Advertisement

ಟೆಸ್ಟ್‌: ಭಾರತ “ಎ’ಗೆ ಇನ್ನಿಂಗ್ಸ್‌  ಗೆಲುವು

06:00 AM Aug 08, 2018 | |

ಬೆಂಗಳೂರು: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತ “ಎ’ ತಂಡವು ದಕ್ಷಿಣ ಆಫ್ರಿಕಾ “ಎ’ ತಂಡದೆದುರಿನ ಮೊದಲ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಮತ್ತು 30 ರನ್ನುಗಳ ಗೆಲುವು ದಾಖಲಿಸಿದೆ. ಮೊಹಮ್ಮದ್‌ ಸಿರಾಜ್‌ ಮತ್ತೆ ಮಾರಕ ದಾಳಿ ಸಂಘಟಿಸಿದ್ದರಿಂದ ದಕ್ಷಿಣ ಆಫ್ರಿಕಾ “ಎ’ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲೂ ಎಡವಿತು. 308 ರನ್ನಿಗೆ ಆಲೌಟಾಗಿ ಶರಣಾಯಿತು.

Advertisement

ಇನ್ನಿಂಗ್ಸ್‌  ಗೆಲುವು ಸಾಧಿಸಿದ ಭಾರತ “ಎ’ ತಂಡವು ಎರಡು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ದ್ವಿತೀಯ ಪಂದ್ಯ ಬೆಂಗಳೂರಿನಲ್ಲಿಯೇ ಆ. 10ರಿಂದ 13ರ ವರೆಗೆ ನಡೆಯಲಿದೆ. ಸೋಲು ತಪ್ಪಿಸಲು ದಕ್ಷಿಣ ಆಫ್ರಿಕಾ “ಎ’ ನಾಲ್ಕನೇ ದಿನವಾದ ಮಂಗಳವಾರ ದಿನಪೂರ್ತಿ ಆಡಬೇಕಿತ್ತು. 338 ರನ್ನುಗಳ ಹಿನ್ನಡೆಯ ಬಳಿಕ ತನ್ನ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ಸೋಮವಾರ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದು 99 ರನ್‌ ಗಳಿಸಿತ್ತು. 46 ರನ್ನಿನಿಂದ ದಿನದಾಟ ಆರಂಭಿಸಿದ ಜುಬೈರ್‌ ಹಮ್ಜಾ 63 ರನ್‌ ಗಳಿಸಿ ಗುರ್ಬಾನಿಗೆ ವಿಕೆಟ್‌ ಒಪ್ಪಿಸಿದರು. 

ಆ ಬಳಿಕ ರುಡಿ ಸೆಕೆಂಡ್‌ ಅವರನ್ನು ಸೇರಿಕೊಂಡ ಶಾನ್‌ ವಾನ್‌ ಬೆರ್ಗ್‌ ಆರನೇ ವಿಕೆಟಿಗೆ 119 ರನ್ನುಗಳ ಜತೆಯಾಟ ನಡೆಸಿದ್ದರಿಂದ ಪ್ರವಾಸಿ ತಂಡ ಪ್ರತಿಹೋರಾಟ ನೀಡಬಹುದೆಂದು ಭಾವಿಸಲಾಗಿತ್ತು. ಈ ಜೋಡಿ 49 ಓವರ್‌ಗಳಷ್ಟು ಸಮಯ ಭಾರತೀಯ ದಾಳಿಯನ್ನು ಧೈರ್ಯದಿಂದ ಎದುರಿಸಿತ್ತು. ಹೀಗಾಗಿ ಪಂದ್ಯ ಡ್ರಾದತ್ತ ಸಾಗುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ಜೋಡಿ ಮುರಿಯುತ್ತಲೇ ಭಾರತ ಮೇಲುಗೈ ಸಾಧಿಸಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ “ಎ’ 308 ರನ್ನಿಗೆ ಆಲೌಟಾಯಿತು.

ಸೆಕೆಂಡ್‌ ತಾಳ್ಮೆಯ ಆಟ
ಸೋಲು ತಪ್ಪಿಸಲು ಸೆಕೆಂಡ್‌ ಮತ್ತು ಬೆರ್ಗ್‌ ಬಹಳಷ್ಟು ಶ್ರಮ ವಹಿಸಿದರು. ಸುಮಾರು 49 ಓವರ್‌ ಆಡಿದ ಅವರಿಬ್ಬರು ಭಾರತೀಯ ಬೌಲರ್‌ಗಳ ಬೆವರಿಳಿಸಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಬೆರ್ಗ್‌ 50 ರನ್‌ ಗಳಿಸಿ ಔಟಾಗುತ್ತಲೇ ಭಾರತದ ಪಾಳಯದಲ್ಲಿ ನಗು ಮರಳಿತು. 175 ಎಸೆತ ಎದುರಿಸಿದ ಅವರು 6 ಬೌಂಡರಿ ಬಾರಿಸಿದ್ದರು. ಅವರಿಗೆ ಉತ್ತಮ ಬೆಂಬಲ ನೀಡಿದ ಸೆಕೆಂಡ್‌ 214 ಎಸೆತ ಎದುರಿಸಿದ್ದು 94 ರನ್‌ ಹೊಡೆದರು. 15 ಬೌಂಡರಿ ಹೊಡೆದಿದ್ದರು. ದಕ್ಷಿಣ ಆಫ್ರಿಕಾದ ದ್ವಿತೀಯ ಇನ್ನಿಂಗ್ಸ್‌ನ ಆರಂಭದ ಮೂರು ವಿಕೆಟ್‌ ಕಿತ್ತು ಪ್ರಬಲ ಹೊಡೆತ ನೀಡಿದ್ದ ಸಿರಾಜ್‌ ಅಂತಿಮವಾಗಿ 73 ರನ್ನಿಗೆ 5 ವಿಕೆಟ್‌ ಕಿತ್ತರು. ಅವರು ಮೊದಲ ಇನ್ನಿಂಗ್ಸ್‌ನಲ್ಲೂ 56 ರನ್ನಿಗೆ 5 ವಿಕೆಟ್‌ ಪಡೆದಿದ್ದರು. ಗುರ್ಬಾನಿ 45 ರನ್ನಿಗೆ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು
ದಕ್ಷಿಣ ಆಫ್ರಿಕಾ “ಎ” 246 ಮತ್ತು 308 (ಜುಬೈರ್‌ ಹಮ್ಜಾ 63, ಮುತ್ತುಸ್ವಾಮಿ 41, ರುಡಿ ಸೆಕೆಂಡ್‌ 94, ಶಾನ್‌ ವಾನ್‌ ಬೆರ್ಗ್‌ 50, ಮೊಹಮ್ಮದ್‌ ಸಿರಾಜ್‌ 73ಕ್ಕೆ 5, ಗುರ್ಬಾನಿ 45ಕ್ಕೆ 2);  ಭಾರತ 8 ವಿಕೆಟಿಗೆ 584 ಡಿಕ್ಲೇರ್‌. 

Advertisement
Advertisement

Udayavani is now on Telegram. Click here to join our channel and stay updated with the latest news.

Next