ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಬಾಬು ಜಗಜೀವನರಾಂ ಅವರು ಯಾವುದೇ ಸೀಮಿತ ಜಾತಿ ಜನಾಂಗಕ್ಕೆ ದುಡಿಯದೇ ಮನುಷ್ಯತ್ವಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಕೋಡ್ಲಾದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ರಾಜಶೇಖರ ಮಾಂಗ ಹೇಳಿದರು.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಟೌನ್‌ಹಾಲ್ ಆವರಣದಲ್ಲಿರುವ ಡಾ| ಬಾಬು ಜಗಜೀವನರಾಂ ಪುತ್ಥಳಿ ಹತ್ತಿರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ ಡಾ| ಬಾಬು ಜಗಜೀವನರಾಂ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಡಾ| ಬಾಬು ಜಗಜೀವನರಾಂ ಅವರು ಕೇಂದ್ರ ಸರ್ಕಾರದಲ್ಲಿ ರಕ್ಷಣೆ, ನೀರಾವರಿ, ವಿಮಾನಯಾನ, ರೇಲ್ವೆ, ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.
ದೇಶವು ಹಸಿವಿನಿಂದ ಬಳಲುತ್ತಿರುವಾಗ ಕೃಷಿಯಲ್ಲಿ ವೈಜ್ಞಾನಿಕತೆ ತಂದು ಉತ್ಪಾದನೆ ಹೆಚ್ಚಿಸಿ ಹಸಿರು ಕ್ರಾಂತಿ ಮೂಡಿಸಿದರು. ಇದರೊಂದಿಗೆ ಬೇರೆ ಬೇರೆ ರಾಜ್ಯಗಳ ನೀರಿನ ಸಮಸ್ಯೆಗಳನ್ನು ಸಹ ಬಗೆಹರಿಸಿದ್ದರು ಎಂದು ವಿವರಿಸಿದರು.
ಡಾ| ಬಾಬು ಜಗಜೀವನರಾಂ ಪುತ್ಥಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮಾಲಾರ್ಪಣೆ ಮಾಡಿದರು. ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ ಯುಸೂಫ್, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಂದೇ ನವಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಡಿವೈಎಸ್‌ಪಿ ಪಿ.ಕೆ. ಚೌದರಿ, ಮುಖಂಡರಾದ ನಾಗರಾಜ ಗುಂಡಗುರ್ತಿ, ಚಂದ್ರಿಕಾ ಪರಮೇಶ್ವರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಬಸಯ್ಯ ಗುತ್ತೇದಾರ ಮತ್ತು ತಂಡದವರು ಜಗದರಾಮ ನೀನು, ಯುಗದ ರಾಮ ನೀನು ಹಾಗೂ ಜಗವನು ಬೆಳಗಿದ ಜಗದೋದ್ಧಾರ ಜಗಜೀವನರಾಮರೆಂಬ ಚೇತನ ಎನ್ನುವ ಹಾಡುಗಳನ್ನು ಪ್ರಸ್ತುತಪಡಿಸಿದರು.