Advertisement
ಮಡಿವಾಳದ ಬಿಟಿಎಂ ಲೇಔಟ್ 1ನೇ ಹಂತದ ನಿವಾಸಿಗಳಾದ ಪುಟ್ಟಮ್ಮ ಹಾಗೂ ಮಗಳು ರತ್ನಮ್ಮ ವಂಚನೆಗೊಳಗಾದವರು. ಈ ಪೈಕಿ ರತ್ನಮ್ಮ ಅವರಿಗೆ ಪಾರ್ಶ್ವವಾಯು ತೊಂದರೆಯಿದ್ದು, ಈ ಖಾಯಿಲೆ ಗುಣಪಡಿಸುವುದಾಗಿ ನಂಬಿಸಿದ ಸ್ವಾಮಿ, ವಿಶೇಷ ಪೂಜೆ ನೆಪದಲ್ಲಿ ನ.3ರಂದು ಮಹಿಳೆಯರ ಮನೆಗೆ ಹೋಗಿದ್ದಾನೆ. ಈ ವೇಳೆ ಮತ್ತು ಬರುವ ಔಷಧ ಬೆರೆಸಿದ ನೀರನ್ನು “ಪವಿತ್ರ ತೀರ್ಥ’ ಎಂದು ನಂಬಿಸಿ ಕುಡಿಸಿದ್ದಾನೆ.
ಬಾಡಿಗೆ ಮನೆಯೊಂದರಲ್ಲಿ ಪುಟ್ಟಮ್ಮ ಕುಟುಂಬ ವಾಸವಾಗಿದ್ದು, ಅಶ್ವಥ್ ರೆಡ್ಡಿ ಹಾಗೂ ರತ್ನಮ್ಮ ಎಂಬ ಇಬ್ಬರು ಮಕ್ಕಳಿದ್ದಾರೆ. ಕಳೆದೊಂದು ವರ್ಷದಿಂದ ರತ್ನಮ್ಮ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಅವರ ಆರೈಕೆಗಾಗಿ ಮನೆಯಲ್ಲಿ ನರ್ಸ್ ಒಬ್ಬರನ್ನು ನೇಮಿಸಲಾಗಿತ್ತು. ನ.2ರಂದು ಔಷಧ ತರಲೆಂದು ಮನೆ ಬಳಿಯ ಮೆಡಿಕಲ್ ಸ್ಟೋರ್‌ಗೆ ಹೋಗಿದ್ದ ಪುಟ್ಟಮ್ಮ ಅವರಿಗೆ ನಕಲಿ ಸ್ವಾಮಿಯ ಪರಿಚಯವಾಗಿದೆ. ಈ ವೇಳೆ ಕಳ್ಳಸ್ವಾಮಿ ಎದುರು ಮಗಳ ಖಾಯಿಲೆ ಬಗ್ಗೆ ಪುಟ್ಟಮ್ಮ ಅಳಲು ತೋಡಿಕೊಂಡಿದ್ದಾರೆ.
Related Articles
ಪುಟ್ಟಮ್ಮ ಅವರ ಮುಗ್ಧತೆಯ ಲಾಭ ಪಡೆಯಲು ನಿರ್ಧರಿಸಿದ ಆರೋಪಿ, “ನಾನು ಮಠವೊಂದರ ಸ್ವಾಮೀಜಿಯಾಗಿದ್ದು, ನಿಮ್ಮ ಮಗಳ ಖಾಯಿಲೆ ಗುಣಪಡಿಸುತ್ತೇನೆ. ಕಾಯಿಲೆ ಗುಣ ಮಾಡಲು ನಿಮ್ಮ ಮನೆಯಲ್ಲಿ ವಿಶೇಷ ಪೂಜೆ ನಡೆಸಬೇಕು,’ ಎಂದು ಹೇಳಿದ್ದಾನೆ. ಹೇಗೋ ಮಗಳ ಕಾಯಿಲೆ ದೂರಾದರೆ ಸಾಕು ಎಂದೆಣಿಸಿದ ಪುಟ್ಟಮ್ಮ ಪೂಜೆಗೆ ಒಪ್ಪಿದ್ದಾರೆ.
Advertisement
“ಪೂಜೆ ಮಾಡುವುದು ಮನೆಯ ಗಂಡಸರಿಗೆ ಹಾಗೂ ನೆರೆಹೊರೆ ಮನೆಯವರಿಗೆ ತಿಳಿಸಬಾರದು. ದೇವರು ಪ್ರಸನ್ನನಾಗಬೇಕು ಎಂದಾದರೆ ಪೂಜೆ ವೇಳೆ ಇಬ್ಬರೂ ಚಿನ್ನಾಭರಣ ಧರಿಸಬೇಕು’ ಎಂದು ಪೂಜೆಯ ಮುನ್ನಾದಿನ ಪುಟ್ಟಮ್ಮ ಮತ್ತು ರತ್ನಮ್ಮ ಅವರಿಗೆ ಆರೋಪಿ ಹೇಳಿದ್ದಾನೆ. ನಿಗದಿಯಂತೆ ನ.3ರಂದು ಸಂಜೆ 7 ಗಂಟೆಗೆ ಕಳ್ಳಸ್ವಾಮಿ ಮನೆಗೆ ಬಂದಾಗ, ತಾಯಿ, ಮಗಳಿಬ್ಬರೂ ಚಿನ್ನಾಭರಣ ಧರಿಸಿ ಸಿದ್ಧರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆಯ ಪೂಜೆಗೆ ಸಿದ್ಧನಾಗೇ ಬಂದಿದ್ದ ಆರೋಪಿ, ಇಬ್ಬರನ್ನೂ ಪೂಜೆಗೆ ಕೂರಿಸಿ ಮತ್ತು ಬರುವ ಔಷಧ ಬೆರೆಸಿದ “ತೀರ್ಥ’ ಕುಡಿಸಿ, ಅವರು ಮೂಛೆì ಹೋದಾಗ ಆಭರಣ ದೋಚಿ ಪರಾರಿಯಾಗಿದ್ದಾನೆ. ಕೆಲ ಹೊತ್ತಿನ ಬಳಿಕ ಎಚ್ಚರಗೊಂಡ ತಾಯಿ, ಮಗಳು ಚಿನ್ನಾಭರಣ ಕಳುವಾಗಿರುವುದನ್ನು ಕಂಡು ಠಾಣೆಗೆ ದೂರು ನೀಡಿದ್ದಾರೆ. ರತ್ನಮ್ಮ ಅವರ ಆರೈಕೆಗಾಗಿ ನಿಯೋಜಿಸಿದ್ದ ನರ್ಸ್ ಕೂಡ ಕೆಲ ದಿನಗಳಿಂದ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.