Advertisement

ಸಂಭ್ರಮ ಕಾಣದ ಜವಳಿ ಉದ್ಯಮ

06:12 AM Jun 16, 2020 | Lakshmi GovindaRaj |

ಬೆಂಗಳೂರು: ದೇಶಾದ್ಯಂತ ಲಾಕ್‌ಡೌನ್‌ ತೆರವಾಗಿದೆ. ಆದರೂ ಜವಳಿ ಕ್ಷೇತ್ರದಲ್ಲಿ “ಸಂಭ್ರಮ’ ಇಲ್ಲ! ಜೂನ್‌ 8ರಿಂದ ಲಾಕ್‌ಡೌನ್‌ ಸಂಪೂರ್ಣ ತೆರವಾಗಿದೆ. ಜನಜೀವನ ನಿಧಾನವಾಗಿ ಸಹಜಸ್ಥಿತಿಗೆ ಹೊರಳುತ್ತಿದೆ. ಎಲ್ಲ ಅಂಗಡಿ- ಮುಂಗಟ್ಟುಗಳು ಪುನರಾರಂಭಗೊಂಡಿದ್ದು, ವಾಣಿಜ್ಯ ಚಟುವಟಿಕೆಗಳೂ ಚುರುಕುಗೊಳ್ಳುತ್ತಿವೆ. ಆದರೆ, ಜವಳಿ ಕ್ಷೇತ್ರ ಮಾತ್ರ ಈಗಲೂ ಮಂಕಾಗಿದೆ. ಯಾಕೆಂದರೆ, ಯಾವುದೇ ಸಭೆ-ಸಮಾರಂಭಗಳಿಗೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ.

Advertisement

ಮದುವೆ, ಹಬ್ಬದ ಕಾರ್ಯಕ್ರಮಗಳಿಗೆ ಅವಕಾಶ ಇದ್ದರೂ, ಮನೆಗಳಿಗೆ ಸೀಮಿತವಾಗಿವೆ. ಈ ಮಧ್ಯೆ ಮದುವೆ ಸೀಜನ್‌ ಮುಗಿದು, ಮಳೆಗಾಲ ಬೇರೆ ಕಾಲಿಟ್ಟಿದೆ. ಪರಿಣಾಮ ಯಾವುದೇ ವ್ಯತ್ಯಾಸ ಆಗಿಲ್ಲ. “ಸದ್ಯದ ಪರಿಸ್ಥಿತಿಯಲ್ಲಿ  ಯಾವುದೇ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ. ಮದುವೆ, ಮನೆ ಹಬ್ಬದ ಕಾರ್ಯಕ್ರಮಗಳು ಕೂಡ ನಡೆಯುತ್ತಿಲ್ಲ. ಹೀಗಾಗಿ ಶುಭ ಸಮಾರಂಭಗಳೇ ಇಲ್ಲದಿದ್ದರೆ ಜವಳಿ ವ್ಯಾಪಾರ ಅಷ್ಟಕಷ್ಟೇ.

ಈ ಹಿಂದೆ ಚಿತ್ರದುರ್ಗ, ತುಮಕೂರು,  ದಾವಣಗೆರೆ ಸೇರಿದಂತೆ ಇನ್ನಿತರ ಭಾಗಗಳಿಂದ ವ್ಯಾಪಾರಿಗಳು ಬಟ್ಟೆ ಖರೀದಿಗಾಗಿ ಚಿಕ್ಕಪೇಟೆಗೆ ಬರುತ್ತಿದ್ದರು. ಆದರೆ, ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಆ ವ್ಯಾಪಾರಿಗಳು ಕೂಡ ಇತ್ತ ಬರುತ್ತಿಲ್ಲ. ಲಾಕ್‌ಡೌನ್‌ ತೆರವಿನಿಂದ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ’ ಎಂದು ಜವಳಿ ವ್ಯಾಪಾರಿ ಪ್ರದೀಪ್‌ ಶೇಟ್‌ ಬೇಸರ ವ್ಯಕ್ತಪಡಿಸುತ್ತಾರೆ.

“ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ವ್ಯಾಪಾರಿ ಗಳು ಹೆಚ್ಚಿನ ಸಂಖ್ಯೆಯಲ್ಲಿ  ಬರುತ್ತಿದ್ದರು. ಆದರೆ ಈಗ ಅವರಿಗೆ ಹೋಮ್‌ ಕ್ವಾರಂಟೈನ್‌ ಭಯವಿದೆ. ಜತೆಗೆ ವ್ಯಾಪಾರಿಗಳೂ ಅಪಾಯವನ್ನು ಮೈಮೇಲೆ ಎಳೆದು ಕೊಂಡು ಇಲ್ಲಿಗೆ ಬರಲು ಇಷ್ಟಪಡುವುದಿಲ್ಲ’ ಎಂದು ಅವರು ತಿಳಿಸಿದರು. ಜವಳಿ ಉದ್ಯಮ  ನಿಂತಿರುವುದೇ ಮಹಿಳೆಯರ ಮೇಲೆ. ಆದರೆ ಕೋವಿಡ್‌ 19 ಭಯದಿಂದ ಮಹಿಳೆಯರು ಮನೆಯಿಂದ ಹೊರಗೆ ಬರುತ್ತಿಲ್ಲ.

ಜವಳಿ ಉದ್ಯಮ ಮಂಕಾಗಲು ಇದೂ ಒಂದು ಕಾರಣ. ಕೋವಿಡ್‌-19 ಪೂರ್ವದ ವ್ಯಾಪಾರಕ್ಕೆ ಹೋಲಿಸಿದರೆ, ಈಗ  ನಿತ್ಯ ಶೇ. 9ರಿಂದ 10ರಷ್ಟು ವ್ಯಾಪಾರ ನಿರೀಕ್ಷಿಸುವುದು ಕೂಡ ಕಷ್ಟವಾಗಿದೆ ಎಂದು ಬೆಂಗಳೂರು ಹೋಲ್‌ಸೇಲ್‌ ಕ್ಲಾತ್‌ ಮರ್ಚೆಂಟ್‌ ಅಸೋಸಿಯೇಷನ್‌ ಅಧ್ಯಕ್ಷ ಪ್ರಕಾಶ್‌ ಪಿರ್ಗಲ್‌ ಹೇಳುತ್ತಾರೆ. ಸರ್ಕಾರ ಜವಳಿ ಅಂಗಡಿಗಳನ್ನು ತೆರೆಯಲು  ಅವಕಾಶ ನೀಡಿದೆ. ಆದರೆ ಗ್ರಾಹಕರು ಬಾರದಿದ್ದರೆ ವ್ಯಾಪಾರ ನಿರೀಕ್ಷೆ ಮಾಡುವುದು ಕಷ್ಟ.

Advertisement

ಹೀಗಾಗಿಯೇ ಕೆಲವರು 12 ಗಂಟೆಗೆ ಬಾಗಿಲು ತೆರೆಯುತ್ತಾರೆ. 5 ಗಂಟೆಗಾಗಲೇ ಬಾಗಿಲು ಹಾಕಲು ಆರಂಭಿಸುತ್ತಾರೆ. ಇನ್ನೂ  ಮುಂದುವರಿದು, ಕೆಲವೆಡೆ ಗ್ರಾಹಕರಿಲ್ಲದೆ ಹಲವು ಅಂಗಡಿಗಳು ಬಾಗಿಲು ಹಾಕಿದ್ದು, ಮಾಲಿಕರು ಅಂಗಡಿಗಳನ್ನೇ ಖಾಲಿ ಮಾಡಿದ್ದಾರೆ.  ಹಾಗಾಗಿ, ಹಲವು ಕಡೆಗಳಲ್ಲಿ “ಅಂಗಡಿ ಬಾಡಿಗೆ ಇದೆ’ ಎಂಬ ನಾಮಫ‌ಲಕಗಳನ್ನು ತೂಗು  ಹಾಕಿದ್ದಾರೆ ಎಂದೂ ಪ್ರಕಾಶ್‌ ಪಿರ್ಗಲ್‌ ಬೇಸರ ವ್ಯಕ್ತಪಡಿಸಿದರು.

ವ್ಯಾಪಾರಸ್ಥರು ಕೈಕಟ್ಟಿ ಕೂರುವ ಸ್ಥಿತಿ: ಬೆಂಗಳೂರಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಹೋಲ್‌ ಸೇಲ್‌ ಬಟ್ಟೆ ಅಂಗಡಿಗಳಿವೆ. ಸರ್ಕಾರ ಲಾಕ್‌ ಡೌನ್‌ನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಹೀಗಾಗಿಯೇ ಜವಳಿ ಅಂಗಡಿಗಳ ಮಾಲೀಕರು ತಮ್ಮ ಅಂಗಡಿ ಮಳಿಗೆಗಳನ್ನು ತೆರೆದಿದ್ದಾರೆ. ಆದರೆ, ಅಂಗಡಿಗೆ ಬರಲು ಗ್ರಾಹಕರು ಭಯ ಪಡುತ್ತಿದ್ದಾರೆ.

ಲಾಕ್‌ಡೌನ್‌ ಮೊದಲು ಚಿಕ್ಕಪೇಟೆಯಲ್ಲಿ ಒಂದು ದಿನಕ್ಕೆ ಕೋಟ್ಯಂತರ  ರೂ. ಹೋಲ್‌ಸೇಲ್‌ ರೂಪದಲ್ಲಿ ಜವಳಿ ವ್ಯಾಪಾರ ನಡೆಯುತ್ತಿತ್ತು. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಗೋವಾದಿಂದ ವಿವಿಧ ರೀತಿಯ ಬಟ್ಟೆಗಳ ಖರೀದಿಗೆ ಚಿಕ್ಕಪೇಟೆಗೆ ಬರುತ್ತಿದ್ದರು. ಆದರೆ, ಆ  ಸನ್ನಿವೇಶ ಈಗ ಮಾಯವಾಗಿದು,ª ಬಟ್ಟೆ ವ್ಯಾಪಾರವಿಲ್ಲದೆ ಹಲವು ವ್ಯಾಪಾರಿಗಳನ್ನ ಕೈ ಕಟ್ಟಿ ಕೂರುವಂತೆ ಮಾಡಿದೆ.

ಕೋವಿಡ್‌ 19 ಆತಂಕ ಹೆಚ್ಚುತ್ತಲೇ ಇದೆ. ಯಾವ ಪ್ರದೇಶಗಳು ಯಾವಾಗ ಸೀಲ್‌ಡೌನ್‌ ಆಗುತ್ತವೆಯೋ ಎಂದು ಹೇಳುವುದು ಕಷ್ಟ. ಆ ಹಿನ್ನೆಲೆಯಲ್ಲಿ ಗ್ರಾಹಕರು ಮನೆಯಿಂದ ಹೊರಬರಲು ಹೆದರುತ್ತಾರೆ. ಹೀಗೆ ಪರಿಸ್ಥಿತಿ ಮುಂದುವರಿದರೆ ಜವಳಿ ಉದ್ಯಮ ಮತ್ತಷ್ಟು ತೊಂದರೆಯಲ್ಲಿ ಸಿಲುಕುವ ಸಾಧ್ಯತೆ ಇದೆ. 
-ಪ್ರಕಾಶ್‌ ಪಿರ್ಗಲ್‌ , ಬೆಂಗಳೂರು ಹೋಲ್‌ ಸೇಲ್‌ ಕ್ಲಾತ್‌ ಮರ್ಚೆಂಟ್‌ ಅಸೋಸಿಯೇಷನ್‌ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next