Advertisement

ಉಗ್ರ ಹಫೀಜ್‌ ಸಯೀದ್‌ ಶಸ್ತ್ರಾಸ್ತ್ರ ಪರವಾನಿಗೆ ರದ್ದು

03:45 AM Feb 22, 2017 | |

ಇಸ್ಲಾಮಾಬಾದ್‌/ಹೊಸದಿಲ್ಲಿ: ಪಾಕ್‌ ನೆಲದಲ್ಲಿ ಕುಳಿತು ಬೇರೆ ದೇಶಗಳಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ ಮುಂಬಯಿ ದಾಳಿ ರೂವಾರಿ, ಜಮಾತ್‌-ಉದ್‌-ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಈಗ ನಿರಂತರ ಬಿಸಿ ಮುಟ್ಟಿಸಲಾಗುತ್ತಿದೆ. ಉಗ್ರನ ವಿರುದ್ಧ ಟೊಂಕಕಟ್ಟಿರುವ ಪಾಕಿಸ್ಥಾನವು ತನ್ನ ಕಠಿನ ಕ್ರಮಗಳನ್ನು ಮುಂದುವರಿಸಿದ್ದು, ಆತನಿಗೆ ನೀಡಲಾಗಿದ್ದ ಶಸ್ತ್ರಾಸ್ತ್ರ ಪರವಾನಿಗೆ ರದ್ದುಪಡಿಸಿದೆ.

Advertisement

ಹಫೀಜ್‌ ಸಯೀದ್‌ ಮತ್ತು ಆತನ ಸಹಚರರನ್ನು ಉಗ್ರ ನಿಗ್ರಹ ಕಾಯ್ದೆಯ ಪಟ್ಟಿಯಲ್ಲಿ ಸೇರಿಸಿದ ಬೆನ್ನಲ್ಲೇ ಪಾಕಿಸ್ಥಾನ ಇಂಥದೊಂದು ಕ್ರಮ ಕೈಗೊಂಡಿದೆ. ಸಯೀದ್‌ ಮತ್ತು ಆತನ ಸಂಘಟನೆಯ ಇತರ ಸದಸ್ಯರಿಗೆ ನೀಡಲಾಗಿದ್ದ 44 ಶಸ್ತ್ರಾಸ್ತ್ರಗಳ ಲೈಸನ್ಸ್‌ ಅನ್ನು ಭದ್ರತೆಯ ಕಾರಣಗಳಿಗಾಗಿ ರದ್ದು ಮಾಡಿ ಮಂಗಳವಾರ ಪಾಕ್‌ ಸರಕಾರ ಆದೇಶ ಹೊರಡಿಸಿದೆ. ಉಗ್ರ ಹಫೀಜ್‌ ವಿರುದ್ಧದ ಈ ಕ್ರಮವನ್ನು ಭಾರತ ಸ್ವಾಗತಿಸಿದರೆ, ಪಾಕಿಸ್ಥಾನದಲ್ಲಿ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹಫೀಜ್‌ ತಲೆಗೆ 10 ದಶಲಕ್ಷ ಡಾಲರ್‌ ಬಹುಮಾನ ಘೋಷಿಸಲಾಗಿದೆ. 2008ರ ಮುಂಬಯಿ ದಾಳಿ ಬಳಿಕ ಬಂಧಿತನಾಗಿದ್ದ ಈತನನ್ನು 2009ರಲ್ಲಿ ಲಾಹೋರ್‌ ಹೈಕೋರ್ಟ್‌ ಬಿಡುಗಡೆ ಮಾಡಿತ್ತು.

ಸಯೀದ್‌ ಅಪಾಯಕಾರಿ: ಮತ್ತೂಂದು ಬೆಳವಣಿಗೆಯಲ್ಲಿ, ಉಗ್ರ ಹಫೀಜ್‌ ಸಯೀದ್‌ ನಮ್ಮ ದೇಶಕ್ಕೂ ಅತ್ಯಂತ ಅಪಾಯಕಾರಿ ಎಂದು ಪಾಕಿಸ್ಥಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ. ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಆಸಿಫ್, “ಸಯೀದ್‌ ಇಡೀ ಸಮಾಜಕ್ಕೆ ಗಂಭೀರ ಅಪಾಯ ತಂದೊಡ್ಡ ಬಲ್ಲಂಥ ಮನುಷ್ಯ’ ಎಂದಿದ್ದಾರೆ.

ಪಾಕ್‌ನಲ್ಲಿ ಆಕ್ಷೇಪ
ಪಾಕ್‌ ರಕ್ಷಣಾ ಸಚಿವ ಆಸಿಫ್  ಹೇಳಿಕೆಗೆ ಪಾಕಿಸ್ಥಾನದ ಕೆಲವು ರಾಜಕೀಯ ಹಾಗೂ ಧಾರ್ಮಿಕ ನಾಯಕರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ. “ಆಸಿಫ್ ಅವರು ಭಾರತದ ರಕ್ಷಣಾ ಸಚಿವರೋ, ಪಾಕಿಸ್ಥಾನದ ಸಚಿವರೋ’ ಎಂದು ತೆಹ್ರಿಕ್‌-ಇ-ಇನ್ಸಾಫ್ ನಾಯಕ ಮಹುದುರ್‌ ರಶೀದ್‌ ಪ್ರಶ್ನಿಸಿದ್ದಾರೆ. ಭಾರತವನ್ನು ಓಲೈಸಲು ಆಸಿಫ್ ಇಂಥ ಹೇಳಿಕೆ ನೀಡುತ್ತಿದ್ದಾರೆ. ಅವರೀಗ ಭಾರತದ ಮುಖವಾಣಿಯಂತೆ ಕಾಣಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಸರ್ದಾರ್‌ ಮೊಹಮ್ಮದ್‌ ಆತೀಕ್‌ ಕಿಡಿಕಾರಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next