Advertisement

ತಿಕ್ಕಾಟದ ಯಾತ್ರೆ: ಕಾಂಗ್ರೆಸ್‌ನಲ್ಲಿ ಮುಗಿಯದ ಮುಸುಕಿನ ಗುದ್ದಾಟ

06:00 AM Dec 06, 2017 | Team Udayavani |

ಬೆಂಗಳೂರು: ಚುನಾವಣೆ ಯಾತ್ರೆ ಕೈಗೊಳ್ಳುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ನಡುವೆ ಮುಸುಕಿನ ಗುದ್ದಾಟವಿದೆ ಎಂಬುದನ್ನು ಸ್ವತಃ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರೇ ಒಪ್ಪಿಕೊಂಡಿದ್ದಾರೆ.

Advertisement

ಇನ್ನೇನು ಕೆಲವು ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಇಬ್ಬರು ನಾಯ ಕರ ನಡುವಿನ ಪ್ರತಿಷ್ಠೆ ಪಕ್ಷದ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ಭಿನ್ನಾಭಿ ಪ್ರಾಯ ತಣಿಸುವ ಸಲುವಾಗಿ ವೇಣುಗೋಪಾಲ್‌ ಅವರು ಮಂಗಳವಾರ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ್ದು ಮುನಿಸು ತಣಿಸುವ ಕೆಲಸವನ್ನೂ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ವೇಣುಗೋಪಾಲ್‌ ಅವರು, ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೆ ಭಿನ್ನಾಭಿಪ್ರಾಯವೇನೂ ಇಲ್ಲ. ಆದರೆ ಕೆಲವೊಂದು ಸಣ್ಣಪುಟ್ಟ ಸಮಸ್ಯೆ ಇರುವುದು ಸತ್ಯ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ದಿಂದ ನಡೆಸುವ ಯಾತ್ರೆಗೆ ಪರಮೇಶ್ವರ್‌ ಹೋಗುವುದಿಲ್ಲ. ಇದರಲ್ಲಿ ಮುಖ್ಯಮಂತ್ರಿ ಮಾತ್ರ ಪಾಲ್ಗೊಳ್ಳಲಿದ್ದಾರೆ. ಪಕ್ಷದ ವತಿಯಿಂದ ಮಾಡುವ ಪ್ರಚಾರ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.

ಸದ್ಯ ಇರುವ ಗೊಂದಲವೆಂದರೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರು ಬೇರೆಯವರ ಹಾಗೆ ಕಾಂಗ್ರೆಸ್‌ ಯಾತ್ರೆ ನಡೆಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧನಾ ಸಂಭ್ರಮದ ಹೆಸರಿನಲ್ಲಿ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಹೊರಟಿದ್ದಾರೆ.

ಹೀಗಾಗಿ ಡಿಸೆಂಬರ್‌ 13ರಿಂದ ಒಂದು ತಿಂಗಳು ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮದ ಹೆಸರಿನಲ್ಲಿ ಯಾತ್ರೆ ನಡೆಸಲು ಸಿಎಂ ಮುಂದಾಗಿದ್ದಾರೆ ಎಂಬುದು ಪರಮೇಶ್ವರ್‌ ಅಪಸ್ವರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಜತೆಗೆ ಸಾಧನಾ ಸಂಭ್ರಮ ಕಾರ್ಯಕ್ರಮದ ಹೆಸರಿನಲ್ಲಿ ಸಿದ್ದರಾಮಯ್ಯ ಅವರು, ಪಕ್ಷ ಬದಿಗಿಟ್ಟು 
ತಮ್ಮೊಬ್ಬರನ್ನೇ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿ ದ್ದಾರೆ ಎನ್ನುವುದು ಪರಮೇಶ್ವರ್‌ ವಿರೋಧಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರಿ ಕಾರ್ಯಕ್ರಮಗಳನ್ನು ನಡೆಸುವ ದಿನವೇ ಜಿಲ್ಲೆಗೊಂದರಂತೆ ಪಕ್ಷದ ಸಮಾವೇಶಗಳನ್ನು ಪ್ರತ್ಯೇಕವಾಗಿ ಆಯೋಜನೆ ಮಾಡಿ, ಪಕ್ಷ ಮತ್ತು ಸರಕಾರ ಒಟ್ಟಿಗೆ ತೆರಳಬಹುದು ಎಂಬ ಸಲಹೆಯನ್ನೂ ಸಿಎಂ ಮುಂದೆ ಇಡಲಾಗಿದೆ. ಆದರೆ, ಸಿಎಂ ಅವರು ಸರಕಾರದ ನಾಲ್ಕೂವರೆ ವರ್ಷಗಳ ಸಾಧನೆ ಮತ್ತು ಸರಕಾರಿ ಯೋಜನೆಗಳಿಗೆ ಚಾಲನೆ ನೀಡಲು ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವುದರಿಂದ ಈ ಕಾರ್ಯಕ್ರಮಗಳನ್ನು ಪಕ್ಷದ ವೇದಿಕೆಗಳನ್ನಾಗಿ ಮಾಡಿಕೊಳ್ಳುವುದು ಬೇಡ ಎಂದು ಹೇಳುವ ಪ್ರಯತ್ನ ನಡೆಸಿದ್ದಾರೆ. ಜತೆಗೆ ಮಾರ್ಚ್‌ನಲ್ಲಿ 
ಪಕ್ಷದ ಪರವಾಗಿ ಜನಾಶೀರ್ವಾದ ಯಾತ್ರೆ ನಡೆಸುವುದಾಗಿ ಹೇಳಿದ್ದಾರೆ.

ಸಾಧನಾ ಸಂಭ್ರಮ ಸಂಪೂರ್ಣ ಸರಕಾರಿ ಕಾರ್ಯಕ್ರಮವಾಗುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಕ್ಷೇತ್ರದ ಶಾಸಕರು ಮಾತ್ರ ಹಾಜರಿರುವುದರಿಂದ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಮುಖ್ಯಮಂತ್ರಿಯೇ ಕೇಂದ್ರ ಬಿಂದುವಾಗಿ ಬಿಂಬಿತರಾಗುತ್ತಾರೆ. ಜತೆಗೆ ಸಿಎಂ ಅವರ ಏಕ ವ್ಯಕ್ತಿ ಪ್ರವಾಸದಿಂದ ಜಿಲ್ಲೆಗಳಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರ ಮನೋಸ್ಥೈರ್ಯವನ್ನು ಕುಗ್ಗಿಸಿದಂತಾಗುತ್ತದೆ. ಸರಕಾರಿ ಕಾರ್ಯಕ್ರಮವಾಗುವುದರಿಂದ ಅಧಿಕಾರಿ ಗಳದ್ದೇ ಎಲ್ಲ ತೀರ್ಮಾನವಾಗಿರುತ್ತದೆ. ಇದರಿಂದ ಸ್ಥಳೀಯ ನಾಯಕರಿಗೆ ತಮ್ಮನ್ನು ಜನರ ಮುಂದೆ ತೋರಿಸಿಕೊಳ್ಳಲು ಅವಕಾಶ ಸಿಗುವುದಿಲ್ಲ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

ತಿಂಗಳ ಕಾಲ ಸಾಧನೆ ಸಂಭ್ರಮ: ಪಕ್ಷದ ವಿರೋಧದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಸಾಧನೆಗಳನ್ನು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಸಾರಲು ಡಿ. 13ರಿಂದ ಜ. 13ರ ವರೆಗೆ “ಸಾಧನಾ ಸಂಭ್ರಮ’ದ ಹೆಸರಿನಲ್ಲಿ ಸರಕಾರಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣದಿಂದ ಆರಂಭವಾಗಲಿರುವ ಈ ಸಾಧನಾ ಸಂಭ್ರಮ ಪ್ರವಾಸ, ಜ. 13ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಗಿಯಲಿದೆ.

ಮಾರ್ಚ್‌ 1ರಿಂದ ಜನಾಶೀರ್ವಾದ ಯಾತ್ರೆ: ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಮಾರ್ಚ್‌ 1ರಿಂದ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಾತನಾಡಿದ ಅವರು, “ಡಿ. 13ರಿಂದ ನಡೆಯುವುದು ಕೇವಲ ಸರಕಾರಿ ಕಾರ್ಯಕ್ರಮ. ಜನಾಶೀರ್ವಾದ ಯಾತ್ರೆ ಮಾರ್ಚ್‌ 1ರಿಂದ ಆರಂಭಗೊಳ್ಳಲಿದೆ’ ಎಂದು ಹೇಳಿದರು.  ಮುಂದೂಡಿಕೆಗೆ ಕಾರಣ ಕೇಳಿದಾಗ, “ಡಿ. 13ರಿಂದ ಜನಾಶೀರ್ವಾದ ಯಾತ್ರೆ ನಡೆಯಲಿದೆ ಎಂದು ಯಾರ್ರೀ ಹೇಳಿದ್ದು? ಮಾರ್ಚ್‌ 1ರಿಂದಷ್ಟೇ ಅದು ಶುರುವಾಗಲಿದೆ. ಈಗ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸ ಲಾಗುತ್ತಿದೆ’ ಎಂದು ಹೇಳಿದರು.

ಯುವಕರಿಗೆ ಕ್ಲಾಸ್‌, ಮಹಿಳೆಯರಿಗೆ ಮಾರ್ಕ್ಸ್: ಚುನಾವಣೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆ ಯಲ್ಲಿ ಕಾಂಗ್ರೆಸ್‌ನಲ್ಲಿ ಚುರುಕು ಮುಟ್ಟಿಸುವ ಸಲುವಾಗಿ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ಮಂಗಳವಾರವಿಡೀ ದಿನ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ಮಹಿಳಾ ಕಾಂಗ್ರೆಸ್‌ನ ಕೆಲಸಕ್ಕೆ ಭೇಷ್‌ ಎಂದಿರುವ ಅವರು, ಯುವ ಕಾಂಗ್ರೆಸ್‌ ಘಟಕದ ಪದಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಮಹಿಳಾ ಕಾಂಗ್ರೆಸ್‌ನ ಅರಿಸಿನ ಕುಂಕುಮ, ಇಂದಿರಾ ದೀಪ ನಮನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೇಂದ್ರದ ವಿರುದ್ಧ ಎಷ್ಟು  ಪ್ರತಿಭಟನೆ ನಡೆಸಿದ್ದೀರಿ ಎಂದು ಪ್ರಶ್ನಿಸಿದ ಅವರು, ಮುಂದೆ ನಾಯಕರಾಗಬೇಕಾದರೆ ಜನಪರ ಹೋರಾಟ ನಡೆಸಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಇಂದು, ನಾಳೆ ವಿಭಾಗವಾರು ಸಭೆ: ಸರಣಿ ಸಭೆ ನಡೆ ಸುತ್ತಿರುವ ವೇಣುಗೋಪಾಲ್‌ ಬುಧವಾರ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಮುಖಂಡರು ಮತ್ತು ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಗುರುವಾರ ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಮುಖಂಡರ ಸಭೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next