Advertisement

ಉತ್ತರ ಕರ್ನಾಟಕದ ಶಂಕಿತರ ಪರೀಕ್ಷೆ ನಗರದಲ್ಲಿ!

05:53 AM Jun 05, 2020 | Lakshmi GovindaRaj |

ಬೆಂಗಳೂರು: ಕ್ವಾರೆಂಟೈನ್‌ ಕೇಂದ್ರಗಳಲ್ಲಿ ಇರುವವರನ್ನು ಸೋಂಕು ಪರೀಕ್ಷೆಗೆ ಒಳಪಡಿಸಿ ಅವರ ವರದಿ ಬರುವ ಮುನ್ನವೇ ಮನೆಗೆ ಕಳುಹಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರದಲ್ಲಿ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ  ಹೆಚ್ಚಾಗುತ್ತಿದೆ. ದೆಹಲಿಯಿಂದ ಹಿಂದಿರುಗಿದ ತಾಯಿ ಮತ್ತು ಮಗ (ರೋಗಿ ಸಂಖ್ಯೆ 3398 ಮತ್ತು 4007) ಇಬ್ಬರ ಪ್ರಕರಣದಲ್ಲೂ ಇದೇ ರೀತಿ ಆಗಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಇತ್ತೀಚಿನ  ದಿನಗಳಲ್ಲಿ ಕ್ವಾರೆಂಟೈನ್‌ನಲ್ಲಿ ಇರುವ ವರನ್ನು ಕೋವಿಡ್‌ 19 ಸೋಂಕು ಪರೀಕ್ಷೆಗೆ ಒಳಪಡಿಸಿದ ಮೇಲೆ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗುತ್ತಿದೆ. ಇದರಿಂದ ನಗರ ದಲ್ಲಿ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆಯೂ  ಹೆಚ್ಚಳವಾಗು ತ್ತಿದೆ. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಹೆಚ್ಚು ಜನರನ್ನು ಕೋವಿಡ್‌  19 ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು,

ಕೆಲವು ಮಾದರಿಗಳನ್ನು ಬೆಂಗಳೂರಿಗೆ ಕಳುಹಿ ಸಲಾಗುತ್ತಿದೆ. ಹೀಗಾಗಿ, ವರದಿ ಬರುವುದು ತಡವಾಗುತ್ತಿದ್ದು, ಕ್ವಾರಂಟೈನ್‌ ನಲ್ಲಿ ಏರುಪೇರಾ ಗುತ್ತಿದೆ. ಈ ವಿಚಾರವನ್ನು ಮುಖ್ಯ ಕಾರ್ಯ  ದರ್ಶಿಗಳ ಗಮನಕ್ಕೆ ತರಲಾ  ಗಿದ್ದು, ಇದಕ್ಕೆ ಶೀಘ್ರವೇ ಪರಿಹಾರ ಕಂಡುಕೊಳ್ಳುವು ದಾಗಿ ತಿಳಿಸಿದ್ದಾರೆ. ಶುಕ್ರವಾರದಿಂದ ಸೋಂಕು ವರದಿಗಳು 24 ಗಂಟೆಯೊಳಗೆ ಬರುವ ಸಾಧ್ಯತೆ ಇದ್ದು, ಇದಕ್ಕೆ ಪರಿಹಾರ ಸಿಗಲಿದೆ ಎಂದು  ಮಾಹಿತಿ ನೀಡಿದರು.

ದೆಹಲಿಯಿಂದ ಬಂದ ಇಬ್ಬರಲ್ಲಿ ಸೋಂಕು: ದೆಹಲಿಯಿಂದ ಹಿಂದಿರುಗಿದ ತಾಯಿ ಮತ್ತು ಮಗ (ರೋಗಿ ಸಂಖ್ಯೆ 3398 ಮತ್ತು 4007) ಇಬ್ಬರಲ್ಲಿ ಗುರುವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ನೆಲೆಸಿದ್ದ ಜೆ.ಪಿ. ನಗರದ ರಾಗೀಗುಡ್ಡದಲ್ಲಿ ಅಪಾರ್ಟ್‌ಮೆಂಟ್‌ವೊಂದನ್ನು ಕಂಟೈನ್ಮೆಂಟ್‌ ಮಾಡಲಾಗಿದೆ ಎಂದು ಬಿಬಿಎಂಪಿಯ ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ.ಶಿವಕುಮಾರ್‌ ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ದೆಹಲಿಯಿಂದ ಬಂದ  ತಾಯಿ ಮತ್ತು ಮಗನನ್ನು ಹೆಬ್ಟಾಳದ ಹಾಸ್ಟೆಲ್‌ವೊಂದರಲ್ಲಿ ಏಳು ದಿನ ಕ್ವಾರಂಟೈನ್‌ ಮಾಡಲಾಗಿತ್ತು.

ಕ್ವಾರಂಟೈನ್‌ ಮುಗಿಯುವ ವೇಳೆ ಸೋಂಕು ಪರೀಕ್ಷೆ ಮಾಡಲಾಗಿದ್ದು, ಕೋವಿಡ್‌ 19 ಇರುವುದು ದೃಢಪಟ್ಟಿದೆ. ಇಬ್ಬರನ್ನು ಸದ್ಯ  ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರಲ್ಲಿಯೂ ಕೋವಿಡ್‌ 19 ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದರು. ಇನ್ನು ಇಬ್ಬರು ಕ್ವಾರಂಟೈನ್‌ ಕೇಂದ್ರದಿಂದ ಬಂದ ದಿನವೇ ಸೋಂಕು ದೃಢಪಟ್ಟಿದೆ. ಇವರು ಅಪಾರ್ಟ್‌ಮೆಂಟ್‌ನಿಂದ ಬೇರೆ  ಎಲ್ಲಿಯೂ ಹೋಗಿಲ್ಲ. ಹೀಗಾಗಿ, ಅಪಾರ್ಟ್‌ಮೆಂಟ್‌ ಅನ್ನು ಕಂಟೈನ್ಮೆಂಟ್‌ ಮಾಡಲಾಗಿದ್ದು, ಅವರು ನೆಲೆಸಿದ್ದ ಮನೆಯ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ನೆಲೆಸಿರುವವರನ್ನು ಕ್ವಾರಂಟೈನ್‌ ಆಗಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

Advertisement

ಮತ್ತಿಬ್ಬರು ಮೃತ: ನಗರದಲ್ಲಿ ಗುರುವಾರ ಒಟ್ಟು 9 ಮಂದಿಯಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 428 ಏರಿಕೆಯಾಗಿದೆ. ಇಬ್ಬರು (ಉಸಿರಾಟದ ಸಮಸ್ಯೆಯಿಂದ)ಮೃತಪಟ್ಟಿದ್ದು, ಒಟ್ಟು ಸಾವನ್ನಪ್ಪಿದವರ  ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಿಂದ ಆಗಮಿಸಿದ ನಾಲ್ವರು, ಆಂಧ್ರಪ್ರದೇಶದಿಂದ ಬಂದಿದ್ದ ಇಬ್ಬರು, ಮಹಾರಾಷ್ಟ್ರದಿಂದ ಆಗಮಿಸಿದ ಒಬ್ಬರು ಹಾಗೂ ರೂಪೇನ ಅಗ್ರಹಾರದ ರೋಗಿ ಸಂಖ್ಯೆ -2834 ಅವರ ಪ್ರಾಥಮಿಕ  ಸಂಪರ್ಕದಲ್ಲಿದ್ದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚಾಮರಾಜಪೇಟೆಯ 60 ವರ್ಷದ ಮಹಿಳೆಯೊಬ್ಬರು ಜ್ವರ, ತೀವ್ರ ಉಸಿರಾಟದ ಸಮಸ್ಯೆಯಿಂದ ಬುಧವಾರ  ಬೌರಿಂಗ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್‌ 19 ಸೋಂಕಿನಿಂದ ವಿಶ್ವೇಶ್ವರಪುರದ 65 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

ಪಾದರಾಯನಪುರದಲ್ಲಿ ಗರ್ಭಿಣಿಗೆ ಸೋಂಕು: ಪಾದರಾಯನಪುರದಲ್ಲಿ ಗರ್ಭಿಣಿಯಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಜಗಜೀವನರಾಂ ನಗರದ 9 ತಿಂಗಳ ಗರ್ಭಿಣಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಮಹಿಳೆಯ  ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ. ಕರಿಸಂದ್ರವಾರ್ಡ್‌ನ ನಿವಾಸಿಯೊಬ್ಬರಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿತ್ತು. ಇವರು ಹೌಸ್‌ ಕೀಪಿಂಗ್‌ ಮಾಡುತ್ತಿದ್ದ ಮಲ್ಲೇಶ್ವರ ನ್ಯಾಷನಲ್‌  ಬ್ಯಾಂಕ್‌ಅನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next