Advertisement

ತಣ್ಣೀರುಪಂತ: 93 ವರ್ಷದ ಶಾಲೆ ಶಿಥಿಲ

10:53 AM Jul 27, 2018 | |

ಉಪ್ಪಿನಂಗಡಿ : ಗ್ರಾಮೀಣ ಭಾಗದಲ್ಲಿ ಬರೋಬ್ಬರಿ 93 ವರ್ಷ ಹಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಕಟ್ಟಡದಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮಣ್ಣಿನ ಗೋಡೆಯ ಕೋಣೆಯೊಳಗೆ ತಮಗರಿವಿಲ್ಲ ದೆಯೇ ಖುಷಿಯಿಂದ ಮಕ್ಕಳು ನಲಿದಾಡುತ್ತಿದ್ದಾರೆ. ಅಪಾಯದಲ್ಲಿರುವ ಶಾಲಾ ಕಟ್ಟಡದತ್ತ ಸಂಬಂಧಪಟ್ಟವರು ಗಮನ ಹರಿಸದೇ ಇದ್ದಲ್ಲಿ ಯಾವುದೇ ಕ್ಷಣದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ.

Advertisement

ಈ ಶಾಲೆ ಇರುವುದು ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದಲ್ಲಿ. ಇಲ್ಲಿ 1ರಿಂದ 8ನೇ ತರಗತಿ ವರೆಗಿನ ಒಟ್ಟು 124 ವಿದ್ಯಾರ್ಥಿಗಳು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕಟ್ಟಡದಲ್ಲಿ 8 ತರಗತಿ ಕೋಣೆಗಳಿದ್ದು, ಈ ಪೈಕಿ 2 ಕೋಣೆಗಳ ಛಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ಶಾಲೆಯ ಆವರಣ ಗೋಡೆ ಸಂಪೂರ್ಣ ಕುಸಿದಿದೆ. ಕೊಠಡಿಯ ಮೇಲೆ ಮರವೊಂದು ವಾಲಿಕೊಂಡಿದೆ.

ಮನವಿಗೂ ಸ್ಪಂದನೆ ಇಲ್ಲ
ಈ ಶಾಲೆಗೆ ಬರುವ ಶಿಕ್ಷಕರೂ ಇಲ್ಲಿರಲು ಹಿಂಜರಿಯುತ್ತಾರೆ. ವರ್ಗಾವಣೆಯಾಗಲಿ ಎಂದು ಬಯಸುತ್ತಾರೆ. ಆದರೆ ಯಾರೂ ಕೂಡ ಬಹಿರಂಗವಾಗಿ ಹೇಳಿಕೊಳ್ಳಲು ಮುಂದೆ ಬರುವುದಿಲ್ಲ. ಸಂಬಂಧಪಟ್ಟವರು ಕಳೆದೈದು ವರ್ಷಗಳಿಂದ ನೂತನ ಕಟ್ಟಡ ನಿರ್ಮಿಸುವಂತೆ ಹತ್ತಾರು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಗತಿಯಾಗಿಲ್ಲ.

2 ಕೊಠಡಿಗಳಿಗೆ ಬೀಗ!
ಈ ಶಾಲಾ ಕಟ್ಟಡಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಿಂದೆಯೇ ಗ್ರಾಮಸ್ಥರು ಶಿಕ್ಷಣ ಇಲಾಖೆಯನ್ನು ತರಾಟೆ ತೆಗೆದುಕೊಂಡಿದ್ದರು. ಆನಂತರದಲ್ಲಿ ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಸಂಯೋಜಕರನ್ನು ಕಳುಹಿಸಿದ್ದರು. ಅವರು ಪರಿಶೀಲನೆ ನಡೆಸಿ ಕಟ್ಟಡದ 2 ಕೊಠಡಿಗಳಿಗೆ ಬೀಗ ಹಾಕಿ ಸಿದ್ದು, ಉಳಿದ 6 ಕೊಠಡಿಗಳಲ್ಲಿ ಮಾತ್ರ ಪಾಠ ಮಾಡುವಂತೆ ಸೂಚಿಸಿದ್ದರು. ಆದರೆ ಇಲ್ಲಿ ತೀರಾ ಅಪಾಯದಲ್ಲಿರುವ 2 ಕೊಠಡಿಗಳಿಗೆ ಹೊಂದಿಕೊಂಡೇ ಇತರ ಕೊಠಡಿಗಳಿದೆ. ಆ ಕೋಣೆಗಳ ಛಾವಣಿ ಮುರಿದರೆ ಇತರ 6 ಕೋಣೆಗಳಿಗೂ ಅದರ ಪರಿಣಾಮ ಬೀರುತ್ತದೆ.

ಬಂದ ಅನುದಾನ ವರ್ಗಾವಣೆ
ಎರಡು ವರ್ಷಗಳ ಹಿಂದೆ ಮಾಜಿ ಶಾಸಕ ವಸಂತ ಬಂಗೇರ ಅವರು ಮಕ್ಕಳಿಗೆ ಸೈಕಲ್‌ ವಿತರಣೆಗೆಂದು ಈ ಶಾಲೆಗೆ ಬಂದವರು ಕೋಣೆಗಳ ದುಃಸ್ಥಿತಿಯನ್ನು ಕಂಡಿ ದ್ದಾರೆ. ತತ್‌ ಕ್ಷಣವೇ ಜಿ.ಪಂ. ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲನೆ ಮಾಡಿಸಿದ್ದಾರೆ. 12 ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಿಸುವ ಭರವಸೆಯನ್ನೂ ಶಾಸಕರು ನೀಡಿದ್ದರು. ಕಟ್ಟಡದ ರಿಪೇರಿಗೆ 4 ಲಕ್ಷ ರೂ. ಅನುದಾನ ಒದಗಿಸಿಕೊಡುವಂತೆ ಶಾಲಾ ಮುಖ್ಯ ಶಿಕ್ಷಕರು ಬೇಡಿಕೆ ಇಟ್ಟಿದ್ದರು. ಆನಂತರದಲ್ಲಿ 12 ಲಕ್ಷ ರೂ. ಅನುದಾನ ಮಂಜೂರಾಗಿದ್ದರೂ, ಅದು ಪುತ್ತಿಲ ಗ್ರಾಮದ ಹೇರಾಜೆ ಶಾಲೆಗೆ ವರ್ಗಾವಣೆಗೊಂಡಿತ್ತು. ಶಾಲೆಯ ಸ್ಥಿತಿ ಗಂಭೀರವಾಗಿದ್ದರೂ, ಕ್ಷೇತ್ರ ಶಿಕ್ಷಣಾಕಾರಿಗಳು ಖುದ್ದು ಪರಿಶೀಲನೆ ನಡೆಸಿಲ್ಲದಿರುವುದು ಖೇದಕರ ಎಂದು ಗ್ರಾಮಸ್ಥರು ಹೇಳಿದ್ದಾರೆ.

Advertisement

ಮಾಹಿತಿ ಬಂದಿಲ್ಲ
ತಣ್ಣೀರುಪಂತ ಸರಕಾರಿ ಶಾಲೆ ಅಪಾಯದ ಸ್ಥಿತಿಯಲ್ಲಿರುವ ಕುರಿತು ಯಾವುದೇ ಮಾಹಿತಿ ಈವರೆಗೆ ಬಂದಿಲ್ಲ. ಒಂದೊಮ್ಮೆ ಮನವಿ ಬಂದರೆ ಮೇಲಧಿಕಾರಿಗಳ ಮೂಲಕ ಸರಕಾರದ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು.
– ಗುರುಪ್ರಸಾದ್‌
 ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ

ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next