ಪ್ರೊವಿಡೆನ್ಸ್ (ಗಯಾನಾ): ಕೇಶವ ಮಹಾರಾಜ್ ಅವರ ಉತ್ತಮ ಬೌಲಿಂಗ್ ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್‌ಇಂಡೀಸ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯ ದಲ್ಲಿ 40 ರನ್ನುಗಳ ಜಯ ಸಾಧಿಸಿದೆ.
ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ಸರಣಿಯ ಮೊದಲ ಪಂದ್ಯ ಡ್ರಾಗೊಂಡಿತ್ತು. ಈ ಸಾಧನೆಯಿಂದಾಗಿ ದಕ್ಷಿಣ ಆಫ್ರಿಕಾವು ವೆಸ್ಟ್‌ಇಂಡೀಸ್ ವಿರುದ್ಧ ಸತತ 10ನೆ ಟೆಸ್ಟ್ ಸರಣಿ ಗೆಲುವು ದಾಖಲಿಸಿದಂತಾಗಿದೆ.
ಪಂದ್ಯದ ಮೂರನೇ ದಿನ ಗೆಲ್ಲಲು 263 ರನ್ ಗಳಿಸುವ ಗುರಿ ಪಡೆದ ವೆಸ್ಟ್‌ಇಂಡೀಸ್ ತಂಡವು ಮಹಾರಾಜ್ ಅವರ ದಾಳಿಗೆ ಕುಸಿದು 222 ರನ್ನಿಗೆ ಆಲೌಟಾಗಿ ಶರಣಾಯಿತು. ಒಂದು ಹಂತದಲ್ಲಿ 104 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಗುಡಕೇಶ್ ಮೋಟಿ ಮತ್ತು ಜೋಶುವ ಡ ಸಿಲ್ವ ಆಸರೆ ಯಾಗಿ ನಿಂತರು. ಅವರು 77 ರನ್ನುಗಳ ಜತೆಯಾಟ ನೀಡಿದಾಗ ತಂಡಕ್ಕೆ ಸ್ವಲ್ಪಮಟ್ಟಿಗೆ ಗೆಲ್ಲುವ ವಿಶ್ವಾಸವಿತ್ತು. ಆದರೆ ಈ ಜೋಡಿಯನ್ನು ಮಹಾ ರಾಜ್ ಮುರಿಯುತ್ತಲೇ ತಂಡದ ಸೋಲು ಖಚಿತವಾಗಿತ್ತು.
ಈ ಪಂದ್ಯದಲ್ಲಿ ಐದು ವಿಕೆಟ್ ಕಿತ್ತ ಮಹಾರಾಜ್ ಒಟ್ಟಾರೆ ಈ ಸರಣಿಯಲ್ಲಿ 13 ವಿಕೆಟ್ ಕಿತ್ತು ಮಿಂಚಿದರು. ಈ ಸಾಧನೆಯೊಂದಿಗೆ ಮಹಾರಾಜ್ ಅವರು ಟೆಸ್ಟ್ ಇತಿಹಾಸದಲ್ಲಿ 171 ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾದ ಅತ್ಯಂತ ಯಶಸ್ವಿ ಸ್ಪಿನ್ನರ್ ಎಂಬ ಹಿರಿಮೆಗೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 160 ಮತ್ತು 246; ವೆಸ್ಟ್‌ಇಂಡೀಸ್ 144 ಮತ್ತು 222 (ಗುಡಕೇಶ್ ಮೋಟಿ 45, ಕಾಗಿಸೊ ರಬಾಡ 50ಕ್ಕೆ 3, ಕೇಶವ ಮಹಾರಾಜ್ 27ಕ್ಕೆ 3). ಪಂದ್ಯಶ್ರೇಷ್ಠ: ವಿಯಾನ್ ಮುಲ್ಡರ್, ಕೇಶವ ಮಹಾರಾಜ್ ಸರಣಿಶ್ರೇಷ್ಠ.