Advertisement

ಅಪಘಾತಕ್ಕೆ ಅಜಾಗರೂಕತೆಯೇ ಕಾರಣ

06:12 AM Feb 05, 2019 | Team Udayavani |

ದಾವಣಗೆರೆ: ಚಾಲಕರ ಅಜಾಗರೂಕತೆಯಿಂದಲೇ ರಸ್ತೆ ಅಪಘಾತಗಳಲ್ಲಿ ಹೆಚ್ಚು ಸಾವು ಸಂಭವಿಸುತ್ತಿದ್ದು, ಸಂಚಾರಿ ನಿಯಮಗಳ ಪಾಲನೆ ಅತ್ಯಗತ್ಯ ಎಂದು ಎಂದು ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ್‌ ಪ್ರತಿಪಾದಿಸಿದ್ದಾರೆ.

Advertisement

ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಆರ್‌ಟಿಒ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2016 ರಿಂದ 2018ರ ವರೆಗೆ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ ನಮ್ಮ ಇಲಾಖೆ ಅಧಿಕೃತ ಅಂಕಿ ಅಂಶಗಳ ಪ್ರಕಾರ 824 ಜನರು ಮೃತಪಟ್ಟಿದ್ದಾರೆ. ಇದಕ್ಕೆ ಚಾಲಕರ ಅಜಾಗರೂಕತೆಯೇ ಮೂಲ ಕಾರಣ ಎಂದರು.

ಜಿಲ್ಲೆಯಲ್ಲಿ 2016 ರಲ್ಲಿ 895, 2017ರಲ್ಲಿ 897 ಹಾಗೂ 2018ರಲ್ಲಿ 853 ಅಪಘಾತ ಪ್ರಕರಣ ದಾಖಲಾಗಿವೆ. ಸರಾಸರಿ ವರ್ಷಕ್ಕೆ 1500 ಅಪಘಾತ ಪ್ರಕರಣಗಳು ದಾಖಲಾಗುತ್ತಿವೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಈ ಅಪಘಾತ ತಡೆಯಲು ಸಾಧ್ಯವಿಲ್ಲ. ಇದಕ್ಕೆ ರಸ್ತೆ ಸಂಚಾರ ನಿಯಮಗಳ ಪಾಲನೆ ಮತ್ತು ಜಾಗರೂಕತೆಯೇ ಮದ್ದು ಎಂದು ಸಲಹೆ ನೀಡಿದರು.

18 ವರ್ಷದೊಳಗಿನ ಮಕ್ಕಳು, ಡಿಎಲ್‌ ಹೊಂದಿಲ್ಲದದವರಿಗೆ ವಾಹನ ಚಲಾಯಿಸಲು ನೀಡಬಾರದು ಎಂಬ ನಿಯಮವಿದ್ದರೂ ಪೋಷಕರು, ಮಾಲೀಕರ ಅಸಡ್ಡೆಯಿಂದ ಮಕ್ಕಳು ಬಲಿಯಾಗುತ್ತಿದ್ದಾರೆ. ರಸ್ತೆಯಲ್ಲಿ ವೇಗದ ಮಿತಿ, ರಸ್ತೆ ತಿರುವುಗಳಲ್ಲಿ ಓವರ್‌ಟೇಕಿಂಗ್‌, ರಸ್ತೆ ಸಂಚಾರಿ ಫಲಕ ಗಮನಿಸಬೇಕಿದೆ. ವಾಹನ ಚಾಲನೆ ವೇಳೆ ಹೆಲ್ಮೆಟ್ ಬಳಕೆ, ಸೀಟ್ ಬೆಲ್ಟ್ ಧರಿಸುವುದು, ವೇಗದ ಮಿತಿ ಕುರಿತು ತಮ್ಮ ಪೋಷಕರಿಗೆ ಜಾಗೃತಿ ಮೂಡಿಸಬೇಕು. ಶಾಲಾ ಮಕ್ಕಳಿಗೆ ರಸ್ತೆ ಸಂಚಾರಿ ನಿಯಮಗಳ ಕುರಿತು ಮುಂದಿನ ದಿನಗಳಲ್ಲಿ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕಿದೆ ಎಂದು ಆಶಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಲಕ್ಷೀಕಾಂತ್‌ ಬಿ. ನಲವಾರ್‌ ಮಾತನಾಡಿ, ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಮೂಲ ಉದ್ದೇಶ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವುದಾಗಿದೆ. ದೇಶದಲ್ಲಿ ಪ್ರತಿವರ್ಷ 5 ಲಕ್ಷ ಅಪಘಾತ ಸಂಭವಿಸುತ್ತಿವೆ. ಅದರಲ್ಲಿ 1 ಲಕ್ಷಕಿಂತ ಹೆಚ್ಚು ಜನರು ಮರಣ ಹೊಂದುತ್ತಿದ್ದಾರೆ ಎಂದರು.

Advertisement

ದೇಶವ್ಯಾಪಿ ರಸ್ತೆ ಸುರಕ್ಷತೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ಪ್ರತಿವರ್ಷ ಶೇ.10ರಷ್ಟು ರಸ್ತೆ ಅಪಘಾತ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಒಟ್ಟಾರೆ ಅಪಘಾತ ಸಂಭವಿಸುವುದು ಶೇ. 98ರಷ್ಟು ಚಾಲಕರ ಅಜಾಗರೂಕತೆಯಿಂದಲೇ ಎಂಬುದು ಸಾಬೀತಾಗಿದೆ. ಉಳಿದ ಶೇ.2ರಷ್ಟು ಮಾತ್ರ ವಾಹನ ದೋಷಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಫುಲ್ಲಾ ಮಾತನಾಡಿ, ಪ್ರಸ್ತುತ ಈ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿರುವುದಕ್ಕೆ ಜಾಗೃತಿ ಅಭಾವವೇ ಕಾರಣ. ಮಕ್ಕಳು, ಪೋಷಕರು ರಸ್ತೆ ನಿಯಮ ಉಲ್ಲಂಘಿಸಿದಾಗ ಅವರಿಗೆ ಅರ್ಥವಾಗುವ ರೀತಿ ತಿಳಿಹೇಳಬೇಕು. ರಾತ್ರಿ 11ರ ನಂತರ ವಾಹನ ಚಲಾವಣೆ ಮಾಡದಿರುವುದು ಒಳಿತು ಎಂದು ಹೇಳಿದರು.

ಎಸ್‌ಬಿಎಸ್‌ ನಗರದ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜ್ಞಾನೇಶ್ವರ್‌ ಮಾತನಾಡಿ, ಇತರೆ ರಾಷ್ಟ್ರಗಳಂತೆ ನಮ್ಮ ದೇಶದಲ್ಲೂ ಪ್ರತಿಯೊಬ್ಬರೂ ರಸ್ತೆ ನಿಯಮ ಪಾಲಿಸಬೇಕು. ಶಾಲಾ ಮಕ್ಕಳು ರಸ್ತೆ ನಿಯಮದಂತೆ ರಸ್ತೆ ದಾಟಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ರಸ್ತೆ ನಿಯಮ ತಿಳಿಸಬೇಕು ಎಂದು ಹೇಳಿದರು. ಮೋಟಾರ್‌ ವಾಹನ ನಿರೀಕ್ಷಕ ಮಲ್ಲೇಶಪ್ಪ, ಇತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next