Advertisement

ಪಠ್ಯ ಪುಸ್ತಕ ರಾಜಕೀಯ; ಸಿಎಂ ಸುದ್ದಿಗೋಷ್ಠಿ ಮಾಡಬೇಕಿತ್ತು: ಸಿದ್ದರಾಮಯ್ಯ

05:57 PM Jun 24, 2022 | Team Udayavani |

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಎಳೆಯ ಮಕ್ಕಳ ಮನಸ್ಸುಗಳಿಗೆ ಸರ್ಕಾರ ಮತ್ತು ಸರ್ಕಾರದ ಹಿಂದೆ ಗುಪ್ತವಾಗಿ ಕೆಲಸ ಮಾಡುತ್ತಿರುವ ಸಂಘ ಪರಿವಾರ ವಿಷ ಹಾಕಲು ಹೊರಟಿವೆ. ವಿವಾದ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದ್ದರೂ ತಜ್ಞರ ಸಮಿತಿ ಮಾಡಿ ಸಮಸ್ಯೆಗಳೇನು ಎಂದು ಪರಿಶೀಲಿಸುವ ಬದಲಿಗೆ ರೋಹಿತ್ ಚಕ್ರತೀರ್ಥ ಮಾಡಿರುವ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವ ಬೇಜವಾಬ್ಧಾರಿತನವನ್ನು ಸರ್ಕಾರ ತೋರಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Advertisement

ವಿವಾದ ಪ್ರಾರಂಭವಾಗಿ ಇಷ್ಟು ದಿನವಾದ ಮೇಲೆ ನಿನ್ನೆ ಕಂದಾಯ ಸಚಿವ ಆರ್ ಅಶೋಕ್ ಅವರು ತಮ್ಮ ಪಕ್ಕದಲ್ಲಿ ಸಿಸಿ ಪಾಟೀಲ್, ಭೈರತಿ ಬಸವರಾಜು ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಕೂರಿಸಿಕೊಂಡು ಪತ್ರಿಕಾಗೋಷ್ಠಿ ಮಾಡಿದ್ದಾರೆ. ಈ ನಾಲ್ಕೂ ಜನರು ಕೂಡ ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಯೆ ಇಲ್ಲದವರು ಮತ್ತು ಅದರಲ್ಲಿ 3 ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರು. ಹಾಗೊಂದು ವೇಳೆ ಸಮರ್ಪಕ ಮಾಹಿತಿ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಧ್ಯಮಗೋಷ್ಠಿ ನಡೆಸಬೇಕಾಗಿತ್ತು. ವಾಸ್ತವವಾಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿ ಸತ್ಯ ಸಂಗತಿಗಳನ್ನು ವಿವರಿಸಬೇಕಾಗಿದ್ದುದು ಸಂಬಂಧಿತ ಶಿಕ್ಷಣ ಸಚಿವರು. ಕಂದಾಯ ಸಚಿವ ಆರ್ ಅಶೋಕ್ ಅವರು ಕುಳಿತುಕೊಂಡು ಸಂಪೂರ್ಣವಾಗಿ ಈ ವಿಚಾರವನ್ನು ರಾಜಕೀಕರಣಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

1986 ರ ರಾಷ್ಟ್ರೀಯ ಶಿಕ್ಷಣ ನೀತಿ 1986 ರ ಶಿಕ್ಷಣ ನೀತಿಯ ಪ್ಯಾರಾ 8.5 ರಲ್ಲಿ ಹೀಗೆ ಹೇಳಿದೆ, “ಸಾಂಸ್ಕ್ರತಿಕ ವಾಗಿ ನಮ್ಮ ಬಹುತ್ವದ ಸಮಾಜದಲ್ಲಿ, ನಮ್ಮ ಜನರನ್ನು ಏಕತೆ ಮತ್ತು ಸಮಗ್ರತೆಯ ಕಡೆ ಕೊಂಡೊಯ್ಯಲು, ಶಿಕ್ಷಣವು ಸಾರ್ವತ್ರಿಕ ಮತ್ತು ಶಾಶ್ವತ ಮೌಲ್ಯಗಳನ್ನು ಪೋಷಿಸಬೇಕು,. ಅಂತಹ ಮೌಲ್ಯಯುತ ಶಿಕ್ಷಣವು ಪ್ರಗತಿ ವಿರೋಧ ಮನೋವೃತ್ತಿ, ಧಾರ್ಮಿಕ ಮತಾಂಧತೆ, ಹಿಂಸೆ, ಮೂಢನಂಬಿಕೆ ಮುಂತಾದವನ್ನು ತೊಡೆದು ಹಾಕಲು ಪ್ರಯತ್ನಿಸಬೇಕು” ಎಂದು ಹೇಳಿದೆ ಎನ್ನುವುದನ್ನು ಉಲ್ಲೇಖಿಸಿದ್ದಾರೆ.

ಬಿಜೆಪಿ ಸರ್ಕಾರ, ಯಾವುದೋ ಒಂದು ಅರ್ಜಿಗೆ ಸಂಬಂಧಿಸಿದಂತೆ, ನಿರ್ಧಿಷ್ಠ ವಿಷಯವನ್ನು ಪರಿಶೀಲಿಸಿಕೊಡಿ ಎಂದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಡದ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವ ಅರ್ಹತೆಯೂ ಇಲ್ಲದ ವ್ಯಕ್ತಿಯಾದ ರೋಹಿತ್ ಚಕ್ರತೀರ್ಥ ಎಂಬುವವರಿಗೆ ದಿನಾಂಕ 8.9.21 ರಂದು ತಿಳಿಸಿದ್ದಾರೆ. ಆದರೆ ಪರಿಶೀಲನೆ ಮಾಡುವುದಕ್ಕೆ ಬದಲಾಗಿ ಸರ್ಕಾರದ ಅಧಿಕೃತ ಆದೇಶವೇ ಇಲ್ಲದೆ ಪರಿಷ್ಕರಣೆ ಮಾಡಿದ್ದಾರೆ. ಈ ಪರಿಷ್ಕರಣೆ ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿರುವುದರಿಂದ ಅಸಾಂವಿಧಾನಿಕವಾಗಿದೆ, ಅಪ್ರಜಾತಾಂತ್ರಿಕ ನಿಲುವಿನಿಂದ ಕೂಡಿದೆ ಎಂದು ಇದರಿಂದ ಸಾಬೀತಾಗಿದೆಯೆಂದು ಹಲವಾರು ತಜ್ಞರುಗಳು ಪ್ರತಿ ಪಾದಿಸುತ್ತಿದ್ದಾರೆ ಎಂದಿದ್ದಾರೆ.

ಮುಡಂಬಡಿತ್ತಾಯ ಸಮಿತಿ ಸಂವಿಧಾನದ ಆಶಯಗಳಿಗೆ ಶಿಕ್ಷಣ ಆಯೋಗಗಳ ಸಲಹೆಗಳನ್ನು ಗಾಳಿಗೆ ತೂರಿದೆ ಎಂಬ ಕಾರಣದಿಂದಲೆ ನಮ್ಮ ಸರ್ಕಾರ ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯ ಅಡಿಯಲ್ಲಿ 27 ಉಪ ಸಮಿತಿಗಳಿದ್ದವು. ಪ್ರತಿ ಉಪ ಸಮಿತಿಯಲ್ಲಿ 4 ಜನರಿದ್ದರು. ಬರಗೂರು ಸಮಿತಿಯು ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡುವಾಗ ಸುಮಾರು 30 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಣ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರೊಂದಿಗೆ ಸಂವಾದ ಮಾಡಲಾಗಿತ್ತೆಂದು ಕೇಳಿದ್ದೇನೆ ಎಂದು ಹೇಳಿದ್ದಾರೆ.

Advertisement

ಬರಗೂರು ರಾಮಚಂದ್ರಪ್ಪ ಸಮಿತಿಗೆ ಸಂವಿಧಾನದ ಆಶಯಗಳಿಗೆ ಮತ್ತು ಮೂಲಸ್ಫೂರ್ತಿಯನ್ನು ಹಾಗೂ ಶಿಕ್ಷಣ ಆಯೋಗಗಳನ್ನು ಗಮನದಲ್ಲಿಟ್ಟುಕೊಂಡು, 21 ನೇ ಶತಮಾನಕ್ಕೆ ಬೇಕಾದ ಪಠ್ಯಪುಸ್ತಕವನ್ನು ಪರಿಷ್ಕರಿಸಿಕೊಡಿ ಎಂದು ಕೇಳಿಕೊಂಡಿದ್ದೆವು. ಅದರಂತೆ ಅವರು ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿ ಕೊಟ್ಟಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಪಠ್ಯ ಪುಸ್ತಕಗಳನ್ನು ವಿರೋಧ ಪಕ್ಷದಲ್ಲಿದ್ದ ಬಿಜೆಪಿಯಾಗಲಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಣ ತಜ್ಞರಾಗಲಿ, ಶಿಕ್ಷಕರಾಗಲಿ, ಸಮುದಾಯಗಳಾಗಲಿ, ಮಕ್ಕಳಾಗಲಿ, ಪೋಷಕರಾಗಲಿ ವಿರೋಧ ವ್ಯಕ್ತ ಪಡಿಸಿರಲಿಲ್ಲ ಎಂದು ತಮ್ಮ ಅವಧಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಈಗ ಕರ್ನಾಟಕದ ಜನರಷ್ಟೆ ಅಲ್ಲ, ತಜ್ಞರುಗಳೂ ವಿರೋಧಿಸಿದ್ದಾರೆ. ಜೊತೆಗೆ ಆಡಳಿತಾರೂಢ ಬಿಜೆಪಿಯ ಎಂ ಎಲ್ ಎ, ಎಂಪಿಗಳೆ ವಿರೋಧಿಸಿದ್ದಾರೆ.ಆದರೆ ಬಿಜೆಪಿ ಸರ್ಕಾರ ಮಾಡಿರುವ ಪಠ್ಯ ಪರಿಷ್ಕರಣೆಯಲ್ಲಿ ಕನ್ನಡ ಭಾಷೆಯ ಪಠ್ಯ ಪುಸ್ತಕದಲ್ಲಿ 21 ಜನ ಶೂದ್ರ ಕವಿ, ಲೇಖಕರ ಬರಹಗಳನ್ನು ಕೈ ಬಿಡಲಾಗಿದೆ, ಅದರಲ್ಲಿ 6 ಕ್ಕೂ ಹೆಚ್ಚು ಜನ ದಲಿತ ಸಮುದಾಯಗಳ ಬರಹಗಾರರ ಬರಹಗಳು, 8 ಕ್ಕೂ ಹೆಚ್ಚು ಜನ ಲಿಂಗಾಯತ ಸಮುದಾಯಗಳ ಬರಹಗಳನ್ನು ಕೈ ಬಿಡಲಾಗಿದೆ ಎಂದು ಹೇಳಿದ್ದಾರೆ.

ಶೂದ್ರ, ದಲಿತ ಬರಹಗಾರರ ಪದ್ಯ, ಗದ್ಯಗಳನ್ನು ಕೈ ಬಿಟ್ಟು 28 ಜನರ ಬರಹಗಳನ್ನು ಸೇರಿಸಿದ್ದಾರೆ. ಸೇರ್ಪಡೆಗೊಂಡ ಶೇ.95 ರಷ್ಟು ಜನ ಲೇಖಕರು ಒಂದೇ ಸಮುದಾಯದವರೆ ಆಗಿದ್ದಾರೆ. ಅವರೆಲ್ಲರೂ ಬ್ರಾಹ್ಮಣರಾಗಿದ್ದಾರೆ. ಅವರಲ್ಲಿ ಬಹುಪಾಲು ಜನ ಲೇಖಕರೇ ಅಲ್ಲ. ಮನುವಾದಿ ಅಜೆಂಡಾವನ್ನು ಪ್ರಚಾರ ಮಾಡುವ ವಕ್ತಾರರುಗಳಷ್ಟೆ. ಆದರಲ್ಲೂ ಸಂವಿಧಾನ ವಿರೋಧಿ ಆರೆಸ್ಸೆಸ್ ಸಿದ್ಧಾಂತ ಬೆಂಬಲಿಸುವ ಬ್ರಾಹ್ಮಣ ಲೇಖಕರ ಗದ್ಯ-ಪದ್ಯಗಳನ್ನು ಕಲಿಸಬಾರದು ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next