ಥಾಣೆ : ಇಲ್ಲಿಗೆ ಸಮೀಪದ ಅಂಬಾರ್ಡೆ ಗ್ರಾಮದ ನಿವಾಸಿಯಾಗಿರುವ 27 ವರ್ಷದ ಮಹಿಳೆ ವೈಶಾಲಿ ಪ್ರಧಾನ್ ಎಂಬಾಕೆ ವಾರದ ಹಿಂದಷ್ಟೆ ತಾನು ಹೆತ್ತಿದ್ದ ತನ್ನ 3ನೇ ಹೆಣ್ಣು ಮಗುವಿನ ಕತ್ತು ಸೀಳಿ ಕೊಂದಿದ್ದು ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಶಾಲಿ ಪ್ರಧಾನ್‌ಗೆ 5 ಮತ್ತು 3 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡ ದಿನ ನಿತ್ಯದ ಕುಡುಕನಾಗಿದ್ದು ಮೂವರು ಹೆಣ್ಣು ಮಕ್ಕಳನ್ನು ಪಾಲಿಸಿ ಪೋಷಿಸುವುದು ತನ್ನ ಬಡಕುಟುಂಬಕ್ಕೆ ಕಷ್ಟ ಎಂಬ ತೀರ್ಮಾನಕ್ಕೆ ಬಂದ ಆಕೆ ತನ್ನ ನವಜಾತ ಶಿಶುವನ್ನು ಕಳೆದ ಶನಿವಾರ ತನ್ನ ಹರಿತವಾದ ಉಗುರಿನಿಂದ ಕತ್ತು ಸೀಳಿ ಕೊಂದಳು. ಬಳಿಕ ಮಗುವನ್ನು ಚಿಕಿತ್ಸೆಗೆಂದು ಥಾಣೆಯ ಸರಕಾರಿ ಆಸ್ಪತ್ರೆಗೆ ಒಯ್ದಳು. ಅಲ್ಲಿನ ವೈದ್ಯರಿಗೆ ಸಂಶಯ ಬಂದು ಅವರು ಪೊಲೀಸರಿಗೆ ಮಾಹಿತಿ ನೀಡಿದರು
ಮಗುವಿನ ಕತ್ತು ಸೀಳಿದಾಗ ಅದು ತೀವ್ರ ರಕ್ತಸ್ರಾವಕ್ಕೆ ಗುರಿಯಾಗಿತ್ತು. ಆದರೂ ಆ ಬಗ್ಗೆ ಕಂಗಾಲಾಗದೆ ವೈಶಾಲಿ ಮಗವನ್ನು ಹೆಗಲಿಗೇರಿಸಿಕೊಂಡು ಆಸ್ಪತ್ರೆಗೆ ಹೋಗುವಾಗ ನೆರೆಯವರು ಸಂಶಯಪಟ್ಟು ಪೊಲೀಸರಿಗೆ ಕರೆ ಮಾಡಿದ್ದರು.
ನವಜಾತ ಶಿಶುವನ್ನು ಕೊಂದ ಆರೋಪದ ಮೇಲೆ ಖಡಕ್‌ಪಾಡಾ ಪೊಲೀಸರು ನಿನ್ನೆ ಭಾನುವಾರ ವೈಶಾಲಿಯನ್ನು ಬಂಧಿಸಿ ಕೇಸು ದಾಖಲಿಸಿಕೊಂಡರು.
ಮೂರನೇ ಮಗುವಿನ ಗರ್ಭವನ್ನು ತೆಗೆಸಲು ವೈಶಾಲಿ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದಳು. ಆಕೆ ಕುಡುಕ ಗಂಡ ಆ ಹಣವನ್ನು ಕೂಡ ಕದ್ದು ಕುಡಿತಕ್ಕೆ ಬಳಸಿದ ಎಂದು ತಿಳಿದು ಬಂದಿದೆ.