ಮುಂಬಯಿ: ಆನಂದ್ ನಗರ್ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಒಂದೇ ನಿಮಿಷದಲ್ಲಿ ಮೂರು ಕೋವಿಡ್ ಡೋಸ್ ಲಸಿಕೆ ಪಡೆದುಕೊಂಡಿರುವುದಾಗಿ ಥಾಣೆಯ 28 ವರ್ಷದ ಮಹಿಳೆಯೊಬ್ಬರು ದೂರಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ದಾಖಲೆ ಪ್ರಮಾಣದ ಕೋವಿಡ್ 19 ಪ್ರಕರಣ ಇಳಿಕೆ; 907 ಮಂದಿ ಸಾವು
ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಉದ್ಯೋಗಿಯಾಗಿರುವ ಪತಿಯ ಬಳಿ ಪತ್ನಿ ತನಗೆ ಮೂರು ಕೋವಿಡ್ ಇಂಜೆಕ್ಷನ್ ನೀಡಿರುವ
ವಿಷಯ ತಿಳಿಸಿದ ನಂತರ ಈ ಬೇಜವಾಬ್ದಾರಿ ಘಟನೆ ಬೆಳಕಿಗೆ ಬಂದಿರುವುದಾಗಿ ವರದಿ ತಿಳಿಸಿದೆ. ಈ ವಿಷಯವನ್ನು ಆಕೆಯ ಪತಿ ಸ್ಥಳೀಯ ಕಾರ್ಪೋರೇಟರ್ ಗೆ ತಿಳಿಸಿದ್ದರು.
ಇದೀಗ ಮಹಿಳೆಯ ಆರೋಗ್ಯದ ಬಗ್ಗೆ ಮಹಾನಗರ ಪಾಲಿಕೆ ನಿಗಾ ವಹಿಸಿರುವುದಾಗಿ ವರದಿ ತಿಳಿಸಿದೆ. ಆದರೆ ತನ್ನ ಪತಿ ಸ್ಥಳೀಯ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಾನು ದೂರು ನೀಡುವ ವಿಚಾರದಲ್ಲಿ ಆಸಕ್ತಿ ಹೊಂದಿಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಒಂದೇ ಬಾರಿ ಮೂರು ಕೋವಿಡ್ ಇಂಜೆಕ್ಷನ್ ಪಡೆದ ನಂತರ ತನ್ನ ಪತ್ನಿಗೆ ಜ್ವರ ಕಾಣಿಸಿಕೊಂಡಿತ್ತು. ಆದರೆ ಮರುದಿನ ಆಕೆ ಆರೋಗ್ಯವಾಗಿದ್ದಳು ಎಂದು ಪತಿ ತಿಳಿಸಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೇ ಜತೆ ಮಾತನಾಡಿರುವ ಆರೋಗ್ಯಾಧಿಕಾರಿ ಡಾ.ಖುಷ್ಬೂ ತಾವ್ರೆ, ಸಂತ್ರಸ್ತೆಯ ಮನೆಗೆ ವೈದ್ಯರ ತಂಡ ಭೇಟಿ ನೀಡಿ, ಆಕೆಯ ಆರೋಗ್ಯದ ಪರಿಶೀಲನೆ ನಡೆಸಿದೆ. ಈ ಬಗ್ಗೆ ತನಿಖೆ ನಡೆಸಲು ನಾವು ಸಮಿತಿಯನ್ನು ರಚಿಸಿದ್ದೇವೆ ಎಂದು ಹೇಳಿದರು.