Advertisement

ಮುಳಿ ಹುಲ್ಲಿನ ಛಾವಣಿಯಲ್ಲಿ ಆರಂಭಗೊಂಡ ಶಾಲೆಗೀಗ 110 ವರ್ಷದ ಸಂಭ್ರಮ

10:03 AM Nov 18, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1909 ಶಾಲೆ ಆರಂಭ
20 ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ

ಕೈಕಂಬ: ಜಿಲ್ಲಾ ಬೋರ್ಡ್‌ನ ಆಡಳಿತಕ್ಕೆ ಒಳಪಟ್ಟ ದಾನಿಗಳ ಸಹಕಾರದಿಂದ ಕುಪ್ಪೆಪದವು ಕಿಲೆಂಜಾರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1909ರಲ್ಲಿ ಆರಂಭಗೊಂಡಿತ್ತು. ಅನಂತರ ಹಿರಿಯ ಪ್ರಾಥಮಿಕ ಶಾಲೆಯಾಗಿ ಮುಂದುವರಿದು 2006-07ರಲ್ಲಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಂಡಿತು. ಸದ್ಯ ಈ ಶಾಲೆಯಲ್ಲಿ ಈಗ 1ರಿಂದ 8ನೇ ತರಗತಿಗಳು ನಡೆಯುತ್ತಿವೆ.

ಶತಮಾನೋತ್ಸವ ಕಟ್ಟಡ
1909ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ 1ನೇ ತರಗತಿಯಿಂದ ಮುಳಿ ಹುಲ್ಲಿನ ಚಾವಣಿಯಲ್ಲಿ ಆರಂಭಿಸಲಾಗಿತ್ತು. ಶಾಲಾ ಆರಂಭದಲ್ಲಿ 20 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಮೊದಲ ಮುಖ್ಯೋಪಾಧ್ಯಾಯರಾಗಿ ಶಂಕರ ನಾರಾಯಣ ಭಟ್‌ ಅವರು ಸೇವೆ ಸಲ್ಲಿಸಿದ್ದರು. ಅನಂತರ 1ರಿಂದ 5ನೇ ತರಗತಿಯವರೆಗೆ ವಿಸ್ತೃತಗೊಂಡಿತು. ಮುಂದುವರಿದು 7ನೇ ತರಗತಿಗಳು ನಡೆದವು.

2007-08ರಿಂದ 8ನೇ ತರಗತಿ ಆರಂಭಗೊಂಡಿತು. 2009-10ರತನಕ ಇಲ್ಲಿ ಪ್ರೌಢಶಾಲಾ ತರಗತಿಗಳು ನಡೆದವು. ಬಳಿಕ ನೂತನವಾಗಿ ನಿರ್ಮಿಸಿದ ಪ್ರೌಢಶಾಲಾ ಕಟ್ಟಡದಲ್ಲಿ ತರಗತಿಗಳು ವರ್ಗಾವಣೆಗೊಂಡವು.

Advertisement

ಸುಮಾರು 1923ರಲ್ಲಿ ಈ ಶಾಲೆಯ ಹಳೆಕಟ್ಟಡ ನಿರ್ಮಾಣವಾಯಿತು ಎಂದು ಹೇಳಲಾಗುತ್ತಿದೆ.
ಶಾಲಾ ಶತಮಾನೋತ್ಸವದ ನೆನಪಿಗೆ ಹಳೆವಿದ್ಯಾರ್ಥಿ ಹಾಗೂ ಊರ ಹಾಗೂ ಪರವೂರಿನ ದಾನಿಗಳ ಸಹಕಾರದಿಂದ ಶತಮಾನೋತ್ಸವ ಕಟ್ಟಡವನ್ನು ನಿರ್ಮಿಸಿದ್ದಾರೆ.

ಪ್ರಸ್ತುತ 190 ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 7ಮಂದಿ ಶಿಕ್ಷಕರಿದ್ದು, ಮುಖ್ಯ ಶಿಕ್ಷಕ ಹುದ್ದೆ ಖಾಲಿ ಇದೆ. ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಅಪೋಲಿನಾರಿಸ್‌ ಡಿ’ಸೋಜಾ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ದಾಮೋದರ ಗೌಡ, ಮೈನಾಜ್‌, ಸಪ್ರಭಾನು, ಆಯಿಷಾ, ವನಿತಾ ಕೆ., ಮೊದಲಾದವರು ರಾಷ್ಟ್ರೀಯ ,ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹಾಗೂ ಬೆಂಗಳೂರು ಪ್ರಾಂತ್ಯದ ಆರ್ಚ್‌ ಬಿಷಪ್‌ ವಂ| ಬೆರ್ನಾರ್ಡ್‌ ಮೊರಾಸ್‌ ಈ ಶಾಲೆಯ ಹಳೆವಿದ್ಯಾರ್ಥಿ. ಈ ಶಾಲೆಗೆ ಹಲವು ರೀತಿಯ ಕೊಡುಗೆಗಳನ್ನು ನೀಡಿದವರಲ್ಲಿ ದಿ| ಶ್ರೀಪಾಲ ಶೆಟ್ಟಿ, ಜಿನ್ನಪ್ಪ ಮಾಸ್ಟ್ರೆ, ದಿ| ಧರ್ಮಪಾಲ ಅಗರಿ, ದಿ| ಕಾಂತಪ್ಪ ಶೆಟ್ಟಿ, ದಿ| ಹಿರಿಣ್ಯಾಕ್ಷ ಕೋಟ್ಯಾನ್‌, ಕೆ. ಪುರುಷೋತ್ತಮ್‌, ಟಿ.ರಾಮಚಂದ್ರ ಸಾಲ್ಯಾನ್‌ ಮುಂತಾದವರು ಪ್ರಮುಖರು.

8,000 ವಿದ್ಯಾರ್ಥಿಗಳು
ಕಿಲೆಂಜಾರು, ಮುತ್ತೂರು, ಕೊಳವೂರು, ತೆಂಕ ಎಡಪದವು, ಮೊಗರು, ಕಪೆì ಇರುವೈಲು, ಕರಿಯಂಗಳ ಗ್ರಾಮಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದರು. ಸುಮಾರು 8,000 ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಈಗ ಈ ಶಾಲೆ ಪರಿಸರದಲ್ಲಿ 5 ಸರಕಾರಿ ಶಾಲೆಗಳು, 3 ಖಾಸಗಿ ಶಾಲೆಗಳಿವೆ.

ಗ್ರಾಮೀಣ ಪ್ರದೇಶದಲ್ಲಿ ಇರುವ ಈ ಶಾಲೆಯ ಪರಿಸರದಲ್ಲಿ ಹಲವಾರು ಸರಕಾರಿ ಹಾಗೂ ಖಾಸಗಿ ಶಾಲೆಗಳಿವೆ. ಇಲ್ಲಿ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ದಿ ಸಮಿತಿ, ಅನೇಕ ಸಂಘ,ಸಂಸ್ಥೆಗಳು ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ .
-ಅಪೋಲಿನಾರಿಸ್‌ ಡಿ’ಸೋಜಾ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ

ಈ ಶಾಲೆ ಚರ್ಚ್‌, ಮಸೀದಿ, ದೇವಸ್ಥಾನದ ಸಮೀಪದ ಲ್ಲಿರುವುದು ಇಲ್ಲಿನ ವಿಶೇಷತೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡಲಾಗುತ್ತಿತ್ತು.
-ನೀಲಯ ಎಂ. ಅಗರಿ, ಶಾಲೆಯ ಹಳೆ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next