Advertisement

ಭೀತಿ ಹುಟ್ಟಿಸಲು ನಾಗರಿಕರ ಹತ್ಯೆ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

08:58 PM Oct 15, 2021 | Team Udayavani |

ನಾಗ್ಪುರ: ಜಮ್ಮು ಮತ್ತು ಕಾಶ್ಮೀರದ ಜನರ ಮನಸ್ಸಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದಲೇ ಉಗ್ರರು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ಶುಕ್ರವಾರ ನಾಗ್ಪುರದಲ್ಲಿ ವಿಜಯದಶಮಿ ಕಾರ್ಯಕ್ರಮದಲ್ಲಿ ಅವರು, ಪ್ರಸಕ್ತ ತಿಂಗಳ ಮೊದಲ 10 ದಿನಗಳಲ್ಲಿ ಹಿಂದೂ ಹಾಗೂ ಸಿಖ್ಖರನ್ನು ಗುರಿಯಾಗಿಸಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಉಗ್ರರ ದಾಳಿ ಕುರಿತು ಪ್ರಸ್ತಾಪಿಸುತ್ತಾ ಈ ಮಾತುಗಳನ್ನಾಡಿದ್ದಾರೆ.

370ನೇ ವಿಧಿ ರದ್ದಾದ ಬಳಿಕ ಕೇಂದ್ರಾಡಳಿತ ಪ್ರದೇಶದ ಜನರಿಗೆ ಹಲವು ರೀತಿಯ ಅನುಕೂಲಗಳಾಗಿವೆ. ಈಗ ಉಗ್ರರು ತಮ್ಮ ಅಸ್ತಿತ್ವಕ್ಕಾಗಿ ಜನರಲ್ಲಿ ಭಯ ಮೂಡಿಸುವ ಕೆಲಸಕ್ಕಿಳಿದಿದ್ದಾರೆ. ಇದಕ್ಕಾಗಿಯೇ ಅವರು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರವು ಇಂಥವರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಮೂಲಕ ಈ ಯುದ್ಧವನ್ನು ಗೆಲ್ಲಬೇಕು ಎಂದು ಭಾಗವತ್‌ ಕರೆ ನೀಡಿದ್ದಾರೆ.

ಇದನ್ನೂ ಓದಿ:ಮೂಕ ಪ್ರಾಣಿಯ ಈ ಪ್ರೀತಿಗೆ ಭಾಷೆಯಿಲ್ಲ!

ಡ್ರಗ್‌, ಒಟಿಟಿ, ಬಿಟ್‌ಕಾಯಿನ್‌ಗೆ ಕಡಿವಾಣ
ಮಾದಕದ್ರವ್ಯಗಳು, ಒಟಿಟಿ ವೇದಿಕೆ, ಬಿಟ್‌ಕಾಯಿನ್‌ಗಳ ಬಳಕೆ ಕುರಿತು ಭಾಗವತ್‌ ಕಳವಳ ವ್ಯಕ್ತಪಡಿಸಿದ್ದಾರೆ. ಒಟಿಟಿ ಪ್ಲಾಟ್‌ಫಾರಂಗಳಲ್ಲಿ “ಅನಿರ್ಬಂಧಿತ’ ಕಂಟೆಂಟ್‌ಗಳನ್ನು ತೋರಿಸಲಾಗುತ್ತಿದ್ದು, ಅದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ. ಬಿಟ್‌ಕಾಯಿನ್‌ ಬಳಕೆಗೆ ಮೂಗುದಾರ ಹಾಕದಿದ್ದರೆ, ಅದು ಆರ್ಥಿಕತೆಯನ್ನು ಅಸ್ಥಿರಗೊಳಿಸಲಿದೆ. ಇನ್ನೊಂದೆಡೆ, ಸಮಾಜದ ಎಲ್ಲ ಸ್ತರಗಳಲ್ಲೂ ಮಾದಕ ದ್ರವ್ಯ ಸೇವನೆ ಚಾಲ್ತಿಯಲ್ಲಿದ್ದು, ಡ್ರಗ್‌ ಉದ್ದಿಮೆಯಿಂದ ಬರುವ ಹಣವನ್ನು ದೇಶವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳು ಇವುಗಳನ್ನು ಉತ್ತೇಜಿಸುತ್ತಿವೆ ಎಂದೂ ಭಾಗವತ್‌ ಆರೋಪಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next