Advertisement

ಆರಂಭಕ್ಕೂ ಮೊದಲೇ ಶಾಲೆ ಅಂಗಳಕ್ಕೆ ಪಠ್ಯಪುಸ್ತಕ!

04:49 PM May 18, 2023 | Team Udayavani |

ಚಿಕ್ಕಬಳ್ಳಾಪುರ: ಬೇಸಿಗೆ ರಜೆಗಳು ಕಳೆದು 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಈ ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆ ಆರಂಭಗೊಳ್ಳುವ ಮುನ್ನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಗೆ ಮುಂದಾಗಿದೆ.

Advertisement

ಜಿಲ್ಲಾದ್ಯಂತ ಮೇ 29 ರಂದು ಶಾಲಾ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಜಿಲ್ಲೆಯ ಶಾಲಾ ಮುಖ್ಯ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ತರಗತಿಗಳು ಆರಂಭಕ್ಕೂ ಮೊದಲೇ ಅಗತ್ಯವಾದ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿದ್ಯಾರ್ಥಿಗಳ ಕೈ ತಲುಪಲಿದೆ.

ಜಿಲ್ಲೆಗೆ ಶೇ.65.13 ರಷ್ಟು ಪಠ್ಯ ಪುಸ್ತಕ ಪೂರೈಕೆ: ಜಿಲ್ಲೆಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ 1 ರಿಂದ 10ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಒಟ್ಟು 10,59,680 ಪಠ್ಯ ಪುಸ್ತಕಗಳು ಅಗತ್ಯವಾಗಿದ್ದು, ಈಗಾಗಲೇ 6,90,142 ಪಠ್ಯ ಪುಸ್ತಕಗಳು ಜಿಲ್ಲೆಗೆ ಪೂರೈಕೆ ಆಗಿ ಶೇ.65.13 ರಷ್ಟು ಪಠ್ಯ ಪುಸ್ತಕಗಳು ಶಾಲೆಗಳಿಗೆ ಪೂರೈಕೆ ಆಗಿವೆ. ಜಿಲ್ಲೆಗೆ ಬೇಕಿರುವ ಒಟ್ಟು 10,59,680 ಲಕ್ಷ ಪಠ್ಯ ಪುಸ್ತಕಗಳ ಪೈಕಿ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ 6,86,003 ಉಚಿತ ಪಠ್ಯ ಪುಸ್ತಕಗಳು ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಮಾರಾಟಕ್ಕಾಗಿ ಒಟ್ಟು 3,46,403 ಪಠ್ಯ ಪುಸ್ತಕಗಳು ಹಾಗೂ ಆರ್‌ಟಿಇ ಮಕ್ಕಳಿಗೆ ಒಟ್ಟು 27,271 ಪಠ್ಯ ಪುಸ್ತಕಗಳು ಜಿಲ್ಲೆಗೆ ಅಗತ್ಯವಾಗಿವೆ.

ಈಗಾಗಲೇ ಜಿಲ್ಲೆಗೆ 7,71,976 ಪಠ್ಯ ಪುಸ್ತಕಗಳು ಜಿಲ್ಲೆಗೆ ಬ್ಲಾಕ್‌ವಾರು ಪೂರೈಕೆ ಆಗಿ ಆ ಪೈಕಿ 6,90,142 ಪಠ್ಯ ಪುಸ್ತಕಗಳು ಶಾಲೆಗಳಿಗೆ ತಲುಪಿವೆ. ಅದರಲ್ಲಿ ಸರ್ಕಾರಿ ಶಾಲೆಗಳಿಗೆ ಇಲ್ಲಿವರೆಗೂ 4,96,958 ಪಠ್ಯಪುಸ್ತಕಗಳು, ಖಾಸಗಿ ಶಾಲೆಗಳಿಗೆ ಮಾರಾಟಕ್ಕಾಗಿ ಒಟ್ಟು 1,76,720 ಪಠ್ಯ ಪುಸ್ತಕಗಳು ಹಾಗೂ ಖಾಸಗಿ ಶಾಲೆಗಳಲ್ಲಿ ಆರ್‌ಟಿಇನಡಿ ದಾಖಲಾಗಿರುವ ಮಕ್ಕಳಿಗೆ ಉಚಿತವಾಗಿ ವಿತರಿಸಲು ಒಟ್ಟು 16,464 ಪಠ್ಯ ಪುಸಕ್ತಗಳು ಪೂರೈಕೆ ಆಗಿವೆ.

ಮೇ 30 ರಿಂದ ಶಾಲೆ ಆರಂಭ: ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಿದ್ದು, ಅದರಂತೆ ಮೇ 29 ರಂದು ಸಿದ್ಧತಾ ಕಾರ್ಯಕ್ರಮದ ಬಳಿಕ ಮೇ 30 ರಂದು ಮಂಗಳವಾರ ಅಧಿಕೃತವಾಗಿ ಶಾಲೆಗಳ ಕಾರ್ಯಾರಂಭ ಮಾಡಲಿವೆ. ಪ್ರತಿ ವರ್ಷ ಶಾಲೆ ಆರಂಭಗೊಂಡರೂ ಸಮರ್ಪಕವಾಗಿ ಪಠ್ಯ ಪುಸ್ತಕ, ಸಮವಸ್ತ್ರ ವಿದ್ಯಾರ್ಥಿಗಳ ಕೈ ತಲುಪದೇ ವಿದ್ಯಾರ್ಥಿ ಪೋಷಕರಲ್ಲಿ ತೀವ್ರ ಟೀಕೆಗೆ ಗುರಿ ಆಗುತ್ತಿತ್ತು. ಆದರೆ ಈ ಬಾರಿ ಶಾಲೆ ಆರಂಭಕ್ಕೂ ಮೊದಲೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಶಾಲೆಗಳ ಅಂಗಳ ತಲುಪಿವೆ. ಶಾಲೆಯ ಆರಂಭದ ದಿನ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಉಸ್ತುವಾರಿಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸುವ ಕಾರ್ಯಕ್ರಮ ನಡೆಯಲಿದೆ.

Advertisement

ಜಿಲ್ಲೆಯಲ್ಲಿವೆ 2,029 ಶಾಲೆಗಳು: ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಸೇರಿ ಒಟ್ಟು 2,029 ಶಾಲೆಗಳು ಇದ್ದು ಆ ಪೈಕಿ ಜಿಲ್ಲಾದ್ಯಂತ ಕಿರಿಯ ಪ್ರಾಥಮಿಕ ಶಾಲೆಗಳು ಸರ್ಕಾರಿ, ಖಾಸಗಿ, ಅನುದಾನ ರಹಿತ, ವಸತಿ ಮತ್ತಿತರ ಒಟ್ಟು 967 ಶಾಲೆಗಳಿವೆ. ಹಿರಿಯ ಪ್ರಾಥಮಿಕ ಶಾಲೆಗಳು ಸರ್ಕಾರಿ, ಖಾಸಗಿ, ಅನುದಾನಿತ, ವಸತಿ ಶಾಲೆಗಳು ಸೇರಿ ಒಟ್ಟು 713 ಶಾಲೆಗಳಿದ್ದರೆ, ಪ್ರೌಢ ಶಾಲೆಗಳ ಪೈಕಿ ಸರ್ಕಾರಿ 111, ಅನುದಾನಿತ 46, ಅನುದಾನ ರಹಿತ 146, ವಸತಿ ಶಾಲೆಗಳು 26 ಸೇರಿ ಒಟ್ಟು 349 ಪ್ರೌಢ ಶಾಲೆಗಳು ಇವೆ. ಒಟ್ಟು ಜಿಲ್ಲೆಯಲ್ಲಿ 2,29 ಶಾಲೆಗಳು ಕಾರ್ಯಹಿರ್ವಹಿಸುತ್ತಿವೆ.

ಜಿಲ್ಲಾದ್ಯಂತ ಮೇ 30ರಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲಿದೆ. ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದುವರೆಗೂ ಜಿಲ್ಲೆಯ ಶಾಲೆಗಳಿಗೆ ಒಟ್ಟಾರೆ ಶೇ.65.13 ರಷ್ಟು ಪಠ್ಯ ಪುಸ್ತಕಗಳು ಹಂಚಿಕೆ ಆಗಿವೆ. ಉಳಿಕೆ ಒಂದೆರೆಡು ದಿನಗಳಲ್ಲಿ ಪೂರೈಕೆ ಆಗಲಿವೆ. ಈ ಬಾರಿ ಸಮವಸ್ತ್ರ ಕೂಡ ಶಾಲೆ ಆರಂಭದ ದಿನವೇ ಮಕ್ಕಳ ಕೈಗೆ ಸಿಗಲಿದೆ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ 1.07 ಲಕ್ಷ ಮಕ್ಕಳು ಓದುತ್ತಿದ್ದಾರೆ. – ಕೆ.ಎಂ.ಜಯರಾಮರೆಡ್ಡಿ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next