವಣೆಗೆ ಬಂದು ವಿಶೇಷತೆ ಪಡೆದ ಒಂದು ರೂಪಾಯಿ ನೋಟು ನನ್ನ ಕೈ ಸೇರಿತ್ತು. ಇದಕ್ಕೆ ಸಂಗ್ರಹಕಾರರ ಮಟ್ಟದಲ್ಲಿ ಅಪಾರ ಮೌಲ್ಯವಿದೆ. ಆ ವೇಳೆ ನನಗೆ ನೆನಪಿಗೆ ಬಂದದ್ದು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯ. ಈ ನೋಟನ್ನು ಅಂಚೆ ಮೂಲಕ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಹೆಸರಲ್ಲೇ ಕಳುಹಿಸಿ ಬಿಟ್ಟೆ. ಆಶ್ಚರ್ಯ ! ವಾರದಲ್ಲೇ ಈ ನೋಟು ಸಿಕ್ಕಿದ ಬಗ್ಗೆ ಮರು ಪತ್ರ. ಜತೆಗೆ “ಅದನ್ನು ನಮ್ಮ ಸಂಗ್ರಹಾಲಯದಲ್ಲಿ ಇಡಲಾಗುವುದು. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ’. ಹೆಗ್ಗಡೆ ಅವರ ಸಹಿ ಇರುವ ಕನ್ನಡದಲ್ಲಿ ಟೈಪ್ ಮಾಡಿದ 28-11-1993 ರ ಈ ಪವಿತ್ರ ಪತ್ರ ನನ್ನನ್ನು ರೋಮಾಂಚನಗೊಳಿಸಿತು. ಒಂದು ರೂಪಾಯಿ ನೋಟಿಗೆ ಗೌರವಾನ್ವಿತ ಶ್ರೇಷ್ಠರ ಪ್ರಶಂಸೆ ಪಡೆದಿರುವ ಈ ಪತ್ರದ ನೆನಪಾದದ್ದು ಹರೀಶ್ ಸಾಳ್ವೆ ಅವರ ಒಂದು ರೂಪಾಯಿ ದರದ ವಕಾಲತ್ತು ನಡೆಸಿದ ಸುದ್ದಿ ಓದಿ.
ಗೋಲವನ್ನು ಪರಿಚಯಿಸಿದ ಬಳಿಕ ಅವರು ವಿಷಯ ತಿಳಿಸಿದರು. ವಿದೇಶೀಯನೊಬ್ಬ ಆ ಗೋಲವನ್ನು ಇವರಿಗೆ ನೀಡಿದ್ದ. ಇವರ ಸಂಗ್ರಹದಲ್ಲಿದ್ದ ಇನ್ಯಾವುದೋ ವಸ್ತುವಿಗಾಗಿ ದೊರೆತ ವಿಕ್ರಯದ ಬಾಬ್ತು ಇದು. ವಿಚಿತ್ರ ಗೋಲವನ್ನು ಅಂದು ಇವರ ಮಿತ್ರರಾಗಿದ್ದ, ಉನ್ನತ ಸ್ಥಾನದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಕಂಡು 4 ಲಕ್ಷ ರೂಪಾಯಿ ನೀಡಿ ಖರೀದಿಸಲೂ ಬಯಸಿದ್ದರು. ಅಧಿಕಾರಿ ಅಂದು ತಿಳಿಸಿದಂತೆ ವಿದೇಶಿ ಮಾರುಕಟ್ಟೆಯಲ್ಲಿ ಇದಕ್ಕೆ 15 ಲಕ್ಷ ರೂ. ಬೆಲೆ ಇದೆ. ಸುಮಾರು ವರ್ಷಗಳಿಂದ ಇವರ ವಶವಿದ್ದ ಈ ಗೋಲವನ್ನು ವೀಕ್ಷಿಸಿದವರು ಕಮ್ಮಿ. ಇದು ವಸ್ತು ಸಂಗ್ರಹಾಲಯದಲ್ಲಿ ಇದ್ದರೆ ಅನೇಕರು ಕಾಣಬಹುದಲ್ಲ. ಹೀಗಾಗಿ ಅವರು ಒಂದು ತೀರ್ಮಾನಕ್ಕೆ ಬಂದಿದ್ದರು. ಈ ಗೋಲವನ್ನು ಪುಕ್ಕಟೆಯಾಗಿ ವಸ್ತು ಸಂಗ್ರಹಾಲಯಕ್ಕೆ ನೀಡುವುದು. ಅದನ್ನು ಚಿತ್ರಾವಳಿಯಲ್ಲಿ ಪ್ರಕಟಿಸಲು ನನಗೆ ಬುಲಾವ್ ಮಾಡಿದ್ದರು.
Related Articles
Advertisement
ಅಂದು ಹೆಗ್ಗೆಡೆ ಅವರು ಹೇಳಿದ್ದರು. “ಕಲೆಗೆ ಬೆಲೆ ಕಟ್ಟಲಾಗದು. ವಿದೇಶದಲ್ಲಿ ಇದಕ್ಕೆ ಲಕ್ಷಾಂತರ ರೂಪಾಯಿ ಇದೆ’ ಎಂದರೆ ನಾವು ಕಲೆಗೆ ಬೆಲೆ ಕಟ್ಟಿದಂತಾಗುತ್ತದೆ. ಅದು ಬಿಟ್ಟು ಭಾರತೀಯ ಕಲೆಯು ಯಾವತ್ತೂ ಇಲ್ಲೇ ಇದ್ದು ಅದನ್ನು ಕಂಡು ಅನೇಕರು ಪುಳಕಿತರಾಗಬೇಕು. ಈ ಗೋಲ ಇಲ್ಲಿ ಸೇರಿದ್ದು ನಿಜಕ್ಕೂ ಕಲೆಗೆ ದೊರೆತ ಗೌರವ ಎನಿಸುತ್ತದೆ. ಇಂತಹದ್ದೇ ಇನ್ನೊಂದು ಗೋಲ ಲಂಡನ್ ಮ್ಯೂಸಿಯಂನಲ್ಲಿದೆ. ಅದು ಜೋತು ಹಾಕುವ ಮಾದರಿಯದ್ದು ಎಂದೂ ಮಾಹಿತಿ ನೀಡಿದ್ದರು. ಈ ಸಮಾರಂಭದ ವರದಿ ಅಂದು ಇಂಗ್ಲಿಷ್, ಕನ್ನಡ, ಮಲಯಾಳಂ ಪತ್ರಿಕೆಗಳಲ್ಲಿ ಸಾಕಷ್ಟು ಪ್ರಾಮುಖ್ಯತೆ ಪಡೆದು ಪ್ರಕಟವಾಗಿತ್ತು.
ಧರ್ಮಸ್ಥಳದ ವಸ್ತು ಸಂಗ್ರಹಾಲಯದ ಮಹತ್ವ ಅಂದು ನಾನು ಮನಗಂಡಿದ್ದೆ. ಹೆಗ್ಗಡೆ ಅವರ ಜತೆ ಆ ಸಮಾರಂಭದ ವೇಳೆ ಮಾತನಾಡಿದ್ದು ಏಕೋ ನನಗೆ ದೊರೆತ ವಿಶೇಷ ಒಂದು ರೂಪಾಯಿ ನೋಟು ಅವರಿಗೆ ನೇರ ಕಳುಹಿಸಿ ಕೊಡಲು ಪ್ರೇರೇಪಿಸಿತ್ತು. ಆ ನೋಟು ಇದೀಗ ವಸ್ತು ಸಂಗ್ರಹಾಲಯದಲ್ಲಿ ಅನೇಕರ ದೃಷ್ಟಿಗೆ ಬೀಳುತ್ತಿದೆ.
ಹೆಗ್ಗಡೆ ಅವರು ಬರೆದ ಪತ್ರವೂ ನನ್ನ ಕಡತದಲ್ಲಿ ಅಷ್ಟೇ ಮಹತ್ವದ ಸ್ಥಾನವನ್ನೂ ಪಡೆದಿದೆ. ನೀಡಿದ್ದು ಒಂದು ರೂಪಾಯಿ ದೊರೆತದ್ದು ಮೌಲ್ಯ ಕಟ್ಟಲಾಗದ ಪ್ರತಿಷ್ಠೆ. ಈ ಧನ್ಯತಾಭಾವ ನನ್ನಲ್ಲಿ ಈಗಲೂ ಇದೆ.
– ರಾಮದಾಸ್ ಕಾಸರಗೋಡು