Advertisement

11ನೇ ಮಹಾ ಕುಂಭಮೇಳಕ್ಕೆ ತಿರುಮಕೂಡಲು ಸಜ್ಜು

07:21 AM Feb 10, 2019 | Team Udayavani |

ಮೈಸೂರು: ಕಾವೇರಿ, ಕಪಿಲ ಮತ್ತು ಗುಪ್ತಗಾಮಿನಿಯಾಗಿ ಹರಿಯುವ ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮವಾದ ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಫೆ.11ರಿಂದ ಮೂರು ದಿನಗಳ ಕಾಲ ನಡೆಯಲಿರುವ ಹನ್ನೊಂದನೇ ಮಹಾ ಕುಂಭಮೇಳಕ್ಕೆ ಭರದ ಸಿದ್ಧತೆ ನಡೆದಿದೆ.

Advertisement

ಉತ್ತರ ಭಾರತದ ಪ್ರಯಾಗ, ಹರಿದ್ವಾರ, ನಾಸಿಕ, ಉಜ್ಜಯಿನಿಗಳಂತಹ ಸಂಗಮ ಕ್ಷೇತ್ರಗಳಲ್ಲಿ ಆಚರಣೆ ಯಲ್ಲಿರುವ ಮಹಾ ಕುಂಭಮೇಳಗಳಲ್ಲಿ ಕೋಟ್ಯಂತರ ಮಂದಿ ಶ್ರದ್ಧಾಭಕ್ತಿಗಳಿಂದ ಪುಣ್ಯಸ್ನಾನ ಮಾಡಿ ಧನ್ಯರಾಗುತ್ತಿ ದ್ದರು. ಈ ಸೌಭಾಗ್ಯದಿಂದ ದಕ್ಷಿಣ ಭಾರತದ ಭಕ್ತರು ವಂಚಿತರಾಗುತ್ತಿದ್ದುದನ್ನು ಮನಗಂಡ ಕೈಲಾಸಾಶ್ರಮದ ತಿರುಚ್ಚಿ ಸ್ವಾಮೀಜಿ,

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಶ್ರೀಕ್ಷೇತ್ರದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಓಂಕಾರ ಆಶ್ರಮದ ಶಿವಪುರಿ ಸ್ವಾಮೀಜಿಗಳು ಪವಿತ್ರ ನದಿಗಳ ಸಂಗಮವಾದ ತಿರುಮಕೂಡಲಿನಲ್ಲಿ ಕುಂಭಮೇಳ ಆಯೋಜಿಸಲು ತೀರ್ಮಾನಿಸಿದರು. ಅದರೊಂದಿಗೆ 1989ರಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲೂ ಕುಂಭಮೇಳ ಆರಂಭವಾಯಿತು.

ತಿರುಮಕೂಡಲಿನಲ್ಲಿ ಪ್ರಾಚೀನಕಾಲದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನವಿದೆ, ಅಗಸ್ತ್ಯಮುನಿಗಳು ತಾವೇ ಮರಳಿನ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದ ಅಗಸೆಶ್ವರಸ್ವಾಮಿ, ಹನುಮಂತೇಶ್ವರ ಸನ್ನಿಧಿಗಳು ವಿರಾಜಮಾನವಾಗಿವೆ.

ಈ ಬಾರಿ 11ನೇ ಕುಂಭಮೇಳಕ್ಕೆ ಭರದ ಸಿದ್ಧತೆ ನಡೆದಿದ್ದು, ಫೆ.17ರಂದು ಬೆಳಗ್ಗೆ 6ಗಂಟೆಗೆ ಮಾಘ ಶುದ್ಧ ತ್ರಯೋದಶೀ ಪುಷ್ಯ ನಕ್ಷತ್ರ ಶ್ರೀ ಅಗಸೆöೕಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ರಾಷ್ಟ್ರಾಶೀರ್ವಾದ.

Advertisement

ಸಂಜೆ 4ಕ್ಕೆ ಅಗ್ರತೀರ್ಥ ಸಂಗ್ರಹ ಸಮೇತ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮಗಳು ನಡೆಯಲಿವೆ. 18ರಂದು ಬೆಳಗ್ಗೆ 6ಕ್ಕೆ ಮಾಘಶುದ್ಧ ಚತುರ್ದಶೀ ಆಶ್ಲೇಷ ನಕ್ಷತ್ರ, ಪುಣ್ಯಾಹ, ನವಗ್ರಹಪೂಜೆ, ಜಪ, ನವಗ್ರಹ ಹೋಮ, ಪೂರ್ಣಾಹುತಿ. ಮಧ್ಯಾಹ್ನ 3.45ಕ್ಕೆ ಸುದರ್ಶನ ಪೂಜೆ, ಹೋಮ, ಪೂರ್ಣಾಹುತಿ ನಡೆಯಲಿದೆ.

ಸ್ವಾಮೀಜಿಗಳ ಸ್ವಾಗತ: ಸಂಜೆ 4ಗಂಟೆಗೆ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ, ವಿಶ್ವಕರ್ಮ ಬೀದಿ, ಭಗವಾನ್‌ ಟಾಕೀಸ್‌ ವೃತ್ತ, ಲಿಂಕ್‌ ರಸ್ತೆ, ಬಸ್‌ ನಿಲ್ದಾಣದ ಮೂಲಕ ತ್ರಿವೇಣಿ ಸಂಗಮಕ್ಕೆ ಮಂಗಳವಾದ್ಯ, ವೀರಗಾಸೆ, ಭಜನಾ ತಂಡಗಳು, ಕೊಂಬು-ಕಹಳೆ, ಕಲಶ ಹೊತ್ತ ಸುಮಂಗಲಿಯರು, ಕಂಸಾಳೆ, ಪೂಜಾ ಕುಣಿತ, ವೀರಭದ್ರ ಕುಣಿತ, ಗಾರುಡಿ ಕುಣಿತ, ಕೋಲಾಟ, ವೀರಮಕ್ಕಳ ಕುಣಿತ, ಕೀಲುಕುದುರೆ, ಪಟ ಕುಣಿತ, ತಮಟೆ, ಬ್ಯಾಂಡ್‌ ಸೆಟ್, ಸೇವಾದಳ ಮತ್ತು ಸ್ತಬ್ಧಚಿತ್ರಗಳೊಂದಿಗೆ ಕುಂಭಮೇಳದಲ್ಲಿ ಭಾಗವಹಿಸುವ ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.

ಫೆ.19ರ ಮುಂಜಾನೆ 5.30ಕ್ಕೆ ಮಾಘಶುದ್ಧ ವ್ಯಾಸ ಪೂರ್ಣಿಮಾ, ಪುಷ್ಯನಕ್ಷತ್ರ, ಪುಣ್ಯಾಹ, ಸಪ್ತನದೀತೀರ್ಥ ಕಲಶ ಪೂಜೆ, ಹೋಮ, ಕುಂಭಲಗ್ನದಲ್ಲಿ ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಕಲಶತೀರ್ಥ ಸಂಯೋಜನೆ ಮಾಡಲಾ ಗುವುದು. ಪ್ರಾತಃಕಾಲ 9.35ರಿಂದ 9.50ರ ಮೀನಲಗ್ನ, ಬೆಳಗ್ಗೆ 11.30ರಿಂದ 12ಗಂಟೆಯ ವೃಷಭ ಲಗ್ನ, ಅಭಿಜಿನ್‌ ಮುಹೂರ್ತ, ವಿಧಿ ಮುಹೂರ್ತ ಹಾಗೂ ವೇದ ಮುಹೂರ್ತಗಳಲ್ಲಿ ಮಹೋದಯ ಪುಣ್ಯಸ್ನಾನ ನಡೆಯಲಿದೆ.

ಫೆ.17ರಂದು ಬೆಳಗ್ಗೆ 8.30ಕ್ಕೆ ಅಗಸೆಂಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯಕ್ರಮ, ಅಂಕುರಾರ್ಪಣೆ ಉದ್ಘಾಟನಾ ಸಮಾರಂಭ ನಡೆಯಲಿದ್ದು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಭಾಗವಹಿಸಲಿ ದ್ದಾರೆ. 18ರಂದು ಬೆಳಗ್ಗೆ 11ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

19ರಂದು ಮಧ್ಯಾಹ್ನ 12ಗಂಟೆಗೆ ನಡೆಯುವ ಧರ್ಮ ಸಭೆಯನ್ನು ಸಿಎಂ ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಚಿವ ಜಿ.ಟಿ.ದೇವೇಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಶೇಷ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಭಾಗವಹಿಸಲಿದ್ದಾರೆ.

ಭರದ ಸಿದ್ಧತೆ: ಕುಂಭಮೇಳದ ಯಶಸ್ಸಿಗಾಗಿ ಮೈಸೂರು ಜಿಲ್ಲಾಡಳಿತ ಹಾಗೂ ಕುಂಭಮೇಳ ಆಚರಣಾ ಸಮಿತಿವತಿಯಿಂದ ತಿರುಮಕೂಡಲಿನಲ್ಲಿ ಭರದ ಸಿದ್ಧತೆ ನಡೆದಿದೆ. ಭಕ್ತರಿಗಾಗಿ ತಾತ್ಕಲಿಕ ಕುಟೀರ, ಶೌಚಾಲಯ, ಮಹಿಳೆಯರಿಗಾಗಿ ಬಟ್ಟೆ ಬದಲಿಸುವ ಕೋಣೆಗಳ ನಿರ್ಮಾಣ, ವಾಹನ ನಿಲುಗಡೆಗೆ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next