Advertisement

ಯಾಸಿನ್‌ ಮಲಿಕ್‌ ದೋಷಿ- ದೆಹಲಿ ವಿಶೇಷ ನ್ಯಾಯಾಲಯದ ತೀರ್ಪು

10:17 PM May 19, 2022 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಧನ ಸಹಾಯ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಯಾಸಿನ್‌ ಮಲಿಕ್‌ನನ್ನು ದೋಷಿ ಎಂದು ದೆಹಲಿಯ ಸ್ಥಳೀಯ ನ್ಯಾಯಾಲಯ ಘೋಷಿಸಿದೆ.

Advertisement

ಮಲಿಕ್‌ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಅಡಿಯಲ್ಲಿಯೂ ಪ್ರಕರಣಗಳು ದಾಖಲಾಗಿದ್ದವು.

ಯಾಸಿನ್‌ ಮಲಿಕ್‌ಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣ ಕುರಿತ ತೀರ್ಪು ಮೇ 25ರಂದು ಹೊರಬೀಳಲಿದೆ. ಆದರೆ, ಅದಕ್ಕೂ ಮುನ್ನ ಆತನಿಗೆ ದಂಡವನ್ನೂ ವಿಧಿಸಬೇಕಿದ್ದು, ಆ ಹಿನ್ನೆಲೆಯಲ್ಲಿ ಆತನ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ  ವಿಶೇಷ ನ್ಯಾಯಮೂರ್ತಿ ಪ್ರವೀಣ್‌ ಸಿಂಗ್‌, ರಾಷ್ಟ್ರೀಯ ತನಿಖಾ ಆಯೋಗಕ್ಕೆ (ಎನ್‌ಐಎ) ಸೂಚಿಸಿದ್ದಾರೆ.

ಮತ್ತೂಂದೆಡೆ, ತನ್ನ ಮೇಲಿರುವ ಆಪಾದನೆಗಳು ಸುಳ್ಳು ಎಂಬುದನ್ನು ಸಾಬೀತುಪಡಿಸಲು ತಾವು ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಮಲಿಕ್‌, ನ್ಯಾಯಪೀಠಕ್ಕೆ ತಿಳಿಸಿದ್ದಾನೆ.

ಮತ್ತೂಂದೆಡೆ, ಮಲಿಕ್‌ ಜತೆಗೆ ಬಂಧನಕ್ಕೀಡಾಗಿರುವ ಇತರ ಕಾಶ್ಮೀರ ಪ್ರತ್ಯೇಕತಾವಾದಿಗಳಾದ ಫಾರೂಕ್‌ ಅಹ್ಮದ್‌ ದಾರ್‌ ಅಲಿಯಾಸ್‌ ಬಿಟ್ಟಾ ಕರಾಟೆ, ಶಬ್ಬೀರ್‌ ಶಾ, ಮಸಾರತ್‌ ಆಲಂ, ಮೊಹಮ್ಮದ್‌ ಯೂಸುಫ್ ಶಾ, ಅಲ್ತಾಫ್ ಅಹ್ಮದ್‌ ಶಾ, ನಯೀಮ್‌ ಖಾನ್‌, ಮೊಹಮ್ಮದ್‌ ಅಕ್ಬರ್‌ ಖಂಡಯ್‌, ರಾಜಾ ಮೆಹ್ರಾಜುದ್ದೀನ್‌ ಕಾಲ್ವಲ್‌, ಬಶೀರ್‌ ಅಹ್ಮದ್‌ ಭಟ್‌, ಝಹೂರ್‌ ಅಹ್ಮದ್‌ ಶಾ ವಾಟಾಲಿ, ಶಬೀರ್‌ ಅಹ್ಮದ್‌ ಶಾ, ಅಬ್ದುಲ್‌ ರಷೀದ್‌ ಶೇಖ್‌ ಹಾಗೂ ನವಲ್‌ ಕಿಶೋರ್‌ ಕಪೂರ್‌ ಕೂಡ ಇದೇ ಅಭಿಮತ ವ್ಯಕ್ತಪಡಿಸಿದ್ದಾರೆ.

Advertisement

 ಪಾಕಿಸ್ತಾನ ಸಿಡಿಮಿಡಿ :

ಯಾಸಿನ್‌ ಮಲಿಕ್‌ ಅವರನ್ನು ದೆಹಲಿ ನ್ಯಾಯಾಲಯ ದೋಷಿ ಎಂದು ಘೋಷಿಸಿರುವುದನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ. ಮಲಿಕ್‌ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರಿಗೆ ಸಮನ್ಸ್‌ ಜಾರಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next