Advertisement

ಆರೋಗ್ಯ ಕವಚಕ್ಕೆ ಹುಸಿ ಕರೆಯೇ ಸವಾಲು: ಅರ್ಧಕ್ಕರ್ಧ ನಿರುಪಯೋಗಿ

01:19 AM Jan 04, 2023 | Team Udayavani |

ಬೆಂಗಳೂರು: ಸುಮ್ಮನೆ ಫೋನ್‌ ಮಾಡಿ ಉಪದ್ರವ ನೀಡುವುದು, ಹುಸಿ ಮತ್ತು ಸೈಲೆಂಟ್‌ ಕರೆಗಳು, ಮಕ್ಕಳು ಆಟ ಆಡುತ್ತ ಮಾಡುವ ಫೋನ್‌ ಕರೆಗಳು…!

Advertisement

-ಇವು “ಆರೋಗ್ಯ ಕವಚ- 108′ ಕಾಲ್‌ಸೆಂಟರ್‌ಗೆ ಬರುವ ಕರೆಗಳು. ತುರ್ತು ಆರೋಗ್ಯ ಸೇವೆಗಾಗಿ ರಾಜ್ಯದ ನಾನಾ ಭಾಗಗಳಿಂದ “108′ ಆ್ಯಂಬುಲೆನ್ಸ್‌ ಗೆ ನಿತ್ಯವೂ ಬರುವ ಕರೆಗಳಲ್ಲಿ ಇಂತಹ ಅನುಪಯುಕ್ತ ಕರೆಗಳ ಕಿರಿಕಿರಿ ತಲೆನೋವಾಗಿದೆ.

ಪ್ರತಿದಿನ ಬರುವ ನೂರಾರು ಕರೆಗಳ ಪೈಕಿ ಅರ್ಧಕ್ಕರ್ಧ ಕರೆಗಳು ತುರ್ತು ಅಲ್ಲದ ಅಥವಾ ನಿರುಪ ಯೋಗಿ ಕರೆಗಳು. ಇವುಗಳನ್ನು ಸ್ವೀಕರಿ ಸುವಂತಿಲ್ಲ; ನಿರ್ಲಕ್ಷಿಸುವಂತೆಯೂ ಇಲ್ಲ.

ಶೇ. 44ರಷ್ಟು ಈ ಮಾದರಿಯ ಕರೆಗಳಲ್ಲಿ ಬಹುತೇಕ ಸೈಲೆಂಟ್‌ ಕರೆಗಳು (ಫೋನ್‌ ಮಾಡಿ ಹಾಗೇ ಇಡುವುದು), ಸುಳ್ಳು ಕರೆಗಳು, ಉಪದ್ರವ ಕರೆಗಳು, ಮಕ್ಕಳ ಕರೆಗಳು, ಸೇವೆಯ ಪ್ರಶಂಸೆ, ಸಿಬಂದಿ ಬಗ್ಗೆ ಕಾಳಜಿ ತೋರುವವು ಆಗಿರುತ್ತವೆ. ಇದರಿಂದ ತುರ್ತು ಸಹಾಯವಾಣಿಗೆ ಹೊರೆಯಾಗುವುದರ ಜತೆಗೆ ತುರ್ತು ಸಹಾಯದ ಅಗತ್ಯವಿರುವವರಿಗೆ ಸ್ಪಂದಿಸಲು ವಿಳಂಬವಾಗುತ್ತಿದೆ.

ಜನರಿಗೆ ತುರ್ತುರಹಿತ ಕರೆ ಸಂಖ್ಯೆ ನೀಡ ದಿರುವುದು ಸಮಸ್ಯೆಗೆ ಕಾರಣ. ಎಮರ್ಜೆನ್ಸಿ ರೆಸ್ಪಾನ್ಸ್‌ ಸೆಂಟರ್‌ ಫಿಸಿಶಿಯನ್‌(ಇಆರ್‌ಸಿಪಿ)ಗಳು ಮತ್ತು ಎಮರ್ಜೆನ್ಸಿ ರೆಸ್ಪಾನ್ಸ್‌ ಆಫೀ ಸರ್‌ (ಇಆರ್‌ಒ) ಜತೆಗಿನ ಸಂವಹನಕ್ಕೆ 108 ಬಳಕೆ ಆಗುತ್ತಿದೆ. ಪ್ರತ್ಯೇಕ ಸಂಪರ್ಕ ಸಂಖ್ಯೆ ನೀಡಿದ್ದರೂ ಜನರು ಇದೇ ಸಂಖ್ಯೆ ಬಳಸುತ್ತಿದ್ದಾರೆ.

Advertisement

ಆ್ಯಂಬ್ಯುಲೆನ್ಸ್‌ ಪೂರೈಕೆ ಆಗಿಲ್ಲ!
ಉಳಿದ ಶೇ. 55ರಿಂದ 60ರಷ್ಟು ತುರ್ತು ಕರೆಗಳ ಪೈಕಿ ಸಕಾಲದಲ್ಲಿ ಆ್ಯಂಬ್ಯುಲೆನ್ಸ್‌ ಗಳನ್ನು ಪೂರೈಸಿರುವುದರ ಪ್ರಮಾಣವೂ ಶೇ. 50ಕ್ಕಿಂತ ಕಡಿಮೆ. ಇದರಿಂದ ನಿಜವಾದ ಉದ್ದೇಶ ಈಡೇರುತ್ತಿಲ್ಲ ಎನ್ನಲಾಗಿದೆ.

ಆ್ಯಂಬ್ಯುಲೆನ್ಸ್‌ಗಳು ಲಭ್ಯವಿಲ್ಲದ ಸಂದರ್ಭ ದಲ್ಲಿ ತುರ್ತು ಪ್ರತಿಕ್ರಿಯೆ ಕೇಂದ್ರವು ಕರೆಯನ್ನು ವೆಹಿಕಲ್‌ ಬ್ಯುಸಿ ಡೆಸ್ಕ್ (ವಿ.ಬಿ. ಡೆಸ್ಕ್) ಎಂಬ ಪ್ರತ್ಯೇಕ ಟರ್ಮಿನಲ್‌ಗೆ ವರ್ಗಾಯಿಸುತ್ತದೆ. ಆ್ಯಂಬ್ಯುಲೆನ್ಸ್‌ ಲಭ್ಯವಾದ ಬಳಿಕ ಅದನ್ನು ವಿ.ಬಿ. ಡೆಸ್ಕ್ ಕರೆ ಮಾಡಿದವರಿಗೆ ಪೂರೈಸ ಬೇಕು. ಅಂಕಿಅಂಶಗಳ ಪ್ರಕಾರ ಶೇ. 50ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಆ್ಯಂಬುಲೆನ್ಸ್‌ ಕೋರಿಕೆ ಗಳನ್ನು ಪೂರೈಸಿಯೇ ಇಲ್ಲ.

ಉದಾಹರಣೆಗೆ, 2014-15ರಿಂದ 2018-19ರ ವರೆಗೆ 8.87 ಲಕ್ಷ ಕರೆಗಳನ್ನು ವಿ.ಬಿ. ಡೆಸ್ಕ್ಗೆ ವರ್ಗಾಯಿಸಲಾಗಿದೆ. ಇವುಗಳಲ್ಲಿ 3.74 ಲಕ್ಷ ಕರೆಗಳಿಗೆ ಸ್ಪಂದಿಸಿ ಆ್ಯಂಬುಲೆನ್ಸ್‌ ಒದಗಿಸಲಾಗಿದೆ. ಉಳಿದ 5.12 ಲಕ್ಷ (ಶೇ. 58) ಪ್ರಕರಣಗಳಲ್ಲಿ ಆ್ಯಂಬುಲೆನ್ಸ್‌ ಪೂರೈಸಿಲ್ಲ. ಗರ್ಭಿಣಿಯರು ಆ್ಯಂಬ್ಯುಲೆನ್ಸ್‌ ಕೋರಿ ಕರೆ ಮಾಡಿ 20ರಿಂದ 23 ತಾಸುಗಳ ಅನಂತರವೂ ನೆರವು ದೊರೆಯದೆ ಮಗು ಸಾವನ್ನಪ್ಪಿದ ಘಟನೆಗಳೂ ನಡೆದಿವೆ.

ಈಚೆಗೆ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು 2018-19ನೇ ಸಾಲಿನ ಮಹಾಲೇಖಪಾಲರ ವರದಿಯಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ “ಆರೋಗ್ಯ ಕವಚ- 108′ ಯೋಜನೆಯ ಕಾರ್ಯನಿರ್ವಹಣ ಲೆಕ್ಕಪರಿಶೋಧನೆ ಕುರಿತು ವರದಿ ಮಂಡಿಸಿತು. ಅದರಲ್ಲಿ ಈ ಅಂಶಗಳನ್ನು ಉಲ್ಲೇಖೀಸಲಾಗಿದೆ.

ಸುಧಾರಣೆಗೆ ಸಲಹೆ
01.ಕರೆಗಳನ್ನು ವಿ.ಬಿ. ಡೆಸ್ಕ್ಗೆ ವರ್ಗಾಯಿಸುವ ಮುನ್ನ ಸೂಕ್ತ ಆ್ಯಂಬ್ಯುಲೆನ್ಸ್‌ ಲಭ್ಯ ವಾದ ತತ್‌ಕ್ಷಣ ಅದನ್ನು ಹಂಚಿಕೆ ಮಾಡಲಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.
02.ನಿಗದಿತ ಸಮಯದಲ್ಲಿ ಆ್ಯಂಬ್ಯುಲೆನ್ಸ್‌ ನಿಯೋಜಿಸಲಾಗದಿದ್ದರೆ ಕರೆ ಮಾಡಿದವ ರಿಗೆ ತಿಳಿಸಬೇಕು. ಇದರಿಂದ ಕಾಯುವಿಕೆ ತಪ್ಪೀತು.
03.ಕರೆ ಮಾಡುವವರು ಮತ್ತು ಆ್ಯಂಬ್ಯುಲೆನ್ಸ್‌ ಸಿಬಂದಿ ಮಧ್ಯೆ ಮೇಲ್ವಿಚಾರಣೆಯ ನೇರ ದೂರವಾಣಿ ವ್ಯವಸ್ಥೆ ಕಲ್ಪಿಸಬೇಕು.

ಕಾಲ್‌ಸೆಂಟರ್‌ಗೆ ಅನಗತ್ಯ ಕರೆ ಮಾಡಿ ಉಪದ್ರವ ನೀಡುವುದು ತಪ್ಪಿಲ್ಲ. ಸುಳ್ಳು ಕರೆಗಳೇ ಅಧಿಕ. ಈ ಬಗ್ಗೆ ಸಂಬಂಧ ಪಟ್ಟ ವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
– ಹನುಮಂತಪ್ಪ ಆರ್‌.ಜಿ.,
ರಾಜ್ಯ ಮುಖ್ಯಸ್ಥರು, ಆರೋಗ್ಯ ಕವಚ- 108


-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next