Advertisement
ಕೂರಲು ಆಗದೆ, ನಿಲ್ಲಲೂ ಆಗದಂಥ ನಿತ್ರಾಣ. ರೆಸ್ಟ್ ಬೇಕು ಎನ್ನುತ್ತಿದೆ ಮನಸ್ಸು. ಮಾತು-ಕಥೆ ಬೇಡ, ನಗು ಇಲ್ಲವೇ ಇಲ್ಲ. ಮಗ್ಗಲು ಬದಲಿಸಿ ಕಣ್ಮುಚ್ಚಿಕೊಳ್ಳೋಣವೆಂದರೆ, ಕಲೆಯ ಭಯ. ಹಸಿವಿಲ್ಲ, ಏನು ಮಾಡಲೂ ಆಯಾಸ. ಬೇಕಿರುವುದು ಅದೇ ಆರಾಮದ ನಿದ್ದೆ. ಆದರೆ ಆ ನಿದ್ರೆಗೂ ಭಂಗ ತರುವಂತೆ ಸ್ರಾವ…
Related Articles
Advertisement
ಇನ್ನು ವಿದ್ಯಾರ್ಥಿನಿಗಳ ಪಾಡಂತೂ ಕೇಳ್ಳೋದೇ ಬೇಡ. ಪರೀಕ್ಷೆ ಇದ್ದರಂತೂ, ಅದು ಅಗ್ನಿಪರೀಕ್ಷೆಯೇ. 3 ಗಂಟೆ ಕುಳಿತೇ ಇರಬೇಕು. ಪ್ರಶ್ನೆಗಳು ಸುಲಭ. ಆದರೆ, ಉತ್ತರ ಬರೆಯುವ ದೇಹಕ್ಕೆ ಸುಸ್ತು. ಕೊಠಡಿ ಮೇಲ್ವಿಚಾರಕನಾಗಿ ಪುರುಷ ಉಪನ್ಯಾಸಕ ಬಂದರೆ, ಮುಜುಗರದಲ್ಲೇ ಮುಳುಗುವಳು ಆ ಬಾಲೆ. ಪಕ್ಕದಲ್ಲಿ ಹುಡುಗಿಯೇ ಕುಳಿತಿದ್ದರೂ ತನ್ನ ಈ ದಿನಗಳ ಬಗ್ಗೆ ಹೇಳಲು ಏನೋ ಒಂಥರಾ. ಹಿಂದಿನ ಬೆಂಚಿನಲ್ಲಿ ಹುಡುಗ ಕುಳಿತರೆ ಅವನು ಎದ್ದು ಹೊರ ನಡೆಯುವ ತನಕ ಮೇಲೇಳಲು ಭಯ. ಏನಾದರೂ ಹೆಚ್ಚು ಕಡಿಮೆಯಾಗಿ, ಎಲ್ಲರೆದುರು ಅವಮಾನವಾದರೆಂಬ ಅಂಜಿಕೆ. ಇದು ಹೈಸ್ಕೂಲ್ ಹುಡುಗಿಯ ಆ ದಿನಗಳ ಪಾಡು. ಆ ದಿನಗಳು ಹತ್ತಿರ ಬಂದಂತೆ ಇನ್ನಿಲ್ಲದಂತೆ ತೊಂದರೆ ಕೊಡುವ ಮೊಡವೆ, ಆ ದಿನಗಳ ಸುಳಿವನ್ನು ಎಲ್ಲರಿಗೂ ನೀಡಿಬಿಡುತ್ತದೆ. ಸ್ರಾವದ ಹಿಂದಿನ ಮೂರು ದಿನ ಸಿಟ್ಟು, ತಲೆನೋವು; ಎಷ್ಟೇ ಚೆಂದದ ಉಡುಗೆ ತೊಡುಗೆ ತೊಟ್ಟರೂ ಮುಖ ಮಾತ್ರ ಕಳಾಹೀನ.
ಬಟ್ಟೆ, ಕಾಟನ್, ಎಕ್ಸ್‌ಟ್ರಾ ಲಾರ್ಜ್, ರಾತ್ರಿಗೊಂದು ಹಗಲಿಗೊಂದು ವಿನ್ಯಾಸದ ನ್ಯಾಪ್‌ಕಿನ್, ಸುವಾಸನೆಯ ನ್ಯಾಪ್‌ಕಿನ್, ಆ್ಯಂಟಿ ಬ್ಯಾಕ್ಟೀರಿಯಾ ನ್ಯಾಪ್‌ಕಿನ್… ಹೀಗೆ ಕಾಲಕ್ಕೆ ತಕ್ಕಂತೆ ಏನೇ ಸಾಧನಗಳು ಬಂದರೂ ಹಳೆ ಶತಮಾನದ ಅಜ್ಜಿಯಿಂದ, ಆಧುನಿಕ ಬೆಡಗಿಯವರೆಗೆ ಎಲ್ಲರೂ ಆ ದಿನಗಳಲ್ಲಿ ಅನುಭವಿಸಿದ, ಅನುಭವಿಸುವ ಸಂಕಟಕ್ಕೆ ಕೊನೆ ಇಲ್ಲ. ಮಹಿಳೆ ಎಷ್ಟೇ ಮುಂದುವರಿದರೂ, ಸಾಧನೆಗಳ ಮೆಟ್ಟಿಲೇರಿ ಶಿಖರವನ್ನು ತಲುಪಿದರೂ ಆ ಮೂರು ದಿನಗಳಲ್ಲಿ ಕಾಡುವ ನೂರು ಸಮಸ್ಯೆಗಳು ಅವಳ ಅಂತರಂಗಕ್ಕೆ ಮಾತ್ರ ಗೊತ್ತು.
ಶ್ರುತಿ ಮಲೆನಾಡತಿ