ಶ್ರೀನಗರ: ಇತ್ತೀಚೆಗೆ ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಪಾಕಿಸ್ಥಾನಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಭಾನುವಾರ ಹತ್ಯೆಗೈಯಲಾಗಿದೆ. ಎನ್‌ಕೌಂಟರ್‌ನಲ್ಲಿ ಮೂವರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ನಗರದ ಬಿಶೆಂಬರ್ ನಗರ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಆ ವೇಳೆ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಎನ್‌ಕೌಂಟರ್‌ನಲ್ಲಿ ಎಲ್ಇಟಿಗೆ ಸೇರಿದ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಮೂವರು ಭದ್ರತಾ ಪಡೆ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಎನ್‌ಕೌಂಟರ್ ಸ್ಥಳದಲ್ಲಿ ಭಯೋತ್ಪಾದಕರು ಗ್ರೆನೇಡ್ ಎಸೆದರು, ಇದರಿಂದಾಗಿ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.
ಗಾಯಗೊಂಡವರನ್ನು ಇಲ್ಲಿನ ಸೇನೆಯ ಆಸ್ಪತ್ರೆಗೆ ರವಾನಿಸಲಾಗಿದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಕಾಶ್ಮೀರ ವಲಯ ಪೊಲೀಸ್, ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ವಿಜಯ್ ಕುಮಾರ್ ಟ್ವೀಟ್ ಮಾಡಿ, ಏಪ್ರಿಲ್ 4 ರಂದು ನಗರದ ಮೈಸುಮಾ ಪ್ರದೇಶದಲ್ಲಿ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ನಡೆದ ದಾಳಿಯಲ್ಲಿ ಇಬ್ಬರೂ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.