Advertisement
ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲಿ ಛೋಟಾ ಬಜಾರ್‌ನಿಂದ ಬಡಾ ಬಜಾರ್‌ಗೆ ಹೋಗುವ ದಾರಿಯಲ್ಲಿ ಮಾರ್ಗ ಮಧ್ಯೆಯೇ ಐಇಡಿ ಹೂತಿಡಲಾಗಿತ್ತು. ಶನಿವಾರ ಗಸ್ತು ಪಡೆಯ ವಾಹನದಲ್ಲಿ ಅಲ್ಲಿ ತಲುಪುತ್ತಿದ್ದಂತೆಯೇ, ಬಾಂಬ್ ಸ್ಫೋಟಗೊಂಡು ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ಪ್ರತ್ಯೇಕತಾವಾದಿಗಳು ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿ ಗಸ್ತು ತಿರುಗುತ್ತಿದ್ದರು. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ, “ರಾಜ್ಯದಲ್ಲಿನ ಉಗ್ರರ ಜಾಲವನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಬೇಕು’ ಎಂದಿದ್ದಾರೆ. ಜತೆಗೆ, ಹುತಾತ್ಮರಾದ ಪೊಲೀಸರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಸೇನೆಯ ನಕಲಿ ಸ್ಟಾಂಪ್ ಮತ್ತು ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್ ಪಡೆದುಕೊಂಡು, ಅದನ್ನು ಉಗ್ರರಿಗೆ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಜಮ್ಮು-ಕಾಶ್ಮೀರ ಪೊಲೀಸರು ಶನಿವಾರ ಪತ್ತೆಹಚ್ಚಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ 6 ಮಂದಿಯನ್ನು ಬಂಧಿಸಲಾಗಿದೆ. ಸೇನಾ ಗುಪ್ತಚರದ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಿದಾಗ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ನೂರಾರು ಸಿಮ್‌ಗಳನ್ನು ಆರೋಪಿಗಳು ಈಗಾಗಲೇ ಮಾರಾಟ ಮಾಡಿದ್ದಾರೆ. ಈ ಹಿಂದೆ ಯೂ ಉತ್ತರ ಕಾಶ್ಮೀರದಲ್ಲಿ ಇಂಥ ಜಾಲ ಕಾರ್ಯನಿರ್ವಹಿಸುತ್ತಿತ್ತು. ಇವರು ಮಾರಿದ ಸಿಮ್ ಅನ್ನು ಉಗ್ರರು ಐಇಡಿ ಸ್ಫೋಟಕ್ಕೆ ಬಳಸುತ್ತಿದ್ದುದೂ ಬಯಲಾಗಿತ್ತು.