Advertisement

ಆ ಒಂದು ಕ್ಷಣದ ನಿರ್ಧಾರ

02:40 AM Aug 04, 2019 | mahesh |

ಆತ್ಮಹತ್ಯೆ ಎಂದರೆ ಏನು ಎಂಬುದು ಮುಖ್ಯಪ್ರಶ್ನೆ. ಆತ್ಮದ ಹತ್ಯೆಯೆ? ಆತ್ಮವನ್ನು ಹತ್ಯೆ ಮಾಡಿಕೊಳ್ಳಲಾಗುತ್ತದೆಯೆ? ಅಂಥ ತಾತ್ತ್ವಿಕವಾದ ಜಿಜ್ಞಾಸೆಗಳೇನೇ ಇರಲಿ, ಆತ್ಮಹತ್ಯೆ ಎಂದರೆ ಸರಳವಾಗಿ ಹೇಳಬಹುದಾದ ವಿವರಣೆ ಎಂದರೆ ತನ್ನನ್ನು ತಾನು ಕೊಂದುಕೊಳ್ಳುವುದು! ಇಂಗ್ಲಿಶ್‌ನಲ್ಲಿ homicide ಎಂಬ ಪದವಿದೆ. ಅಂದರೆ ಬೇರೆಯವರನ್ನು ಕೊಲ್ಲುವುದು. suicide ಎಂಬುದು ಇನ್ನೊಂದು ಬಗೆಯ ಪದ. ಅಂದರೆ ತನ್ನನ್ನು ತಾನು ಕೊಲ್ಲುವುದು. ಇನ್ನೊಬ್ಬರನ್ನು ಕೊಲ್ಲುವುದು ಹೇಗೆ ತಪ್ಪೋ ಹಾಗೆಯೇ ತನ್ನನ್ನು ತಾನು ಕೊಂದುಕೊಳ್ಳುವುದು ಕೂಡ ಅಪರಾಧವೇ. ಕಾನೂನು ಕ್ರಮಗಳೇನೇ ಇರಲಿ, ಮಾನವೀಯ ದೃಷ್ಟಿಯಲ್ಲಿಯೂ ಇದು ಸರಿಯಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೆ ಈ ಸರಿಯಲ್ಲದ ಮಾರ್ಗವನ್ನು ಏಕೆ ಅನುಸರಿಸುತ್ತಾರೆ ಎಂಬುದು ಮುಖ್ಯಪ್ರಶ್ನೆ.

Advertisement

ಆತ್ಮಹತ್ಯೆ ಮಾಡಿಕೊಳ್ಳುವುದು ಯಾಕಾಗಿ?

ಸಾಮಾನ್ಯವಾಗಿ ಪ್ರೀತಿಯಲ್ಲಿ ಫೇಲ್ ಆದಾಗ, ಬಿಸಿನೆಸ್‌ನಲ್ಲಿ ಕೈಸುಟ್ಟುಕೊಂಡಾಗ, ಸಂಸಾರದಲ್ಲಿ ಸಹಮತ ಸಾಧ್ಯವಾಗದೇ ಇದ್ದಾಗ, ಪ್ರಯತ್ನಪಟ್ಟರೂ ಫ‌ಲ ಸಿಗದೇ ಹತಾಶೆಯಾದಾಗ… ಹೀಗೆ ಹಲವು ಕಾರಣಗಳಿಗಾಗಿ ಮಂದಿ ತಮ್ಮನ್ನು ತಾವು ಕೊಂದುಕೊಳ್ಳುತ್ತಾರೆ. ಇದು ಸಾಮಾನ್ಯವಾದ ಗ್ರಹಿಕೆ. ಇದು ನಿಜವೇ. ಆದರೆ, ಪೂರ್ಣ ನಿಜವಲ್ಲ.

ಆತ್ಮಹತ್ಯೆ ಸಂಭವಿಸುವುದು ದೀರ್ಘ‌ಕಾಲದ ಖನ್ನತೆಯ ಕಾರಣಕ್ಕಾಗಿ. ಇದ್ದಕ್ಕಿದ್ದಂತೆಯೇ ತನ್ನನ್ನು ತಾನು ಕೊಂದುಕೊಳ್ಳಬೇಕೆಂಬ ತೀರ್ಮಾನ ತೆಗೆದುಕೊಳ್ಳುವವರು ಕಡಿಮೆ. ಬಹುಕಾಲದಿಂದ ಡಿಪ್ರಶನ್‌ನಲ್ಲಿ ಬಳಲುತ್ತ, ಅದನ್ನು ಯಾರಲ್ಲಿಯೂ ಸರಿಯಾಗಿ ಹೇಳದೆ ತನ್ನೊಳಗೇ ಅವಿತಿಟ್ಟುಕೊಳ್ಳುತ್ತ, ಸರಿಯಾದ ಚಿಕಿತ್ಸೆ ಮಾಡದೆ ತನ್ನ ‘ವಿಲ್ಪವರ್‌’ನಿಂದಲೇ ಗುಣಪಡಿಸಿಕೊಳ್ಳುತ್ತೇನೆಂದು ಭಾವಿಸುತ್ತ ಇರುತ್ತಾರೆ.

ದೇಹದಲ್ಲೇನಾದರೂ ಸಮಸ್ಯೆಯಾದರೆ ಹೊರಗೆ ಕಾಣಿಸಿಕೊಳ್ಳುತ್ತದೆ. ಆದರೆ, ಮನಸ್ಸಿನ ಸಮಸ್ಯೆ ಅರಿವಿಗೆ ಬರುವುದಿಲ್ಲ. ಕಣ್ಣಿಗೆ ನೋವಾದರೆ ಅದು ಕೆಂಪಾಗುತ್ತದೆ. ಎಲ್ಲರೂ ಕೇಳುತ್ತಾರೆ, ‘ಕಣ್ಣೇಕೆ ಕೆಂಪಾಗಿದೆ?’ ಎಂದು. ಕಾಲು ನೋವಾದರೆ ಕುಂಟಿಕೊಂಡು ನಡೆಯುತ್ತೇವೆ. ಹೊಟ್ಟೆನೋವಾದರೆ, ಎದೆನೋವಾದರೆ ಕೂಡಲೇ ತಿಳಿಯುತ್ತದೆ. ಅಂಗಬಾಧೆಗಳಿಗೆ ಇಂತಿಂಥ ಡಾಕ್ಟರುಗಳ ಹತ್ತಿರ ಹೋಗಬೇಕೆಂದು ತಿಳಿದಿರುತ್ತದೆ. ಅಲ್ಲಿಗೆ ಹೋದ ಬಳಿಕ ದೇಹದಲ್ಲಾದ ಸಮಸ್ಯೆ ವಾಸಿಯೂ ಆಗುತ್ತದೆ.

Advertisement

ಆದರೆ, ಮನಸ್ಸಿನ ಸಮಸ್ಯೆ ಹೊರಗೆ ತೋರುವುದಿಲ್ಲ. ಮನಸ್ಸಿಗೆ ನೋವಾದರೂ ಅದು ಮುಖದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮನಸ್ಸಿಗಾದ ಗಾಯದಿಂದ ರಕ್ತ ಒಸರುವುದಿಲ್ಲ. ಹಾಗಾಗಿ, ಅದು ಚಿಕಿತ್ಸೆ ಮಾಡಬೇಕಾದ ಸಮಸ್ಯೆ ಎಂದೆನಿಸುವುದಿಲ್ಲ. ಹೆಚ್ಚಿನವರಿಗೆ ಮಾನಸಿಕ ಸಮಸ್ಯೆ ಎಂದು ಹೇಳಿಕೊಂಡು ಮನೋವೈದ್ಯರ ಬಳಿಗೆ ಹೋಗುವುದರಲ್ಲಿಯೇ ಒಂದು ಬಗೆಯ ಕೀಳರಿಮೆ ಇರುತ್ತದೆ. ದೇಹಕ್ಕೆ ಗಾಯವಾದಾಗ ಅದನ್ನು ಡಾಕ್ಟರಿಗೆ ತೋರಿಸುವಾಗ ಯಾವುದೇ ರೀತಿಯ ಹಿಂಜರಿಕೆ ಇರುವುದಿಲ್ಲ. ಆದರೆ ಮಾನಸಿಕ ಚಿಕಿತ್ಸೆಯ ಬಗ್ಗೆ ಒಂದು ಬಗೆಯ ‘ಸ್ಟಿಗ್ಮಾ’!

ಮನೋವೈದ್ಯೆಯಾದ ನನ್ನಲ್ಲಿ ಕೆಲವರು ಅಪಾಯಿಂಟ್ಮೆಂಟ್ ಕೇಳುತ್ತಾರೆ. ಕೇಳುವಾಗಲೇ ಒಂದು ಬಗೆಯ ಮುಜುಗರವಿರುತ್ತದೆ. ‘ತಮ್ಮನ್ನು ಮನೆಗೆ ಬಂದು ಕಾಣಬಹುದೆ?’ ಎಂದು ಕೇಳುವವರೂ ಇದ್ದಾರೆ. ಕ್ಲಿನಿಕ್‌ನಲ್ಲಿ ಎಲ್ಲರ ಮುಂದೆ ಚಿಕಿತ್ಸೆಗೊಳಗಾಗುವುದು ಅವರ ಘನತೆಗೆ ಕುಂದುಂಟು ಮಾಡುವ ವಿಚಾರವಾಗಿರುತ್ತದೆ.

ಯಾವಾಗ ಮನಸ್ಸಿನ ಸಮಸ್ಯೆಗೆ ಚಿಕಿತ್ಸೆ ಮಾಡಲು ಹಿಂದೇಟು ಹಾಕುತ್ತಾರೋ, ಆಗ ಕೆಲವರಲ್ಲಿ ಸಮಸ್ಯೆಗಳು ಉಲ್ಬಣಿಸುತ್ತವೆ. ಇದರಿಂದ ಮೂರು ಬಗೆಯ ಸಮಸ್ಯೆಗಳು ತಲೆದೋರುತ್ತವೆ.

hopelessness

helplessness

worthlessness

ಇನ್ನು ನನಗೆ ಬದುಕುವುದು ಸಾಧ್ಯವೇ ಇಲ್ಲ ಎಂಬಂಥ ಭರವಸೆ ಕಳೆದುಕೊಳ್ಳುವಂಥ ಸ್ಥಿತಿ ಹೋಪ್‌ಲೆಸ್‌ನೆಸ್‌. ತನಗೆ ಸಹಾಯಹಸ್ತ ಚಾಚುವವರೂ ಯಾರೂ ಇಲ್ಲ, ನಾನು ಒಂಟಿಯಾದೆ ಎಂಬುದು ಹೆಲ್ಪ್ಲೆಸ್‌ನೆಸ್‌ನ ಸ್ಥಿತಿ. ತಾನು ನಿಷ್ಪ್ರಯೋಜಕನಾದೆ, ಬದುಕಿ ಫ‌ಲವಿಲ್ಲ ಎಂಬುದು ವರ್ತ್‌ಲೆಸ್‌ನೆಸ್‌ನ ಭಾವ.

ಖನ್ನತೆ ನಿಧಾನವಾಗಿ ಆವರಿಸುತ್ತದೆ !
ಇದು ಒಮ್ಮಿಂದೊಮ್ಮೆಲೇ ಉಂಟಾಗುವ ಸ್ಥಿತಿಯಲ್ಲ. ನಿಧಾನವಾಗಿ ಇಂಥ ಮನೋಸ್ಥಿತಿ ಬೆಳೆದು ಬರುತ್ತದೆ. ಕೆಲವರು ದುರದೃಷ್ಟಕರವಾಗಿ ಜೀವನವನ್ನು ಕೊನೆಗಾಣಿಸುವ ನಿರ್ಧಾರ ತಳೆಯುತ್ತಾರೆ. ಸಂಪತ್ತು ಇದೆ, ಆಸ್ತಿ ಇದೆ, ಪೊಲಿಟಿಕಲ್ ಬ್ಯಾಕ್‌ಗ್ರೌಂಡ್‌ ಇದೆ, ಸಮೃದ್ಧ ವ್ಯವಹಾರ ಇದೆ, ಸಹಾಯ ಮಾಡುವ ಸ್ನೇಹಿತರ ಬಳಗವೂ ಇದೆ. ಆದರೂ ಬದುಕು ಬೇಡವೆನಿಸುತ್ತದೆ. ಯಾಕೆ ಹೀಗೆ?

ಇದು ಹಂತ ಹಂತವಾಗಿ ಬೆಳೆದುಬರುವ ಮನೋಸ್ಥಿತಿ.

ಇವತ್ತು ‘ಒತ್ತಡ’ಗಳ ದಿನ. ಜಗತ್ತು ವೇಗವಾಗಿ ಓಡುತ್ತದೆ, ತಾನು ಆ ವೇಗಕ್ಕೆ ಹೊಂದಿಕೊಳ್ಳಬೇಕೆಂಬ ಧಾವಂತದಲ್ಲಿ ಮನಸ್ಸಿನ ಮೇಲೆ ನೂರಾರು ‘ಸ್ಟ್ರೆಸ್‌’ ಗಳನ್ನು ತುಂಬಿಕೊಂಡಿರುತ್ತಾನೆ.

ವಲ್ಡ್ರ್ ಹೆಲ್ತ್ ಆರ್ಗನೈಸೇಶನ್‌ನ ಸಮೀಕ್ಷೆಯ ಪ್ರಕಾರ ಈ ದಿನಗಳಲ್ಲಿ ಮನುಕುಲವನ್ನು ನಾಶಮಾಡುವ ಕಾಯಿಲೆಗಳಲ್ಲಿ ‘ಒತ್ತಡ’ವೇ ಮುಂಚೂಣಿಯಲ್ಲಿದೆ. ಮೊದಲೆಲ್ಲ ಕಾಲರಾ ಬಂದು ಜನ ಸಾಯುತ್ತಿದ್ದರು. ಪ್ಲೇಗ್‌ ಬಂದು ದೊಡ್ಡ ಸಮುದಾಯವೇ ನಾಶವಾಗಿ ಬಿಡುತ್ತಿತ್ತು. ಕ್ಯಾನ್ಸರ್‌ ಮನುಕುಲಕ್ಕೆ ಮಾರಕ ಎಂದು ಭಾವಿಸುತ್ತಾರೆ. ಆದರೆ, ಕ್ಯಾನ್ಸರ್‌ ಬಂದರೂ ಅದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೈಗೊಂಡರೆ ಅದಕ್ಕೆ ಪರಿಹಾರವಿದೆ. ಆದರೆ, ಮಾನಸಿಕ ಒತ್ತಡಕ್ಕೆ ವೈದ್ಯಕೀಯ ಸಹಾಯ ಪಡೆಯಬೇಕು ಎಂದು ಅನ್ನಿಸುವುದೇ ಇಲ್ಲ.

ಹೆಚ್ಚಿನವರು ‘ನನಗೆ ತುಂಬಾ ಪ್ರಷರ್‌ ಆಗುತ್ತಿದೆ’ ಎನ್ನುತ್ತಾರೆ. ಆದರೆ, ಅದನ್ನು ನಿಭಾಯಿಸುವುದು ಹೇಗೆ? ಎಂಬ ಬಗ್ಗೆ ಯೋಚಿಸುವುದಿಲ್ಲ. ಒತ್ತಡವನ್ನು ನಿರ್ವಹಿಸುವುದು ಹೇಗೆ ಎಂದು ಬಾಲ್ಯದಿಂದಲೇ ನಮಗೆ ಹೇಳಿಕೊಡುವುದಿಲ್ಲ. ನಮ್ಮನ್ನು ನಾವೇ ಸುಧಾರಿಸಿಕೊಳ್ಳಬೇಕು ಎಂಬುದು ಸಾಮಾನ್ಯ ತೀರ್ಮಾನ. ವಿದ್ಯಾರ್ಥಿಗಳೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ! ಯುವ ಉದ್ಯೋಗಿಗಳೇಕೆ ಜೀವನಕ್ಕೆ ಇತಿಶ್ರೀ ಹಾಡುತ್ತಾರೆ! ಇವತ್ತಿನ ದಿನಗಳಲ್ಲಂತೂ ಹೆಚ್ಚಾಗಿ ಯುವಸಮುದಾಯವೇ ಒತ್ತಡದ ಸಮಸ್ಯೆಯಿಂದ ಬಳಲುತ್ತಿದೆ. ಅದನ್ನು ನಿರ್ವಹಿಸುವ ಕೌಶಲ ಅವರಲ್ಲಿಲ್ಲ. ಹಾಗಾಗಿ, ಅಧಿಕ ಖನ್ನತೆಗೆ ಒಳಗಾಗಿ ಬಾಳ್ವೆಗೆ ಮುಕ್ತಾಯ ಹಾಡುತ್ತಾರೆ.

ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ ಜಾಸ್ತಿಯಾಗುತ್ತಿದೆಯಂತೆ! ಪ್ರತಿ ನಾಲ್ಕು ಮಿನಿಟಿಗೆ ಒಬ್ಬ ಸೂಸೈಡ್‌ ಮಾಡಿಕೊಳ್ಳುತ್ತಾನೆ ಎಂದು ಒಂದು ಅವಲೋಕನ ಹೇಳುತ್ತದೆ. ಯುವ ಸಮುದಾಯದಲ್ಲಿಯೂ ಆತ್ಮಹತ್ಯೆಯ ಪ್ರಮಾಣ ಅಧಿಕವಾಗುತ್ತಿದೆ. ಬೆಂಗಳೂರನ್ನು ‘ಸೂಸೈಡ್‌ ಕ್ಯಾಪಿಟಲ್’ ಎಂದೇ ಕರೆಯಲಾಗುತ್ತದೆ.

ನನಗನ್ನಿಸುವಂತೆ ಒತ್ತಡವನ್ನು ನಿಭಾಯಿಸುವ ಬಗ್ಗೆ ಸಣ್ಣಂದಿನಿಂದಲೇ ಹೇಳಿಕೊಡಬೇಕು. ಡಿಪ್ರಶನ್‌ಗೆ ಚಿಕಿತ್ಸೆ ಪಡೆಯುವುದು ಕೀಳರಿಮೆಯ ಸಂಗತಿಯಲ್ಲ, ಅದೊಂದು ಸಹಜವಾದ ಕ್ರಿಯೆ ಎಂಬಂಥ ಮನೋಭಾವನೆ ಬೆಳೆಯಬೇಕು. ತನಗೆ ಮಾನಸಿಕ ಕಾಯಿಲೆ ಇದೆ ಎಂದರೆ ಯಾರಾದರೂ ತಪ್ಪು ತಿಳಿದುಕೊಳ್ಳುತ್ತಾರೋ ಏನೋ, ಮನೋವೈದ್ಯರ ಬಳಿಗೆ ಹೋದರೆ ಅವರು ನಿದ್ರೆಮಾತ್ರೆ ಕೊಟ್ಟು ಮಲಗಿಸಿಬಿಡುತ್ತಾರೋ ಏನೋ- ಎಂಬಂಥ ಅಪಕಲ್ಪನೆಗಳಿವೆ. ದೈಹಿಕ ಕಾಯಿಲೆಯ ಹಾಗೆ ಮಾನಸಿಕ ಸಮಸ್ಯೆಯನ್ನು ಬಹಳ ಕಡಿಮೆ ಅವಧಿಯಲ್ಲಿ ಗುಣಪಡಿಸಲಾಗುವುದಿಲ್ಲ. ಆದರೂ ಕೆಲವು ಕೇವಲ ಆಪ್ತಸಮಾಲೋಚನೆಯಿಂದಲೇ ನಿವಾರಣೆಯಾಗುತ್ತದೆ. ಇನ್ನು ಕೆಲವದಕ್ಕೆ ಸೀಮಿತ ಅವಧಿಯ ಔಷಧಿ ಸಾಕು. ಆದರೆ, ನಿಯಂತ್ರಣದ ಎಲ್ಲೆ ಮೀರಿದಾಗ ಮಾತ್ರ ತಿಂಗಳುಗಟ್ಟಲೆ ಮೆಡಿಕೇಶನ್‌ ಬೇಕಾಗುತ್ತದೆ.

ನಾವು ದೀಪಿಕಾ ಪಡುಕೋಣೆಯ ಉದಾಹರಣೆಯನ್ನೇ ಇಟ್ಟುಕೊಳ್ಳೋಣ. ಪ್ರಸಿದ್ಧಿ, ಪ್ರತಿಭೆ, ಸಂಪತ್ತು, ಸೌಂದರ್ಯ ಎಲ್ಲವೂ ಇದ್ದವು! ಆದರೆ, ಮಾನಸಿಕ ಖನ್ನತೆ ಆಕೆಯನ್ನೂ ಬಿಡಲಿಲ್ಲ. ಆದರೆ, ಆಕೆ ಕ್ಲುಪ್ತ ಸಮಯದಲ್ಲಿ ಡಾಕ್ಟರರನ್ನು ಸಮೀಪಿಸಿದರು. ಚಿಕಿತ್ಸೆ ತೆಗೆದುಕೊಂಡರು. ತನಗೆ ಮಾನಸಿಕ ಖನ್ನತೆ ಇತ್ತು ಎಂದು ಹೇಳಲು ಆಕೆಗೆ ಮುಜುಗರವಿಲ್ಲ. ಈಗ ಪೂರ್ಣ ಗುಣಮುಖರಾಗಿ ಪ್ರವೃತ್ತರಾಗಿದ್ದಾರೆ.

ಮೈಕೆಲ್ ಜಾಕ್ಸನ್‌ನಂಥ ಜಗತøಸಿದ್ಧ ಹಾಡುಗಾರನಿಗೂ ಮಾನಸಿಕ ಸಮಸ್ಯೆ ಇತ್ತಂತೆ. ರಾಬಿನ್‌ ವಿಲಿಯಮ್ಸ್‌ ಅಮೆರಿಕದ ಬಹಳ ದೊಡ್ಡ ವಿದೂಷಕ ನಟ. ಎಷ್ಟೊಂದು ಮಂದಿಯನ್ನು ನಗಿಸಿದ್ದಾನೆ ! ಆದರೆ ಆತನಿಗೂ ಮಾನಸಿಕ ಸಮಸ್ಯೆ ಇತ್ತು. ಸೂಕ್ತ ಚಿಕಿತ್ಸೆಗೆ ಒಳಪಡಲಿಲ್ಲ. ಆತ್ಮಹತ್ಯೆಗೆ ಶರಣಾದ.

ಜೀವವನ್ನು ಎರವಾಗಿಸುವುದು, ಬಾಳನ್ನು ಸಮಾಪ್ತಿಗೊಳಿಸುವುದು ತಪ್ಪು ಎಂಬ ತಿಳುವಳಿಕೆ ಮೂಡಿಸಬೇಕು ಎಂಬುದು ನಿಜವೇ. ಆದರೆ, ಅದಕ್ಕಿಂತ ಮುನ್ನ ಮಾನಸಿಕ ಖನ್ನತೆಗೆ ಚಿಕಿತ್ಸೆ ತೆಗೆದುಕೊಳ್ಳುವುದು ಅವಮರ್ಯಾದೆ ಎಂಬ ತಪ್ಪುತಿಳಿವಳಿಕೆಯನ್ನು ಹೋಗಲಾಡಿಸುವುದು ಸದ್ಯದ ಅಗತ್ಯ. ಹೆಚ್ಚಿನ ಸೂಸೈಡ್‌ಗಳು ಇದ್ದಕ್ಕಿದ್ದಂತೆ ಆದದ್ದಲ್ಲ. ಇಂಪಲ್ಸಿವ್‌ ಸೂಸೈಡ್‌ಗಳು ಬಹಳ ಕಡಿಮೆ. ಸೂಸೈಡ್‌ ಮಾಡಿಕೊಳ್ಳುವ ಮನೋಸ್ಥಿತಿಯನ್ನು ತಲುಪುವವರೆಗಿನ ಸ್ಥಿತಿ ಉಂಟಾಗಲು ಸಮಯ ಬೇಕು. ಆ ಸಮಯದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ.

ಆತ್ಮಹತ್ಯೆಯ ಪ್ರಯತ್ನಗಳನ್ನು ತಪ್ಪಿಸಲು ಸೂಸೈಡ್‌ ಹೆಲ್ಪ್ಲೈನ್‌ಗಳನ್ನು ಆರಂಭಿಸುವುದು ಕೂಡ ಅಗತ್ಯ. ಇಂಥ ಸೆಂಟರ್‌ಗಳು ಈಗ ಸಕ್ರಿಯವಾಗಿಲ್ಲ. ತನಗೆ ಯಾರೂ ಇಲ್ಲ ಎಂದೆನ್ನಿಸಿದಾಗ ಕೂಡಲೇ ಇಂಥ ಸೆಂಟರ್‌ಗಳಿಗೆ ಫೋನ್‌ ಮಾಡಿದರೆ, ಫೋನ್‌ ಸ್ವೀಕರಿಸಿದವರು ಆತ್ಮಸಮಾಲೋಚನೆ ಮಾಡುತ್ತಾರೆ. ಜೀವನದ ಕುರಿತು ಪ್ರೀತಿ ಮೂಡಿಸುತ್ತಾರೆ. ತನಗೆ ಆಪ್ತರಾದವರು ಯಾರಾದರೂ ಇದ್ದಾರೆ ಎಂಬ ಭರವಸೆ ಮಾಡುತ್ತದೆ.

ಡಾ . ಪ್ರೀತಿ ಪೈ

ಕೆಲವು ವರ್ಷಗಳ ಹಿಂದೆ, ಎಂಬಿಬಿಎಸ್‌ ಮಾಡಿದ ಬೆಂಗಳೂರಿನ ಹುಡುಗಿ, ಎಂ.ಡಿ.ಗೆ ಸೀಟು ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಳು. ಶೇ. 90ಕ್ಕೂ ಮೀರಿ ಅಂಕಗಳನ್ನು ಗಳಿಸಿದ್ದ ದಿಲ್ಲಿಯ ಈ ಹುಡುಗಿ ಪ್ರತಿಷ್ಠಿತ ಲೇಡಿ ಶ್ರೀರಾಮ್‌ ಕಾಲೇಜಿಗೆ ಪ್ರವೇಶ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಳು. ಕಳೆದ ಕೆಲವೇ ತಿಂಗಳಲ್ಲಿ ಬೆಂಗಳೂರಿನ ಹಲವಾರು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ನಾಲ್ಕೈದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಈ ಬುದ್ಧಿವಂತ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು ಎಂದರೆ, ನಮ್ಮ ಮಕ್ಕಳಿಗೆ ನಾವೇನು ಕಲಿಸುತ್ತಿದ್ದೇವೆ ಎಂಬ ಪ್ರಶ್ನೆ ಎದುರು ನಿಲ್ಲುತ್ತದೆ. ಬದುಕಿನ ಬೆಲೆಯನ್ನು ತಿಳಿಸದ ನಮ್ಮ ವಿದ್ಯೆ ವಿದ್ಯೆಯಲ್ಲ, ಜೀವನ ಮೌಲ್ಯವನ್ನು ಅರಿಯದ ಜಾಣತನದಿಂದ ಉಪಯೋಗವಿಲ್ಲ ಎಂದು ಸ್ಪಷ್ಟವಾಗುತ್ತದೆ.

ನಾವೆಲ್ಲರೂ ತ್ರೀ ಈಡಿಯಟ್ಸ್‌ ಚಿತ್ರ ನೋಡಿದ್ದೇವೆ, ಖುಷಿ ಪಟ್ಟಿದ್ದೇವೆ. ಆದರೆ ಈ ಚಿತ್ರ ನೀಡಿದ ಸಂದೇಶ ಮಾತ್ರ ಮರೆತು ಬಿಡುತ್ತೇವೆ. ಮತ್ತೆ ರೇಸಿನ ಕುದುರೆಗಳಾಗಿದ್ದೇವೆ. ಪಾಸಾಗದಿದ್ದರೆ, ‘ಫ‌ಸ್ಟ್‌’ ಬಾರದಿದ್ದರೆ, ಬದುಕೇ ಮುಗಿಯಿತೆಂದು ನೇಣು ಹಾಕಿಕೊಳ್ಳುತ್ತೇವೆ.

ಒಂದು ಪರೀಕ್ಷೆಯ ನಾಪಾಸನ್ನು, ಬಯಸಿದ ಕಾಲೇಜಿಗೆ ಪ್ರವೇಶ ಸಿಗದಿದ್ದನ್ನು ಅರಗಿಸಿ ಕೊಳ್ಳಲಾರದ‌ ಪೀಳಿಗೆ ಇಂದು ಸೃಷ್ಟಿಯಾಗಿದೆ. ತಂದೆತಾಯಿಯರಾಗಿ, ಪ್ರಾಧ್ಯಾಪಕರಾಗಿ, ಒಟ್ಟು ಸಮಾಜವಾಗಿ ನಾವೆಲ್ಲಿ ತಪ್ಪಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಮನೆಗಳಲ್ಲಿ, ನಮ್ಮ ಮನದಲ್ಲಿ, ನಮ್ಮ ಅಂತರಂಗದಲ್ಲಿ ಎಂತಹ ಪರಿಸರವನ್ನು ನಿರ್ಮಿಸಿ ನಿಲ್ಲಿಸಿದ್ದೇವೆ ಎಂದು ಒಮ್ಮೆ ಇಣುಕಿ ನೋಡಿಕೊಳ್ಳಬೇಕಿದೆ. ನಮ್ಮೊಳಗಿನ ಪ್ರಪಂಚವೇ, ಹೊರಗೆ ಪ್ರತಿಫ‌ಲಿಸುತ್ತದೆ.

ಗೆಲ್ಲುವುದು ಹೇಗೆ, ನಾಯಕನಾಗುವುದು ಹೇಗೆ, ಮುನ್ನುಗ್ಗುವುದು ಹೇಗೆ, ಮೇಲೇರುವುದು ಹೇಗೆ? ಎದೆ ಹಾಲಿನೊಡನೆ ಅರೆದು ಕುಡಿಸುತ್ತಿದ್ದೇವೆ. ಒಂದು ಕ್ಷಣ ಯೋಚಿಸಿ, ಸೋಲುವ ಬಗ್ಗೆ ತಿಳಿಸಿದ್ದೇವೆಯೆ? ಸೋಲುವುದನ್ನು ಕಲಿಸಬೇಕಿಲ್ಲ, ಆದರೆ ಸೋಲನ್ನು ಎದುರಿಸುವುದನ್ನು? ಸೋಲನ್ನು ಸ್ವೀಕರಿಸುವ ಬಗೆಯನ್ನು ಹೇಳಿಕೊಟ್ಟಿದ್ದೇವೆಯೆ? ಸಾವಿಲ್ಲದ ಮನೆಯ ಸಾಸಿವೆಯಂತೆ, ಸೋಲಿಲ್ಲದ ಮನೆಯ ಸಾಸಿವೆ ಸಿಕ್ಕೀತೆ?

ಸೋಲು ನಮ್ಮನ್ನು ಈ ಬಗೆಯಲ್ಲಿ ಸಾಯುವ ಹಂತಕ್ಕೆ, ಕೊಲ್ಲುವ ಮಟ್ಟಕ್ಕೆ ಏಕೆ ಪ್ರಭಾವಿಸಬೇಕು? ಸೋಲಿಗೆ ನಾವೇಕೆ ಅಂಜುತ್ತೇವೆ. ಸೋಲೊಂದು ಸವಾಲು, ಬದುಕಿನ ಪಾಠವಾಗಲಾರದೆ? ಸೋಲು ಏನಿದ್ದರೂ ಒಂದು ಅಲ್ಪವಿರಾಮ, ಅದು ‘ಫ‌ುಲ್ಸ್ಟಾಪ್‌’ ಅಲ್ಲವಲ್ಲ.

ಇವೆಲ್ಲ ಪರೀಕ್ಷೆಯಲ್ಲಿ ಸೋಲುವ ಕಥೆಗಳಾದರೆ, ಪ್ರೇಮದಲ್ಲಿ ವೈಫ‌ಲ್ಯಗಳು ಮತ್ತೆ ಆತ್ಮಹತ್ಯೆಗೆ, ಕೊಲೆಗೆ ಕಾರಣವಾಗುತ್ತವೆ. ಪತ್ರಿಕೆಯ ಕ್ರೈಮ್‌ ಪುಟವನ್ನು ದಿನವೂ ತುಂಬುತ್ತವೆ.

.

ಆತ್ಮಹತ್ಯೆ, ಎಳೆಯ ವಯಸ್ಸಿನ ಹುಡುಗರು, ಪರೀಕ್ಷೆ ಅಥವಾ ಪ್ರೀತಿಯಲ್ಲಿಯ ವೈಫ‌ಲ್ಯದಲ್ಲಿ ದುಡುಕಿ ತೆಗೆದುಕೊಳ್ಳುವ ನಿರ್ಧಾರ ಎಂದುಕೊಳ್ಳುತ್ತೇವೆ.

ಇಂದು ಪ್ರಬುದ್ಧ ವಯಸ್ಸಿನವರೂ, ಬದುಕಿನ ಸವಾಲುಗಳಲ್ಲಿ ಕುಸಿದು ಕೂರುವುದು ಆತಂಕ ಹುಟ್ಟಿಸುತ್ತದೆ.

ಹೀಗೆ ಕೆಲವು ವರ್ಷಗಳ ಹಿಂದೆ, ಬೆಂಗಳೂರಿನ ಬಿಇಎಲ್ ಕಾರ್ಖಾನೆಯ ಉನ್ನತ ಅಧಿಕಾರಿಯೊಬ್ಬರು ತಮ್ಮ 58ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಎಜಿಎಮ್‌ ಹುದ್ದೆಯಲ್ಲಿದ್ದ ಈತ ಬಡ್ತಿ ಸಿಗಲಿಲ್ಲವೆಂದು ತಮ್ಮ ಕಾರ್ಖಾನೆಯ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನನಗೆ ಅನಿಸಿತ್ತು ಈ ವಯಸ್ಸಿನಲ್ಲಿ ಬಡ್ತಿ ಅಷ್ಟು ಮುಖ್ಯವೆ? ತಾನು ಹಿಂದೆ ಬಿಟ್ಟು ಹೋಗುತ್ತಿರುವ ಮಡದಿಯ ಬಗ್ಗೆ, ಕುಟುಂಬದ ಬಗ್ಗೆ ಅವರು ಯೋಚಿಸಲಿಲ್ಲವೆ? ಬದುಕಿನ 58 ವರ್ಷಗಳು ನಮಗೆ ಬದುಕು ಪ್ರೀತಿಯನ್ನು ಕಲಿಸಲಿಲ್ಲವೆ?

.

ಬದುಕು ಅನಂತ ಅವಕಾಶಗಳನ್ನು, ಅನುಭವಗಳನ್ನು ನನ್ನ ಮಡಿಲಿಗೆ ಹಾಕಿದೆ. ನಾನು ಕಲಿತ ಬದುಕಿನ ಪಾಠಗಳನ್ನು, ಮ್ಯಾನೇಜ್‌ಮೆಂಟ್ ಮಂತ್ರಗಳನ್ನು, ಶಾಲೆ-ಕಾಲೇಜು, ಕಚೇರಿ-ಕಾರ್ಖಾನೆಗಳಲ್ಲಿ , ಪವರ್‌ ಪಾಯಿಂಟ್ ಪ್ರಸೆಂಟೇಶನ್‌ನೊಡನೆ ಹಂಚಿಕೊಳ್ಳುವುದುಂಟು. ಕಳೆದ ವರ್ಷ ಕಾಲೇಜೊಂದರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ, ಈ ‘ಸ್ಲೆ ೖಡ್‌’ ಹಾಕಿದ್ದೆ. ಸ್ನೇಹಿತರೊಬ್ಬರು ಕಳುಹಿಸಿದ್ದ ಪುಟ್ಟ ಕಪ್ಪೆಯ ಚಿತ್ರ- ಅಂಚಿಗೆ ಜಾರಿದ್ದರೂ, ತುದಿಯಲ್ಲಿ ನೇತಾಡುವ ಅದ್ಭುತ ಚಿತ್ರವನ್ನು ಬಳಸಿಕೊಂಡಿದ್ದೆ. ಅದಕ್ಕೊಂದು ತಲೆಬರಹವನ್ನು ನೀಡಿದ್ದೆ ಲೈಫ್ ಮೆ ಪುಷ್‌ ಯು ಓವರ್‌ ದಿ ಕ್ಲಿಫ್, ಹ್ಯಾಂಗ್‌ ಆನ್‌. ಮಕ್ಕಳಿಗೆ ಈ ‘ಸ್ಲೆ ೖಡ್‌’ ಬಲು ಖುಷಿ ಕೊಟ್ಟಿತ್ತು. ಅದನ್ನಿಲ್ಲಿ ಪ್ರಕಟಿಸುತ್ತಿದ್ದೇನೆ.

ಬದುಕು ನಮ್ಮನ್ನು ಅಂಚಿಗೆ ತಳ್ಳಿದಾಗ – ಲೆಟ್ ಅಸ್‌ ಹ್ಯಾಂಗ್‌ ಆನ್‌ ಕೈ ಬಿಡಬೇಡಿ, ಬದುಕಿನ ಬೆರಳ ಹಿಡಿದು ಹಿಂದೆ ಸರಿದು ಬನ್ನಿ. ಇದನ್ನೇ ನಮ್ಮ ಹಿರಿಯರು ಸರಳವಾಗಿ ಎರಡೇ ಪದಗಳಲ್ಲಿ ‘ತಾಳಿದವನು ಬಾಳಿಯಾನು’ ಎನ್ನುತ್ತಿದ್ದರು.

ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ.

ನಮ್ಮ ಬದುಕಿನ ನಿಘಂಟಿನಿಂದ ‘ಸೋಲು’ ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಲ್ಲ, ಎಲ್ಲವೂ ಸವಾಲು.

ನೇಮಿಚಂದ್ರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next