“ಮೂರು ತಿಂಗಳು ಕಾದಿದ್ದಕ್ಕೂ ಸಾರ್ಥಕ ಆಯ್ತು …’ ಖುಷಿಯಿಂದ ಹೇಳಿಕೊಳ್ಳುತ್ತಾರೆ ಹರಿಪ್ರಿಯಾ. ಸುಮಾರು ಒಂದೂವರೆ ವರ್ಷಗಳ ಹಿಂದೆ ಹರಿಪ್ರಿಯಾ ಅಭಿನಯದ “ನೀರ್ ದೋಸೆ’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಎನಿಸಿಕೊಂಡರೂ, ಆ ಚಿತ್ರ ಬಿಡುಗಡೆಯಾಗಿ ಸುಮಾರು ಮೂರು ತಿಂಗಳ ಕಾಲ ಹರಿಪ್ರಿಯಾ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಹರಿಪ್ರಿಯಾಗೆ ಅವಕಾಶಗಳ ಕೊರತೆ ಎದುರಾಗುತ್ತಿದೆಯಾ ಎಂಬ ಸಂಶಯ ಬರುವವರೆಗೆ ಹರಿಪ್ರಿಯಾ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ.
ಯಾಕೆ ಎಂದು ಹರಿಪ್ರಿಯಾ ಈಗ ಹೇಳಿಕೊಂಡಿದ್ದಾರೆ. ಸೋಮವಾರ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ನಡೆದ “ಬೆಲ್ ಬಾಟಮ್ ಚಿತ್ರದ ಪತ್ರಿಕಾಗೋಷ್ಠಿಯ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಹಲವು ವಿಷಯಗಳನ್ನು ಹಂಚಿಕೊಂಡರು. ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಪ್ರಬುದ್ಧವಾಗಿ ಉತ್ತರಿಸಿದರು. ಬೋರಿಂಗ್ ಅಷ್ಟೇ ಅಲ್ಲ, ಅವಮಾನಕರ: “ನನಗೆ “ನೀರ್ ದೋಸೆ’ ಚಿತ್ರವಾದ ನಂತರ ಹಲವು ಚಿತ್ರಗಳಲ್ಲಿ ಅವಕಾಶ ಸಿಕ್ಕಿತ್ತು.
ಒಳ್ಳೆಯ ಬ್ಯಾನರ್, ಸಂಭಾವನೆ ಎಲ್ಲವೂ ಸಿಕ್ಕಿತ್ತು. ಆದರೆ, ಪಾತ್ರ ಮಾತ್ರ ಅದೇ “ನೀರ್ ದೋಸೆ’ಯ ಛಾಯೆಯದ್ದು. ಅದಕ್ಕೂ ಮುನ್ನ ಒಂದೇ ತರಹದ ಪಾತ್ರ ಮಾಡುತ್ತಿದ್ದೆ ಮತ್ತು ಅದನ್ನು ಬ್ರೇಕ್ ಮಾಡುವುದಕ್ಕೆಂದೇ “ನೀರ್ ದೋಸೆ’ ಒಪ್ಪಿಕೊಂಡೆ. “ನೀರ್ ದೋಸೆ’ ನಂತರ ಅದೇ ತರಹ ಚಿತ್ರಗಳು ಬಂದರೆ ಹೇಗಾಗಬೇಡ. ಅದರಿಂದ ಹೊರಬರಬೇಕಿತ್ತು. ಹಾಗಾಗಿ ಯಾವುದೇ ಚಿತ್ರ ಒಪ್ಪಿರಲಿಲ್ಲ.
ನಾನು ಸದಾ ಬಿಝಿಯಾಗಿರೋಳು. ಮೂರು ತಿಂಗಳು ಏನೂ ಮಾಡಲಿಲ್ಲ. ಬರೀ ಬೋರಿಂಗ್ ಅಷ್ಟೇ ಅಲ್ಲ, ಅವಮಾನಕರವಾಗಿತ್ತು ಆ ಸಮಯ. ಅದರಿಂದ ಹೊರಬರಬೇಕೆಂದು ನೋಡುತ್ತಿದ್ದಾಗ, ಒಂದರಹಿಂದೊಂದು ಒಳ್ಳೆಯ ಪಾತ್ರಗಳು ಸಿಕ್ಕವು. “ಕನಕ’ದಲ್ಲಿ ವಿಧವೆ ಪಾತ್ರ, “ಸೂಜಿದಾರ’ದಲ್ಲಿ ಗೃಹಿಣಿ ಪಾತ್ರ, “ಸಂಹಾರ’ದಲ್ಲಿ ನೆಗೆಟಿವ್ ಪಾತ್ರ …ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳೇ ಸಿಕ್ಕಿವೆ’ ಎನ್ನುತ್ತಾರೆ ಹರಿಪ್ರಿಯಾ.
ಸವಿಸವಿ ನೆನಪು, ಸಾವಿರ ನೆನಪು: ಈ ವರ್ಷದ ಆರಂಭವೇ ಅದ್ಭುತವಾಗಿತ್ತಂತೆ ಹರಿಪ್ರಿಯಾ ಪಾಲಿಗೆ. “ಈ ವರ್ಷ ನನ್ನ ಮೊದಲ ಸಿನಿಮಾ ಆಗಿ “ಜೈ ಸಿಂಹ’ ಬಿಡುಗಡೆಯಾಗಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ಮತ್ತು ಅನಂತಪುರಕ್ಕೆ ಹೋಗಿ ಚಿತ್ರಮಂದಿರದಲ್ಲಿ ಚಿತ್ರ ನೋಡಿ ಬಂದೆ. ಅನಂತಪುರದಲ್ಲಿ 102 ಬ್ರಾಹ್ಮಣ ಕುಟುಂಬಗಳು ಚಿತ್ರ ನೋಡಿ, ನನಗೆ ಆಶೀರ್ವಾದ ಮಾಡಿದರು. ಇನ್ನು ಚಿಕ್ಕಬಳ್ಳಾಪುರ ನಾನು ಬೆಳೆದ ಜಾಗ. ಒಂಬತ್ತನೇ ಕ್ಲಾಸಿನವರೆಗೂ ನಾನು ಓದಿದ್ದು ಅಲ್ಲೇ.
ನನ್ನನ್ನ ರ್ಯಾಲಿಯಲ್ಲಿ ಕರೆದುಕೊಂಡು ಹೋದರು. ನಾನು ಓಡಾಡಿದ ಜಾಗ, ಓದಿದ ಸ್ಕೂಲು ಎಲ್ಲವೂ ನೋಡಿ ಹಳೆಯದೆಲ್ಲಾ ನೆನಪಾಯ್ತು. ಅಲ್ಲೂ ಸಹ ಅರಿಶಿನ ಕುಂಕುಮ ಕೊಟ್ಟು ಆಶೀರ್ವಾದ ಮಾಡಿದರು. ಎಷ್ಟೋ ಜನ ಬಂದು ನಾನು ನಿಮ್ಮಪ್ಪಂಗೆ ಕ್ಲೋಸ್ ಫ್ರೆಂಡು ಎಂದರು. ನಮ್ಮ ತಂದೆ ಚಂದ್ರಸೇನ ಅಂತ. ಅವರನ್ನೆಲ್ಲರೂ ಚಂದಿ ಅಂತ ಕರೆಯೋರು. ಅವರ ಎಷ್ಟೋ ಸ್ನೇಹಿತರು ಬಂದು ಮಾತಾಡಿಸಿ ಹೋದರು.
ಎಷ್ಟೋ ಜನರ ನೆನಪಿರಲಿಲ್ಲ. ಏಕೆಂದರೆ, ಹಲವು ವರ್ಷಗಳ ಹಿಂದೆಯೇ ಇಲ್ಲಿಗೆ ಬಂದ್ವಿ. ಅಲ್ಲಿ ಸಂಬಂಧಿಕರಿದ್ದರು. ಆಗಾಗ ಹೋಗಿ ಬರುತ್ತಿದ್ದುದು ಬಿಟ್ಟರೆ, ಬೇರೆ ಟಚ್ ಇರಲಿಲ್ಲ. ಇಲ್ಲಿಗೆ ಬಂದು ಆರಂಭದಿಂದ ಶುರು ಮಾಡಿದೆ. ಕಷ್ಟಪಟ್ಟು ಕೆಲಸ ಮಾಡಿದರೆ, ಒಳ್ಳೆಯದಾಗುತ್ತೆ ಅನ್ನೋದಕ್ಕೆ ನಾನೇ ಉದಾಹರಣೆ. ಅಲ್ಲಿಂದ ಇಲ್ಲಿಯವರೆಗೂ ಬಂದೆ’ ಎಂದು ನೆನಪಿಸಿಕೊಂಡು ಸ್ವಲ್ಪ ಭಾವುಕರಾಗುತ್ತಾರೆ ಹರಿಪ್ರಿಯಾ.
ಎರಡೂ ಕಡೆಗಳಲ್ಲಿ ತಪ್ಪಿರಬಹುದು: ಇನ್ನು ಇತ್ತೀಚೆಗೆ ನಟಿ ಶ್ರುತಿ ಹರಿಹರನ್ ಅವರು ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಅಂತಹ ಸಮಸ್ಯೆಗಳೇನಾದರೂ ಹರಿಪ್ರಿಯಾಗೂ ಆಗಿತ್ತೆ ಎಂದರೆ, “ನಾನು ಯಾರ ಪರ ಅಥವಾ ವಿರೋಧ ಮಾತಾಡುತ್ತಿಲ್ಲ. ಆದರೆ, ನನಗೆ ಯಾವತ್ತೂ ಅಂತ ಸಮಸ್ಯೆ ಆಗಿಲ್ಲ.
ಇದುವರೆಗೂ ಯಾರೂ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿಲ್ಲ. ಇಲ್ಲಿ ಸಂಪೂರ್ಣ ಪುರುಷರದ್ದೇ ತಪ್ಪು ಎನ್ನುವುದು ಕಷ್ಟ. ನಾವು ಹೇಗಿರುತ್ತೀವೋ ಅದು ಬಹಳ ಮುಖ್ಯ. ಕೆಲವೊಮ್ಮೆ ಹುಡುಗಿಯರದ್ದೂ ತಪ್ಪಿರುವ ಸಾಧ್ಯತೆ ಇದೆ. ಪಾತ್ರಕ್ಕಾಗಿ ಕೆಲವರು ಏನು ಬೇಕಾದರೂ ಮಾಡುತ್ತಾರೆ. ಹಾಗಾಗಿ ಇಲ್ಲಿ ಎರಡೂ ಕಡೆಗಳಲ್ಲಿ ತಪ್ಪಿರಬಹುದು’ ಎನ್ನುತ್ತಾರೆ ಹರಿಪ್ರಿಯಾ.
“ಕಳ್ಳರ ಸಂತೆ’ ಕಣ್ಣು ತೆರೆಸಿತು: ಸಿನಿಮಾ ವಿಷಯದಲ್ಲಿ ತಮ್ಮ ಕಣ್ಣು ತೆರೆಸಿದ್ದು ಸುಮನಾ ಕಿತ್ತೂರು ನಿರ್ದೇಶನದ “ಕಳ್ಳರ ಸಂತೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಹರಿಪ್ರಿಯಾ. “ನಿಜ ಹೇಳಬೇಕೆಂದರೆ, “ಕಳ್ಳರ ಸಂತೆ’ ನನ್ನ ಕಣ್ಣು ತೆರೆಸಿದ ಸಿನಿಮಾ. ಅದಕ್ಕೂ ಮುನ್ನ ಕೆಲವು ಚಿತ್ರಗಳಲ್ಲಿ ನಟಿಸಿದ್ದೆ. ಆದರೆ, ಅಲ್ಲಿ ಹೇಳಿದ್ದೇ ಒಂದು. ಆಗಿದ್ದೇ ಇನ್ನೊಂದು.
“ಕಳ್ಳರ ಸಂತೆ’ಯಿಂದ ಪ್ಯಾಶನ್ ಎಂದರೇನು ಎಂದು ಅರ್ಥ ಆಯ್ತು. ಹೇಗೆ ಒಂದು ಪಾತ್ರಕ್ಕೆ ತಯಾರಾಗಬೇಕು, ಹೇಗೆ ಹೋಂವರ್ಕ್ ಮಾಡಬೇಕು ಎಂದೆಲ್ಲಾ ಅರ್ಥವಾಯಿತು. ಆ ಚಿತ್ರದಲ್ಲಿ ನನಗೆ ಮತ್ತು ಯಶ್‌ಗೆಂದೇ ವರ್ಕ್‌ಶಾಪ್ ಮಾಡಿದ್ದರು. ಹಲವು ಚಿತ್ರಗಳ ರೆಫೆರೆನ್ಸ್ ಕೊಟ್ಟಿದ್ದರು. ಆ ಸಿನಿಮಾದಿಂದ ಸಿನಿಮಾ ಬಗ್ಗೆ ಪ್ರೀತಿ ಜಾಸ್ತಿ ಆಯ್ತು’ ಎಂದು ಹೇಳುತ್ತಾರೆ ಹರಿಪ್ರಿಯಾ.