ಸಾಗರ: ತಾಲೂಕಿನ ತಾಳಗುಪ್ಪಕ್ಕೆ ಮಂಜೂರಾಗಿದ್ದ ರೈಲ್ವೆ ಟರ್ಮಿನಲ್‌ನ್ನು ಶಿವಮೊಗ್ಗ ಸಮೀಪದ ಕೋಟೆಗಂಗೂರಿಗೆ ಸ್ಥಳಾಂತರಿಸಿರುವುದನ್ನು ಖಂಡಿಸಿ ಡಿ.31ರಂದು ಮಲೆನಾಡು ರೈಲ್ವೆ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಪರಮೇಶ್ವರ ದೂಗೂರು ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 31ರಂದು ಬೆಳಗ್ಗೆ 11ಕ್ಕೆ ಗಣಪತಿ ದೇವಸ್ಥಾನದಿಂದ ಪ್ರತಿಭಟನಾ ರ್ಯಾಲಿ ಹೊರಡಲಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ನಂತರ ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ರೈಲ್ವೆ ಹೋರಾಟ ಸಮಿತಿ ಮತ್ತು ಮಲೆನಾಡು ರೈಲ್ವೆ ಹೋರಾಟ ಸಮಿತಿ ಜಂಟಿಯಾಗಿ ರೈಲ್ವೆ ಟರ್ಮಿನಲ್ ತಾಳಗುಪ್ಪದಲ್ಲಿಯೇ ನಿರ್ಮಾಣ ಮಾಡಬೇಕು ಎನ್ನುವ ಹಕ್ಕೊತ್ತಾಯವನ್ನು ಮಂಡಿಸಲಿದೆ. ಈಗಾಗಲೇ ರೈಲ್ವೆ ಹೋರಾಟ ಸಮಿತಿಯ ಹಿರಿಯರನ್ನು ಸಂಪರ್ಕಿಸಿ ಅವರ ಸಹಕಾರವನ್ನು ಕೋರಲಾಗಿದೆ. ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 90 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಜತೆಗೆ ರೈಲ್ವೆ ಇಲಾಖೆಗೆ ಸೇರಿದ 12 ಎಕರೆ ಜಾಗ ತಾಳಗುಪ್ಪದಲ್ಲಿದೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಾಳಗುಪ್ಪದಲ್ಲಿ ಟರ್ಮಿನಲ್ ಮಾಡಲು ಸೂಕ್ತ ಸ್ಥಳಾವಕಾಶವಿದೆ ಎಂಬ ಮಾಹಿತಿ ನೀಡಿದ್ದಾರೆ. ತಾಳಗುಪ್ಪದಲ್ಲಿ ಟರ್ಮಿನಲ್ ಸ್ಥಾಪನೆಯಾದರೆ ಸ್ಥಳೀಯರಿಗೆ ಉದ್ಯೋಗಾವಕಾಶ ಸಹ ಸಿಗಲಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ಸಾಗರ ತಾಲೂಕಿಗೆ ಸಿಗಬೇಕಾಗಿದ್ದ ಪ್ರತಿಯೊಂದು ಅವಕಾಶವನ್ನು ತಪ್ಪಿಸುತ್ತಿದ್ದಾರೆ. ಸಾಗರ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಮತ್ತು ಸೊರಬ ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ ರೈಲ್ವೆ ಟರ್ಮಿನಲ್ ವಿಷಯದಲ್ಲಿ ಚಕಾರ ಎತ್ತುತ್ತಿಲ್ಲ. ಅಪ್ಪ, ಮಕ್ಕಳು ಸೇರಿ ಟರ್ಮಿನಲ್ ಕೋಟೆಗಂಗೂರಿಗೆ ಸ್ಥಳಾಂತರಿಸುತ್ತಿದ್ದರೂ ಶಾಸಕದ್ವಯರ ಮೌನ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಹೋರಾಟ ಸಮಿತಿಯ ಇನ್ನೋರ್ವ ಸಂಚಾಲಕ ಎಚ್.ಬಿ.ರಾಘವೇಂದ್ರ ಮಾತನಾಡಿ, ತಾಳಗುಪ್ಪದಲ್ಲಿರುವ ಸೌಲಭ್ಯ ನೋಡಿ ರೈಲ್ವೆ ಇಲಾಖೆ ಅ ಧಿಕಾರಿಗಳು ಟರ್ಮಿನಲ್ ಮಂಜೂರು ಮಾಡಿದ್ದಾರೆ. ರೈಲ್ವೆ ಟರ್ಮಿನಲ್ ಬಂದರೆ ತಾಳಗುಪ್ಪ ಹೋಬಳಿ ಒಂದಷ್ಟು ಅಭಿವೃದ್ಧಿಯೂ ಆಗುತ್ತದೆ. ಆದರೆ ಕೋಟೆಗಂಗೂರಿನಲ್ಲಿರುವ ಜಮೀನು ಹೊಂದಿರುವ ಕೆಲವು ಬಿಜೆಪಿ ಪ್ರಮುಖರು ತಮ್ಮ ಜಾಗಕ್ಕೆ ಉತ್ತಮ ಬೆಲೆ ಪಡೆಯಲು ಟರ್ಮಿನಲ್ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಈ ಹೋರಾಟಕ್ಕೆ ಶಾಸಕ ಹಾಲಪ್ಪನವರು ಸಹಕಾರ ನೀಡಬೇಕು. ಜತೆಗೆ ಮುಖ್ಯಮಂತ್ರಿಗಳಿಗೆ ಹಾಗೂ ಸಂಸದರಿಗೆ ತೀರ ಆಪ್ತವಾಗಿರುವ ಟಿ.ಡಿ.ಮೇಘರಾಜ್ ತಾಳಗುಪ್ಪದಲ್ಲಿಯೇ ಟರ್ಮಿನಲ್ ನಿರ್ಮಾಣ ಮಾಡುವಂತೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳು ಶಿಕಾರಿಪುರವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಲ್ಲಿ ಸಾಗರ ತಾಲೂಕಿಗೆ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ಶಿಕಾರಿಪುರ ಮೂಲಕ ಚೆನ್ನೈಗೆ ರೈಲ್ವೆ ಸಂಪರ್ಕ ಕಲ್ಪಿಸಲು ಮುಖ್ಯಮಂತ್ರಿಗಳು 1 ಸಾವಿರ ಕೋಟಿ ರೂ. ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಮಲೆನಾಡು ಭಾಗದ ಬಹುಕಾಲದ ಬೇಡಿಕೆಯಾಗಿರುವ ಕೊಂಕಣ ರೈಲ್ವೆಗೆ ಸಂಪರ್ಕಕ್ಕೆ ಈತನಕ ಅನುದಾನ ನೀಡಿಲ್ಲ. ಈ ಬಾರಿ ಬಜೆಟ್‌ನಲ್ಲಿ ತಾಳಗುಪ್ಪದಿಂದ ಕೊಂಕಣ ರೈಲ್ವೆಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಹಣ ಇಡಬೇಕು. ಜತೆಗೆ ರೈಲ್ವೆ ಟರ್ಮಿನಲ್ ತಾಳಗುಪ್ಪದಲ್ಲಿ ಸ್ಥಾಪಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಪಂ ಮಾಜಿ ಸದಸ್ಯ ರವಿಕುಗ್ವೆ ಮಾತನಾಡಿ, ರಾಘವೇಂದ್ರ ಅವರಿಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿಕಾರಿಪುರಕ್ಕಿಂತ ಚ್ಚಿನ ಮತವನ್ನು ಸಾಗರ ಮತ್ತು ಸೊರಬ ಕ್ಷೇತ್ರದ ಮತದಾರರು ನೀಡಿದ್ದಾರೆ. ಇದನ್ನು ಸಂಸದರು ಮರೆತಂತೆ ಕಾಣುತ್ತಿದೆ. ಸಂಸದರಿಗೆ ಎರಡೂ ಕ್ಷೇತ್ರದ ಮತದಾರರ ಬಗ್ಗೆ ಅಭಿಮಾನವಿದ್ದರೆ ರೈಲ್ವೆ ಟರ್ಮಿನಲ್ ತಾಳಗುಪ್ಪದಲ್ಲಿಯೆ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸುಧಾಕರ ಕುಗ್ವೆ, ಪುಟ್ಟಪ್ಪ, ವೈ.ಎನ್.ಹುಬ್ಬಳ್ಳಿ ಹಾಜರಿದ್ದರು.