ಭೂ ಮಂಡಲದ ಅತ್ಯಾಕರ್ಷಕ ಹಾಗೂ ಅದ್ಭುತವಾದ ಸೃಷ್ಟಿಗಳಲ್ಲಿ ಮಳೆಯೂ ಒಂದು. ಮಳೆಯ ಆವಶ್ಯಕತೆ ಈ ಭೂಮಿಗೆ ಎಷ್ಟಿದೆಯೋ, ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಗಳಿಗೂ ಅಷ್ಟೇ ಇದೆ. ಭಾರತದಲ್ಲಿ ಸುಮಾರು ನಾಲ್ಕೈದು ತಿಂಗಳುಗಳ ಕಾಲ ಮಳೆ ಸುರಿಯುತ್ತದೆ. ಬೇಸಗೆಯ ಬಿಸಿಲಿನಲ್ಲಿ ಬೆಂದು ಬಾಯಾರಿದಂತಹ ಭೂಮಿ ತನ್ನ ದಾಹವನ್ನು ತೀರಿಸಿಕೊಳ್ಳುವ ಕಾಲವದು.
ಜಗತ್ತಿಗೆ ಅನ್ನ ನೀಡುವ ರೈತ ತನ್ನ ಬೆಳೆ ಬೆಳೆಯುತ್ತಿರುವುದನ್ನು ನೋಡಿ ನಲಿದಾಡುವ ಕಾಲವದು. ಬಿಸಿಲಿನ ತಾಪಕ್ಕೆ ಕಂಗೆಟ್ಟ ಪರಿಸರ ಮತ್ತೆ ಚಿಗುರೊಡೆಯುವ ಕಾಲವದು. ಇದೇ ಅವಧಿಯಲ್ಲಿ ಪರಿಸರ ಎಲ್ಲೆಡೆ ಹಸುರು ಬಣ್ಣವನ್ನು ತೊಟ್ಟುನಿಂತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇದನ್ನೆಲ್ಲಾ ನೋಡಿದಾಗ ಪ್ರಕೃತಿಗೂ ಮಳೆಗಾಲಕ್ಕೂ ಅವಿನಾಭಾವ ಸಂಬಂಧವಿದೆ ಎಂಬುದು ಖಂಡಿತವಾಗಿಯೂ ಅರ್ಥವಾಗುತ್ತದೆ.
ಜಗತ್ತಿನ ಕೋಟ್ಯಂತರ ಪ್ರವಾಸಿಗರ ಪೈಕಿ ನಾನೂ ಒಬ್ಬ ಪುಟ್ಟ ಪ್ರವಾಸಿಗ. ನನ್ನ ಬಹುತೇಕ ಪ್ರವಾಸ ಇರುವುದು ನನ್ನ ಜಿಲ್ಲೆಯಲ್ಲೇ. ಅದುವೇ ಕರ್ನಾಟಕದ ಸ್ವರ್ಗದ ಹೆಬ್ಟಾಗಿಲು ಎಂದು ಕರೆಯಲ್ಪಡುವ ಚಿಕ್ಕಮಗಳೂರು. ನನ್ನದು ಎಲ್ಲವೂ ಸಣ್ಣಪುಟ್ಟ ಪ್ರವಾಸಗಳಾಗಿರುವುದರಿಂದ ನಮ್ಮ ಜಿಲ್ಲೆಯ ಬೆಟ್ಟ, ಜಲಪಾತಗಳನ್ನು ಕಣ್ತುಂಬಿಕೊಳ್ಳುವುದೇ ನನಗೆ ಮಹದಾನಂದ.
ಇತ್ತೀಚೆಗೆ ಭಾರೀ ಮಳೆಯ ಮಧ್ಯವೂ ಸಣ್ಣ ಪ್ರವಾಸವೊಂದನ್ನು ಕೈಗೊಂಡಿದ್ದೆ. ನನ್ನ ಪ್ರವಾಸದ ಮೊದಲ ಭೇಟಿ ಕರ್ನಾಟಕದ ಅತೀ ಎತ್ತರದ ಶಿಖರ ಎಂದೇ ಗುರುತಿಸಿಕೊಂಡಿರುವ ಮುಳ್ಳಯ್ಯನಗಿರಿಗೆ. ಬೆಟ್ಟವನ್ನು ಹತ್ತುತ್ತಿದ್ದಂತೆ ಪ್ರಕೃತಿಯನ್ನು ಆವರಿಸುತ್ತಿದ್ದ ಮಂಜಿನ ವಾತಾವರಣವನ್ನು ಆಸ್ವಾಧಿಸುತ್ತಾ ಬೆಟ್ಟದ ಮೇಲೆ ತಲುಪಿ ಕೆಳಗೆ ನೋಡಿದಾಗ ಆಹಾ… ನಾನು ನಿಜವಾಗಿಯೂ ಬೇರೊಂದು ಲೋಕದಲ್ಲಿದ್ದೇನೆ ಎಂಬಂತೆ ಭಾಸವಾಗಿ ಮೂಕವಿಸ್ಮಿತನಾದೆ.
ಸುತ್ತಲಿನ ಯಾವ ಪ್ರದೇಶವೂ ಕಾಣದ ಹಾಗೆ ಹಬ್ಬಿದ ಮಂಜು, ಅಲ್ಪಸ್ವಲ್ಪ ಕಾಣುವ ಸುತ್ತುವರೆದ ಸರಣಿ ಬೆಟ್ಟ ಗುಡ್ಡಗಳು, ಹರಿದು ಬರುತ್ತಿದ್ದ ಪರಿಶುದ್ಧವಾದ ಜಲಧಾರೆ, ಮಳೆಗೆ ಚಿಗುರಿ ನಲಿದಾಡುತ್ತಿದ್ದ ಗಿಡ ಮರಗಳು ಇದನ್ನೆಲ್ಲ ನೋಡಿ ನಿಂತಾಗ ಸಮಯ ಕಳೆದದ್ದೇ ಗೊತ್ತಾಗಲಿಲ್ಲ.
ಮುಂದೆ ನನ್ನ ಪಯಣ ಝರಿ ಜಲಪಾತದ ಕಡೆಗೆ. ಕಾಫಿ ತೋಟ ಮಧ್ಯೆ ನುಸುಳುತ್ತಾ, ಜಿಗಣೆಗಳೊಂದಿಗೆ ಯುದ್ಧ ಮಾಡುತ್ತಾ ಸಾಗಿ ಮಹಿಳೆಯೊಬ್ಬಳು ತಲೆ ತುಂಬಾ ಹೂವು ಮುಡಿದು, ಒಡವೆಗಳನ್ನು ತೊಟ್ಟು ಸಿಂಗಾರಗೊಂಡಂತೆ ತನ್ನ ಮೈಯೆಲ್ಲ ನೀರಿನಿಂದ ಅಲಂಕರಿಸಿದಂತೆ ಕಾಣುವ ಝರಿ ಜಲಪಾತಕ್ಕೆ ತಲುಪಿದೆ. ಸುಮಾರು 70ರಿಂದ 80 ಅಡಿ ಎತ್ತರದಿಂದ ನೀರು ನೆಲಕ್ಕೆ ಧುಮುಕುವ ದೃಶ್ಯ ಸ್ವರ್ಗವೇ ಧರೆಗಿಳಿದಂತೆ ಕಾಣುತ್ತಿತ್ತು. ಸಮಯದ ಪರಿವಿಲ್ಲದೆ ಅಲ್ಲಿ ನೀರಿನಲ್ಲಿ ಆಟವಾಡಿ, ನಲಿದಾಡಿ ಬಳಿಕ ಮನೆಗೆ ಮರಳುವ ಹೊತ್ತಾಯಿತೆಂದು ಮುಖ ಬಾಡಿಸಿಕೊಂಡು ಅಲ್ಲಿಂದ ಹೊರಟೆ.
ಹೀಗೆ ಪ್ರಕೃತಿಯೊಂದಿಗೆ ನಾನು ನನ್ನ ಒಂದು ದಿನದ ಪುಟ್ಟ ಪ್ರವಾಸ ಮುಗಿಸಿದೆ. ದೇಶ ಸುತ್ತು, ಕೋಶ ಓದು ಎಂಬ ನಾಣ್ಣುಡಿಯಂತೆ ಜಗತ್ತಿನ ಆಗುಹೋಗುಗಳನ್ನು ಅರಿಯಲು ಹೊಸ ಜಾಗಗಳಿಗೆ ಭೇಟಿ ಕೊಡುತ್ತಿರೋಣ. ಸಮಯ ಸಿಕ್ಕಾಗ ಪ್ರಕೃತಿಯೊಂದಿಗೆ ಒಂದಾಗಿ ಕಾಲ ಕಳೆಯೋಣ.
-ಪವನ್ ಕುಮಾರ್
ಎಸ್‌ಡಿಎಂ, ಉಜಿರೆ