ಧಾರವಾಡ: ಮಿದುಳಿನ ಸಮಸ್ಯೆಯಿಂದ ಸಾವಿನಂಚಿಗೆ ಬಂದು ನಿಂತಿದ್ದ ಮಗಳಿಗೆ ಮರುಜೀವ ಸಿಗುವಂತೆ ಮಾಡಿದ ಯೋಜನೆಯೊಂದರ ನೆರವು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ ತಂದೆ… ಬರಗಾಲದಲ್ಲಿ ಹಸಿವು ನೀಗಿಸಿದ ಅನ್ನಭಾಗ್ಯ ಯೋಜನೆಗೆ ಧನ್ಯವಾದ ಹೇಳಿದ ಫಲಾನುಭವಿಗಳು…
ಅದೇ ರೀತಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಫಲಾನುಭವಿಗಳ ಮಧ್ಯೆ ಹಳ್ಳಿ ಜನಕ್ಕ ಅದು ಗ್ಯಾಸ್ ಇದ್ದವರಿಗೂ ಚಿಮಣಿ ಎಣ್ಣೆ ಕೊಡಿಸುವಂತೆ ಸಚಿವರಿಗೆ ಗಟ್ಟಿ ಧ್ವನಿಯಲ್ಲಿ ಕೇಳಿದ ಸಿದ್ದವ್ವ…! ನಗರದ ಕಲಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಜರುಗಿದ ಜನಮನ ಕಾರ್ಯಕ್ರಮದಲ್ಲಿ ಯೋಜನೆಗಳ ಫಲಾನುಭವಿಗಳು ತಮ್ಮ ಅನಿಸಿಕೆ ಹಂಚಿಕೊಂಡ ಪರಿಯಿದು
ಅನ್ನಭಾಗ್ಯ, ಪಶುಭಾಗ್ಯ ಸೇರಿದಂತೆ ವಿವಿಧ ಯೋಜನೆಗಳಿಂದ ತಮಗಾಗಿರುವ ಅನುಕೂಲತೆಗಳನ್ನು ಕೆಲ ಫಲಾನುಭವಿಗಳು ಹೇಳಿದರೆ, ಮತ್ತೆ ಕೆಲವರು ಉತ್ತಮ ಯೋಜನೆಗಳಿದ್ದು ಗ್ರಾಮೀಣ ಮಟ್ಟದಲ್ಲಿ ಯೋಜನೆಗಳ ಮಹತ್ವದ ಅರಿವಿಲ್ಲ. ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳು ಮುಟ್ಟಬೇಕೆಂಬ ಅಭಿಪ್ರಾಯ ಕೂಡ ಕೇಳಿ ಬಂತು. ಜನಮನ ಕಾರ್ಯಕ್ರಮ ಮೂಲಕ ಜನರ ಸಂಕಷ್ಟ ಅರಿಯುವ ಈ ಕೆಲಸ ಒಳ್ಳೆಯದು.
ಅದರಲ್ಲೂ ಅನ್ನಭಾಗ್ಯ ಯೋಜನೆಯಡಿ ಸಿಗುವ ಅಕ್ಕಿಯಿಂದ ಬರದ ಬವಣೆಯಿಂದ ಪಾರಾಗಿದ್ದೇವೆ ಎಂದು ಫಲಾನುಭವಿ ಸಯ್ಯದ್‌ಸಾಬ್ ಹನಮನಾಳ ಹೇಳಿದರು. ಪಶುಭಾಗ್ಯ ಯೋಜನೆಯಡಿ ಒಂದು ಆಕಳು ಖರೀದಿ ಮಾಡಿ ಪ್ರತಿ ತಿಂಗಳು ಹತ್ತು ಸಾವಿರ ಆದಾಯ ಸಿಕ್ಕಿರುವ ಸಂತಸ ಹಂಚಿಕೊಂಡ ಗ್ರಾಮೀಣ ಮಹಿಳೆ ಸಿದ್ದವ್ವ, ಪಶು ಭಾಗ್ಯ ಯೋಜನೆಯಡಿ ಒಂದು ಆಕಳು ಖರೀದಿ ಮಾಡಿದ್ದು, ಈಗ ಪ್ರತಿ ದಿನ ಅದು 20 ಲೀಟರ್ ಹಾಲು ನೀಡುತ್ತಿದೆ ಎಂದರು.
ಇದಕ್ಕೆ ಸಂತಸ ವ್ಯಕ್ತಪಡಿಸಿದ ಸಚಿವ ವಿನಯ್, ಹೈನುಗಾರಿಕೆ ಇದ್ರೆ ಸಾಕು ಬದುಕಬಹುದು. ಈಗಂತೂ ಒಂದು ಆಕಳಿನ ಲಾಭದಲ್ಲಿ ಓರ್ವ ಎಂಜಿನೀಯರ್ ದುಡಿಯುವಷ್ಟು ನೀನು ದುಡಿಯುತ್ತಾ ಇರುವೆ. ಇನ್ನು 2-3 ಆಕಳು ಮಾಡಿ ಸಾಫ್ಟ್ವೇರ್ ಎಂಜಿನೀಯರ್ ಕೂಡ ನಿನ್ನಷ್ಟು ಸಂಬಳ ಪಡೆಯಲಾರ ಎಂದರು. ಒಟ್ಟಾರೆ ಸುಮಾರು 50 ಫಲಾನುಭವಿಗಳು ಯೋಜನೆಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.