ಅಹಮದಾಬಾದ್: “ಬಾಟ್ಲಾ ಹೌಸ್ ಎನ್‌ಕೌಂಟರ್ ವೇಳೆ ಕಾಂಗ್ರೆಸ್ ನಾಯಕರು ಭಯೋತ್ಪಾದಕರ ಪರ ಮಾತನಾಡಿದರು. ಭಯೋತ್ಪಾದನೆ ಕೂಡ ಕಾಂಗ್ರೆಸ್‌ಗೆ ವೋಟ್‌ಬ್ಯಾಂಕ್ ಆಗಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಗುಜರಾತ್‌ನ ಖೇಡಾದಲ್ಲಿ ಭಾನುವಾರ ಚುನಾವಣಾ ಪ್ರಚಾರ ರ್‍ಯಾಲಿ ನಡೆಸಿ ಅವರು ಮಾತನಾಡಿದರು. ಗುಜರಾತ್ ದೀರ್ಘಕಾಲದಿಂದ ಉಗ್ರರ ಟಾರ್ಗೆಟ್ ಆಗಿತ್ತು. ಸೂರತ್, ಅಹಮದಾಬಾದ್ ಸ್ಫೋಟದಲ್ಲಿ ಹಲವರು ಮೃತಪಟ್ಟರು. ಆಗ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ನಾನು ಭಯೋತ್ಪಾದನೆಯನ್ನು ಟಾರ್ಗೆಟ್ ಮಾಡಿ ಎಂದು ಕಾಂಗ್ರೆಸ್‌ಗೆ ಸಲಹೆ ನೀಡಿದೆ. ಆದರೆ ಅವರು ನನ್ನನ್ನೇ ಟಾರ್ಗೆಟ್ ಮಾಡತೊಡಗಿದರು ಎಂದೂ ಮೋದಿ ಹೇಳಿದರು.
ಕಾಂಗ್ರೆಸ್ ಮತ್ತು ಸಮಾನಮನಸ್ಕ ಪಕ್ಷಗಳು ಉಗ್ರವಾದವನ್ನೇ ಯಶಸ್ಸಿಗೆ ಶಾರ್ಟ್‌ಕಟ್ ದಾರಿ ಎಂದು ಭಾವಿಸಿವೆ. ಹಾಗಾಗಿ ದೊಡ್ಡ ದೊಡ್ಡ ದಾಳಿಗಳು ನಡೆದಾಗಲೂ ಆ ಪಕ್ಷಗಳು ಮೌನ ವಹಿಸುತ್ತವೆ ಎಂದು ಹೇಳಿದರು.
ಭರೂಚ್ ಜಿಲ್ಲೆಯ ಬುಡಕಟ್ಟುಜನಾಂಗದ ಬಾಹುಳ್ಯವಿರುವ ಪ್ರದೇಶ ನೇತ್ರಂಗ್‌ನಲ್ಲಿ ರ್‍ಯಾಲಿ ನಡೆಸಿ ಮಾತನಾಡಿದ ಮೋದಿ, “ಕಾಂಗ್ರೆಸ್‌ಗೆ ದೇಶದ ಬುಡಕಟ್ಟು ಸಮುದಾಯದ ಬಗ್ಗೆ ಗೌರವ ಇಲ್ಲ. ರಾಷ್ಟ್ರಪತಿ ಚುನಾವಣೆ ವೇಳೆ ದ್ರೌಪದಿ ಮುರ್ಮು ಅವರ ಅಭ್ಯರ್ಥಿತನವನ್ನೂ ಅವರು ವಿರೋಧಿಸಿದ್ದರು. ಕೊನೆಗೆ ನಾವು ಎಲ್ಲ ರೀತಿಯಲ್ಲೂ ಪ್ರಯತ್ನಿಸಿ ಮರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೇರಿಸಿದೆವು’ ಎಂದರು .
Related Articles
ಕಾಂಗ್ರೆಸ್ ಅಭ್ಯರ್ಥಿ ವಿವಾದ:
ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಜ್‌ಕೋಟ್‌ನ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಪ್ರಚಾರ ನಡೆಸಿದ ಇಂದ್ರನಿಲ್ ರಾಜ್‌ಗುರು ಅವರು, “ನಾನು ಹರ್ ಹರ್ ಮಹದೇವ್’ ಎಂದು ಪಠಣ ಮಾಡುತ್ತೇನೆ. ನೀವೂ ನನ್ನೊಂದಿಗೆ ಧ್ವನಿಗೂಡಿಸಬೇಕು ಎನ್ನುತ್ತಾರೆ. ಅದರಂತೆಯೇ, ಅಲ್ಲಿ ನೆರೆದಿದ್ದವರೆಲ್ಲರೂ “ಹರ್ ಹರ್ ಮಹದೇವ್’ ಎಂದು ಘೋಷಣೆ ಕೂಗುತ್ತಾರೆ. ನಂತರ ರಾಜ್‌ಗುರು, “ನನ್ನ ಪ್ರಕಾರ, ಮಹಾದೇವ ಮತ್ತು ಅಲ್ಲಾಹನು ಒಬ್ಬರೇ. ಮಹಾದೇವನು ಅಜ್ಮೇರ್ ನಲ್ಲಿ ನೆಲೆಸಿದರೆ, ಅಲ್ಲಾಹನು ಸೋಮನಾಥದಲ್ಲಿ ನೆಲೆಸಿರುತ್ತಾನೆ. ಅಲ್ಲಾಹು ಅಕºರ್(ದೇವರು ಪರಮಶ್ರೇಷ್ಠನು)’ ಎಂದು ಹೇಳುತ್ತಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಜ್‌ಗುರು ವಿರುದ್ಧ ಕಿಡಿಕಾರಿರುವ ಬಿಜೆಪಿ, “ಕಾಂಗ್ರೆಸ್ ಅಭ್ಯರ್ಥಿ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದೆ.
ಆಪ್‌ಗೆ ಜಯ ಖಚಿತ: ಬರೆದುಕೊಟ್ಟ ಕೇಜ್ರಿವಾಲ್
ಗುಜರಾತ್ ವಿಧಾನಸಭೆ ಚುನಾವಣೆಯ ಬಳಿಕ ಆಮ್ ಆದ್ಮಿ ಪಕ್ಷವೇ ಸರ್ಕಾರ ರಚಿಸಲಿದೆ ಎಂದು ಬರೆದುಕೊಡುವ ಮೂಲಕ ಗೆಲುವು ನಮ್ಮದೇ ಎಂಬುದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪುನರುಚ್ಚರಿಸಿದರು. ಸೂರತ್‌ನಲ್ಲಿ ಮಾತನಾಡಿದ ಅವರು, ದೆಹಲಿ ಮತ್ತು ಪಂಜಾಬ್ ಚುನಾವಣೆಯಲ್ಲಿ ನಾನು ನುಡಿದ ಭವಿಷ್ಯ ಹೇಗೆ ನಿಜವಾಯಿತೋ, ಗುಜರಾತ್‌ನಲ್ಲೂ ಹಾಗೆಯೇ ಆಗಲಿದೆ ಎಂದರು. ಅಲ್ಲದೇ, ಸರ್ಕಾರಿ ನೌಕರರಿಗೆ ಮುಂದಿನ ಜ.31ರೊಳಗಾಗಿ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವ ಭರವಸೆಯನ್ನೂ ನೀಡಿದರು.
ಡಿ.1ರಂದು ಜನಾಕ್ರೋಶ ಯಾತ್ರೆ
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಡಿ.1ರಂದು ಜನಾಕ್ರೋಶ ರ್‍ಯಾಲಿ ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ರೈತರು ಮತ್ತು ಆಡಳಿತಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶದಿಂದ ಜೈಪುರದಲ್ಲಿ 51 ಜನಾಕ್ರೋಶ ರಥಗಳಿಗೆ ಅವರು ಚಾಲನೆ ನೀಡುತ್ತಾರೆ. ಈ ರಥಗಳು ರಾಜಸ್ಥಾನದ ಬೇರೆ ಬೇರೆ ಅಸೆಂಬ್ಲಿ ಕ್ಷೇತ್ರಗಳಿಗೆ ಸಂಚರಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.
ದೇಹದಲ್ಲಿರುವ ಕೆಟ್ಟ ಕೋಶಗಳನ್ನು ಹೇಗೆ ಪ್ರತಿಕಾಯಗಳು ನಿಗ್ರಹಿಸುತ್ತವೆಯೋ, ಅದೇ ರೀತಿ ದೇಶದ್ರೋಹಿ ಶಕ್ತಿಗಳನ್ನು ರಾಜ್ಯ ಸರ್ಕಾರಗಳು ನಿಗ್ರಹಿಸಬೇಕು. ಕೆಲವು ಕೋಶಗಳು ಭೂಗತವಾಗಿ ಕೆಲಸ ಮಾಡುತ್ತಿರುತ್ತವೆ. ಅವುಗಳಿಗೆ ಕಡಿವಾಣ ಹಾಕಲೆಂದೇ ನಾವು ಉಗ್ರವಾದ ನಿಗ್ರಹ ಘಟಕ ಸ್ಥಾಪಿಸುತ್ತಿದ್ದೇವೆ.
– ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ