Advertisement

ಅಂದು ಹೊಗಳಿಕೆ, ಇಂದು ತೆಗಳಿಕೆ!

10:54 AM Jul 12, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ ಯೋಜನೆ ಬಹುತೇಕ ಅನುಷ್ಠಾನಗೊಂಡಿದ್ದು, ನಗರದ ಜನರಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾದರೂ, ಇತ್ತೀಚಿನ ದಿನಗಳಲ್ಲಿ ಆಹಾರದ ಗುಣಮಟ್ಟದ ಕುರಿತು ದೂರುಗಳು ಕೇಳಿಬರುತ್ತಿವೆ.

Advertisement

ಯೋಜನೆ ಅನುಷ್ಠಾನಗೊಂಡ ಆರಂಭದಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ
ಲಭ್ಯವಾಗುತ್ತಿರುವ ಕುರಿತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ದಿನ ಕಳೆದಂತೆ ಕ್ಯಾಂಟೀನ್‌ಗಳಲ್ಲಿನ ಆಹಾರದ ರುಚಿ ಹಾಗೂ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಕೆಲವು ಕಡೆಗಳಲ್ಲಿ ಸಮರ್ಪಕವಾಗಿ ಆಹಾರ ಪೂರೈಕೆಯಾಗದಿರುವುದು ವರದಿಯಾಗಿದೆ. ಕ್ಯಾಂಟೀನ್‌ಗಳಲ್ಲಿ ಉತ್ತಮ ಆಹಾರ ದೊರೆಯುತ್ತಿದ್ದ ಹಿನ್ನೆಲೆಯಲ್ಲಿ ಜನರು ಕ್ಯಾಂಟೀನ್‌ಗಳ ಎದುರು ಸಾಲುಗಟ್ಟಿ ನಿಲ್ಲುವಂತಹ ಪರಿಸ್ಥಿತಿಯಿತ್ತು. ಆದರಿಂದು ಬೆಳಗ್ಗೆ ಹೊರತುಪಡಿಸಿದರೆ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಹೆಚ್ಚಿನ ಜನರು ಬರುತ್ತಿಲ್ಲ. ಈ ಕುರಿತು ಸಾರ್ವಜನಿಕರನ್ನು ಪ್ರಶ್ನಿಸಿದರೆ ಈ ಮೊದಲು ನೀಡುತ್ತಿದ್ದ ರುಚಿ ಹಾಗೂ ಗುಣಮಟ್ಟವಿಲ್ಲ ಎಂದು ಹೇಳುತ್ತಿದ್ದಾರೆ.
 
ನಗರದ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ ಉದ್ದೇಶದಿಂದ ಪಾಲಿಕೆಯ ಎಲ್ಲ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸುವ ಯೋಜನೆಯನ್ನು ಸರ್ಕಾರ ಘೋಷಿಸಿತ್ತು. ಅದರಂತೆ ಪಾಲಿಕೆಯ 171 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗಿದ್ದು, ಉಳಿದ ಕಡೆಗಳಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಆಹಾರ ಪೂರೈಕೆ ಮಾಡಲಾಗುತ್ತಿದೆ. 

ರಾಜ್ಯ ಸರ್ಕಾರದ ಯೋಜನೆ ಜಾರಿಗಾಗಿ 2017-18ನೇ ಸಾಲಿನ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ಸರ್ಕಾರ 100 ಕೋಟಿ ರೂ. ಗಳನ್ನು ಮೀಸಲಿರಿಸಿ ಪಾಲಿಕೆಗೆ ಬಿಡುಗಡೆಗೊಳಿಸಿದೆ. ಅದರಂತೆ ಪಾಲಿಕೆಯ ಅಧಿಕಾರಿಗಳು ಕ್ಯಾಂಟೀನ್‌ಗಳ ನಿರ್ಮಾಣ, ಅಡುಗೆ ಮನೆಗಳ ನಿರ್ಮಾಣ, ತಟ್ಟೆ, ಲೋಟ, ಸ್ಪೂನ್‌ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡಿದ್ದಾರೆ. 

 ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿಗೆ 87.73 ಕೋಟಿ ಹಾಗೂ ನಿರ್ವಹಣೆಗೆ 33.78 ಕೋಟಿ ರೂ. ಸೇರಿ ಒಟ್ಟು 121.51 ಕೋಟಿ ರೂ . ವೆಚ್ಚವಾಗಿದ್ದು, ಪಾಲಿಕೆಯಿಂದಲೇ ಹೆಚ್ಚುವರಿಯಾಗಿ 21.51 ಕೋಟಿ ರೂ.ಗಳನ್ನು ಭರಿಸಲಾಗಿದೆ.  ಇದರೊಂದಿಗೆ 2018-19ನೇ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆಗಾಗಿ ಸರ್ಕಾರದ ಬಜೆಟ್‌ನಲ್ಲಿ 120 ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಈವರೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮತ್ತೆ ಪಾಲಿಕೆಯಿಂದಲೇ ಕ್ಯಾಂಟೀನ್‌ಗಳ ನಿರ್ವಹಣೆಗಾಗಿ 14.74 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಪಾಲಿಕೆಯಿಂದ 171 ವಾರ್ಡ್‌ಗಳಲ್ಲಿ ನಿರ್ಮಿಸಿರುವ ಕ್ಯಾಂಟೀನ್‌ಗಳಿಗೆ ಸಾರ್ವಜನಿಕರಿಂದ ಬೆಳಗ್ಗೆ ಹಾಗೂ ಮಧ್ಯಾಹ್ನ ಆಹಾರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ರಾತ್ರಿ ಊಟಕ್ಕೆ ಹೆಚ್ಚಿನ ಬೇಡಿಕೆಯಿಲ್ಲ. ಆದರೆ, ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಹಾಗೂ ರ್ಯಾಲಿಗಳಲ್ಲಿ ಭಾಗವಹಿಸುವವರು ಕ್ಯಾಂಟೀನ್‌ಗಳ ಮೊರೆ ಹೋಗುತ್ತಿದ್ದರಿಂದ ಮೂರು ಹೊತ್ತು
ಆಹಾರ ಕೊರತೆ ಎದುರಾಗುತ್ತಿತ್ತು. ಇದೀಗ ಚುನಾವಣೆಯ ಬಳಿಕ ಮೊದಲಿನಂತೆ ಬೆಳಗ್ಗೆ ಹಾಗೂ ಮಧ್ಯಾಹ್ನ ಊಟಕ್ಕೆ ಬೇಡಿಕೆಯಿದ್ದು, ರಾತ್ರಿ ಸಮಯದಲ್ಲಿ ಹೆಚ್ಚಿನ ಜನರು ಬರುವುದಿಲ್ಲ ಎಂದು ಆಹಾರ ಪೂರೈಕೆ ಗುತ್ತಿಗೆದಾರರು ತಿಳಿಸಿದ್ದಾರೆ.

Advertisement

“ಸಂಚಾರಿ’ ಕ್ಯಾಂಟೀನ್‌ಗೆ ಬೇಡಿಕೆ: ಪಾಲಿಕೆಯಿಂದ 171 ವಾರ್ಡ್‌ಗಳಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್‌ಗಿಂತಲೂ ಸಂಚಾರ ಕ್ಯಾಂಟೀನ್‌ಗಳಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇಂದಿರಾ ಕ್ಯಾಂಟೀನ್‌ಗಳನ್ನು ಜಾಗ ಲಭ್ಯವಾದ ಕಡೆಗಳಲ್ಲಿ ನಿರ್ಮಿಸಿದರಿಂದ ಕೆಲವು ಕಡೆಗಳಲ್ಲಿ ಸಾರ್ವಜನಿಕರಿಗೆ ಶೀಘ್ರ ಲಭ್ಯವಾಗುವುದಿಲ್ಲ. ಆದರೆ, ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು ಬಸ್‌ ನಿಲ್ದಾಣ, ರಸ್ತೆಬದಿ, ಮಾರುಕಟ್ಟೆ ಸೇರಿದಂತೆ ಜನರು ಹೆಚ್ಚು ಸಂಚರಿಸುವ ಕಡೆಗಳಲ್ಲಿ ನಿಲ್ಲುವುದರಿಂದ ಜನರಿಗೆ ಸೇವೆ ದೊರೆಯುತ್ತಿದೆ.

ಸಂಚಾರಿ ಕ್ಯಾಂಟೀನ್‌ಗಳು ನಿಲ್ಲಬೇಕಾದ ಸ್ಥಳವನ್ನು ಆಯಾ ವಲಯ ಅಧಿಕಾರಿಗಳು ನಿಗದಿಪಡಿಸಿದ್ದಾರೆ. ಆದರೆ, ಆ ಜಾಗಗಳಲ್ಲಿ ಕ್ಯಾಂಟೀನ್‌ಗಳಿಗೆ ಜನರಿಂದ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಆಹಾರ ಉಳಿಯುತ್ತಿತ್ತು. ಆ ಹಿನ್ನೆಲೆಯಲ್ಲಿ ಜನರಿರುವ ಕಡೆಗಳಿಗೆ ವಾಹನಗಳನ್ನು ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ದಿನದ ಮೂರು ಹೊತ್ತು ಕ್ಯಾಂಟೀನ್‌ಗಳಲ್ಲಿ ಆಹಾರದ ಕೊರತೆ ಎದುರಾಗುತ್ತಿದೆ.

ಸಂಪೂರ್ಣ ಸೇವೆ ಲಭ್ಯವಾಗಿಲ್ಲ: ಮೊಬೈಲ್‌ ಇಂದಿರಾ ಕ್ಯಾಂಟೀನ್‌ಗಳಿಗೆ ಜನವರಿಯಲ್ಲಿಯೇ ಚಾಲನೆ ಸಿಕ್ಕಿದ್ದು, ಮೆಜೆಸ್ಟಿಕ್‌, ಓಕಳಿಪುರ, ಚಾಮರಾಜಪೇಟೆ, ಮಡಿವಾಳ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಕ್ಯಾಂಟೀನ್‌ಗಳನ್ನು ಆರಂಭಿಸಲು ಪಾಲಿಕೆಯ ಅಧಿಕಾರಿಗಳು ತೀರ್ಮಾನಿಸಿದ್ದರು. ಆದರೆ, ಸದ್ಯ ಸುಮಾರು 18 ವಾರ್ಡ್‌ಗಳಲ್ಲಿ ಮಾತ್ರ ಮೊಬೈಲ್‌ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 10 ವಾರ್ಡ್‌ಗಳಲ್ಲಿ ಇನ್ನೂ ಸಂಚಾರಿ ಕ್ಯಾಂಟೀನ್‌ ನಿಲ್ಲಬೇಕಾದ ಜಾಗ ಗುರುತಿಸುವಲ್ಲಿ ಪಾಲಿಕೆಯ ಅಧಿಕಾರಿಗಳು ವಿಫ‌ಲವಾಗಿದ್ದಾರೆ.

ಮೆನು ಬದಲಾವಣೆಯಿಂದ ಜನರ ಹೆಚ್ಚಳ ಕ್ಯಾಂಟೀನ್‌ಗಳಿಗೆ ಭೇಟಿ ನೀಡುವ ಸಾರ್ವಜನಿಕರು ಇಂದಿರಾ ಕ್ಯಾಂಟೀನ್‌ ಆ್ಯಪ್‌ ಹಾಗೂ ಕ್ಯಾಂಟೀನ್‌ಗಳಲ್ಲಿನ ಸಲಹಾ ಪೆಟ್ಟಿಗೆ ಮೂಲಕ, ಬೆಳಗಿನ ತಿಂಡಿಗಳನ್ನು ಬದಲಿಸುವಂತೆ ಹಾಗೂ ಮಧ್ಯಾಹ್ನ ಊಟದೊಂದಿಗೆ ಪಾಯಸ ಅಥವಾ ಇತರೆ ಸಿಹಿ ಪದಾರ್ಥ ನೀಡುವಂತೆ ಕೋರಿದ್ದಾರೆ. 

ಇದರೊಂದಿಗೆ ಹೆಚ್ಚಿನ ಸಂಖ್ಯೆಯ ನಾಗರಿಕರು ಕ್ಯಾಂಟೀನ್‌ಗಳಲ್ಲಿ ಉಪ್ಪಿನಕಾಯಿ ನೀಡುವಂತೆ ಕೋರಿದ್ದರು. ಸಾರ್ವಜನಿಕರ ಸಲಹೆಯಂತೆ ಇಂದಿರಾ ಕ್ಯಾಂಟೀನ್‌ ಮೆನು ಪರಿಷ್ಕರಣೆಗೊಳಿಸಲಾಗಿದ್ದು, ಮಾರ್ಚ್‌ 1 ರಿಂದ ಹೊಸ ಮೆನು ಜಾರಿಗೆ ಬಂದಿದೆ. ಅದರಂತೆ ಪಾಯಾಸ, ಆಲೂ ಪಲಾವ್‌, ಆಲೂ ಕುರ್ಮ, ತಡ್ಕ ಇಡ್ಲಿ, ಮೊಸರು ಸಲಾಡ್‌, ಬಟಾಣಿ ಪಲಾವ್‌, ಪಾಲಾಕ್‌ ಇಡ್ಲಿ, ಸಾಬುದಾನ್‌ ಕೀರು, ವೆಜ್‌ ಪಲಾವ್‌, ಜೀರಾ ಆಲೂ ಪಲಾವ್‌, ಆಲೂ ಬಟಾಣಿ ಕರ್ರಿ ಸೇರಿದಂತೆ ಹಲವಾರು ಹೊಸ ಬಗೆಯ ತಿಂಡಿ-ಊಟಗಳನ್ನು ಮೆನುವಿನಲ್ಲಿರುವುದರಿಂದ ಕ್ಯಾಂಟೀನ್‌ಗಳಿಗೆ ಬರುವ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೊಬೈಲ್‌ ಕ್ಯಾಂಟೀನ್‌ಗೆ ಗುರುತಿಸಿರುವ ಸ್ಥಳಗಳು ಪಶ್ಚಿಮ ವಲಯ: ಕಾಡುಮಲ್ಲೇಶ್ವರ, ಮೆಜೆಸ್ಟಿಕ್‌, ಓಕಳಿಪುರ, ದಯಾ ನಂದ ನಗರ, ಬಸವೇಶ್ವರನಗರ, ಚಾಮರಾಜ ಪೇಟೆ, ಶ್ರೀರಾಮಮಂದಿರ
 
„ ದಕ್ಷಿಣ: ಶ್ರೀನಗರ, ಗಿರಿನಗರ, ಮಡಿ ವಾಳ, ಜಯನಗರ, ಜೆ.ಪಿ.ನಗರ, ಕೆಂಪಾಪುರ ಅಗ್ರಹಾರ, ಬಾಪೂಜಿನಗರ, ಯಡಿಯೂರು
„ ಪೂರ್ವ: ಕಾಚರಕನಹಳ್ಳಿ, ಮನೋ ರಾಯನಪಾಳ್ಯ, ಹಲಸೂರು 
„ ಬೊಮ್ಮನಹಳ್ಳಿ: ಯಲಚೇನಹಳ್ಳಿ, ಮಹದೇವಪುರ, ಎಚ್‌ಎಎಲ್‌ ಏರ್‌ಪೋರ್ಟ್‌
„ ರಾಜರಾಜೇಶ್ವರಿ ನಗರ: ಲಕ್ಷ್ಮೀದೇವಿ ನಗರ, ಜ್ಞಾನಭಾರತಿ, ಲಗ್ಗೆರೆ

 ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next