ಕಂಚಿನ ಕಂಠದ ಜಾನಪದ ಶೈಲಿಯ ಸುಪ್ರಸಿದ್ಧ ಗಾಯಕಿ, ಕನ್ನಡ ಕೋಗಿಲೆ ಖ್ಯಾತಿಯ ಕಲಾವತಿ ದಯಾನಂದ್ ಅವರು ಉದಯವಾಣಿಯ ಯುಗಾದಿ ವಿಶೇಷ ‘ತೆರದಿದೆ ಮನೆ ಬಾ ಅತಿಥಿ’ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಇಂದು(ಸೋಮವಾರ) ಭಾಗವಹಿಸಿದ್ದರು.
‘ನನ್ನದು ಮಾತಲ್ಲ, ನನ್ನದು ಹಾಡು’ ಎಂದು ಮಾತು ಆರಂಭಿಸಿದ ಕಲಾವತಿ ಅವರ ಭಾವಾಭಿವ್ಯಕ್ತಿಗೆ ಎರಡನೇ ಮಾತಿಲ್ಲ. ಹಾಡಿನೊಳಗೆ ಲೀನವಾಗಿ ಸ್ವರ ಹೊಮ್ಮುವ ಅವರ ಕಂಠ ಇಂದು ‘ಲೇಡಿ ವರ್ಶನ್ ಆಫ್ ಸಿ ಅಶ್ವಥ್’, ‘ಜೂನಿಯರ್ ಉಷಾ ಉತ್ತಪ್ಪ’ ಎಂದು ಕರೆಸಿಕೊಳ್ಳುತ್ತಿದೆ ಎಂದರೇ ಅದು ಅವರ ಸ್ವರಕ್ಕಿರುವ ಹೆಚ್ಚುಗಾರಿಕೆ.
ಸಭೆ ಸಮಾರಂಭಗಳಲ್ಲಿ ಪ್ರಾರ್ಥನೆಗಳಿಂದ ಆರಂಭಿಸಿದ ಹಾಡಿನ ಬದುಕು ದೇವರ ದಯೆಯಿಂದ ಇಲ್ಲಿಯ ತನಕ ಬಂದು ತಲುಪಿಸಿದೆ. ನಾನು ಹಾಡುತ್ತಿದ್ದ ಪ್ರಾರ್ಥನೆಗೆ ಜನರ ಪ್ರಾರ್ಥನೆಯೂ ನನ್ನ ಮೇಲೆ ಇದ್ದಿದ್ದರ ಪರಿಣಾಮವಾಗಿ ಸಂಗೀತದಲ್ಲಿ ಈ ಮಟ್ಟಕ್ಕೆ ಬೆಳೆಯಲು ಪ್ರೇರೆಪಿಸಿದೆ ಎಂದು ಶುದ್ಧ ಸಲಿಲದಂತಿರುವ ಅವರ ಹೃದಯ ತೆರೆದಿಡುತ್ತಾರೆ ಕಲಾವತಿ.
ಓದಿ : ಪರ್ಕಳ ರಾ.ಹೆ. ವಿಸ್ತರಣೆ ಕಾಮಗಾರಿ : ಖಾಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿ
ಎಳವೆಯಲ್ಲಿ ಚೆನ್ನಪ್ಪ ಚೆನ್ನೆಗೌಡ ಪದ್ಯಕ್ಕೆ ಬಹುಮಾನವಾಗಿ ಸಿಕ್ಕ ಡಬ್ಬಿ, ಲೋಟ ಗಳನ್ನೇ ಆನಂದಿಸಿ ಅದನ್ನೇ ಮಹತ್ತರವಾದದ್ದು ಎಂದು ಭಾವಿಸಿಕೊಂಡು ಸಂಗೀತದ ನಿಜ ಬದುಕನ್ನು ಕಾಣಲು ಹೊರಟ ಕಲಾವತಿ ಎಂಬ ಸ್ವರ ಕೋಗಿಲೆಯ ಧ್ವನಿ ಇಂದು ರಾಜ್ಯದೆಲ್ಲೆಡೆ ಸ್ವರಗಾನ ಮೊಳಗಿಸುವ ಹಾಗೆ ಮಾಡಿದೆ ಅಂದರೇ, ಅದಕ್ಕೆ ಕಾರಣ ಸಂಗೀತದ ಮೇಲೆ ಅವರು ಇಟ್ಟ ಶ್ರದ್ಧೆ.
ಕನ್ನಡದ ಖಾಸಗಿ ಮನರಂಜನಾ ವಾಹಿನಿಯೊಂದರ ಸಂಗೀತ ಕಾರ್ಯಕ್ರಮ ‘ಕನ್ನಡ ಕೋಗಿಲೆ’ಯ ಮೂಲಕ ಬೆಳಕಿಗೆ ಬಂದ ಕರಾವಳಿಯ ಕಂಚಿನ ಕಂಠದ ಸ್ವರ ನಿಧಿ, ಜಾನಪದ ಸಂಗೀತದಲ್ಲಿ ಹೊಸ ಹೆಜ್ಜೆಯನ್ನೂರಿ ತನ್ನದೇ ಒಂದು ವಿಶೇಷ ಠೀವಿಯನ್ನು ರಚಿಸುವಲ್ಲಿ ಸಾರ್ಥಕತೆಯನ್ನು ಕಂಡಿದೆ ಎಂದರೇ ತಪ್ಪಿಲ್ಲ.
ಗಾಯಕಿ ಎಂದರೆ ಏನಂತ ಗೊತ್ತಿಲ್ಲದ ನಾನು… ದೇವರೆದುರಿಗೆ, ಲಕ್ಷ್ಮೀ ನಾರಾಯಣ ದೇವರು, ಕೃಷ್ಣನ ಎದುರು ಹಾಡಬೇಕೆಂಬುವುದಷ್ಟೇ ನನ್ನ ಆಸೆಯಾಗಿತ್ತು. ಇಲ್ಲಿಯ ತನಕ ತಂದು ನಿಲ್ಲಿಸುತ್ತದೆ ಎನ್ನುವುದು ಗೊತ್ತೇ ಇರಲಿಲ್ಲ ಎಂದು ವಿದೇಯರಾಗಿ ಹೇಳುವ ಅವರ ಮನಸ್ಸು ನಿಷ್ಕಲ್ಮಶ.
ಇಷ್ಟರ ಮಟ್ಟಿಗೆ ಬೆಳೆಯುವುದಕ್ಕೆ ಅವರ ಮನೆಯಲ್ಲಿಯೂ ಪೂರಕವಾದ ವಾತಾವರಣವಿದ್ದಿತ್ತು ಎನ್ನುವುದನ್ನು ಅವರೇ ಸ್ವತಃ ಹೇಳುತ್ತಾರೆ. ‘ಮನೆಯಲ್ಲಿ ಯಾವುದೇ, ಗಡುವುಗಳಿರಲಿಲ್ಲ. ಮುಕ್ತ ಅವಕಾಶ ಮನೆಯಲ್ಲಿತ್ತು. ಬೇರೆ ಎಲ್ಲಾ ವಿಚಾರಗಳಿಗೆ ಅಮ್ಮನ ನಿರ್ಬಂಧಗಳಿತ್ತು, ಆದರೇ, ಸಂಗೀತದ ವಿಚಾರಕ್ಕೆ ಅಮ್ಮ ನಿರ್ಬಂಧ ಹೇರಲಿಲ್ಲ, ಮದುವೆಯಾದ ಮೇಲೂ ನನಗೆ ಪೂರ್ಣ ಒಪ್ಪಿಗೆ ನನ್ನ ಯಜಮಾನರು ಕೊಟ್ಟಿದ್ದರು, ಎಷ್ಟರ ಮಟ್ಟಿಗೆ ಅಂದರೆ, ‘ಇನಿ ಗಂಜಿ ಚಟ್ನಿ ಯಾವ್ ಈ ಪೋಲಾ…(ಇವತ್ತು ಗಂಜಿ, ಚಟ್ನಿ ಸಾಕು..ನೀನು ಹೋಗು)’ ಎಂದು ನನ್ನನ್ನು ಕಾರ್ಯಕ್ರಮಗಳಿಗೆ ಹೋಗಲು ಬೆಂಬಲಿಸುತ್ತಿದ್ದರು ನನ್ನ ಗಂಡ ಎಂದು ತೃಪ್ತ ಭಾವ ವ್ಯಕ್ತ ಪಡಿಸುತ್ತಾರೆ ಕಲಾವತಿ.
(ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ವೆಬ್ ಕಂಟೆಂಟ್ ಕೋ ಆರ್ಡಿನೇಟರ್ ಅವಿನಾಶ್ ಕಾಮತ್ ಅವರೊಂದಿಗೆ ಸಿಂಗರ್ ಕಲಾವತಿ ದಯಾನಂದ್ ಮಾತನಾಡುತ್ತಿರುವುದು)
ಕಲಾವತಿ ದಯಾನಂದ್ ಇಂದು ಬೇಡಿಕೆಯ ಹಾಡುಗಾರ್ತಿಯಾಗಿ ರಾಜ್ಯಾದ್ಯಂತ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರೂ ಕೂಡ ಅವರು ತಾವು ಬಂದ ದಾರಿಯನ್ನು ಮರೆತಿಲ್ಲ. ಸಂಗೀತವನ್ನು ನನ್ನ ಕಂಠಕ್ಕೆ ದಾನ ಮಾಡಿದ ನನ್ನ ಸಂಗೀತದ ಗುರುಗಳನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಭಕ್ತಿ ಭಾವದಿಂದ ತಮ್ಮ ಗುರುಗಳನ್ನು, ವೇದಿಕೆ ಕಲ್ಪಿಸಿಕೊಂಡವರನ್ನು ನೆನಪಿಸಿಕೊಳ್ಳುತ್ತಾರೆ.
ಕೃಷ್ಣ ಅಂದರೇ ಇಷ್ಟ ನನಗೆ ಕೃಷ್ಣನೇ ಎಲ್ಲಾ ಎನ್ನುವ ಅವರಿಗೆ ಕೃಷ್ಣನ ಮುರುಳಿಯ ಗಾನ ಇವರ ಕಂಠಕ್ಕೆ ಒಲಿದಿದೆ ಎನ್ನುವುದರಲ್ಲಿ ಸಂಶಯಬೇಕಾಗಿಲ್ಲ…. ‘ಕೃಷ್ಣನಲ್ಲಿ ಎಲ್ಲವನ್ನೂ ಹೇಳಿಕೊಳ್ಳುತ್ತೆನೆ. ಕೃಷ್ಣನನ್ನು ಎಲ್ಲರಲ್ಲೂ ಕಾಣುವುದರಿಂದ ಈ ಅದೃಷ್ಟ ಒಲಿದಿದೆ ಅಂತ ನನಗೆ ಅನ್ನಿಸುತ್ತದೆ. ಕರ್ನಾಟಕದಾದ್ಯಂತ ಹೋದಲ್ಲೆಲ್ಲಾ ಗೌರವ, ಪ್ರೀತಿ ಕೊಟ್ಟು ಬದುಕು ಕೊಟ್ಟಿದ್ದಾರೆ’ ಎಂದು ಬದುಕಿಗೆ ಆಸರೆಯಾದವರನ್ನು ನೆನಪಿಸಿಕೊಳ್ಳುವ ಅವರ ಭಾವವೇ ಅವರನ್ನು ಎತ್ತರಕ್ಕೆ ಕೊಂಡು ಹೋಗುತ್ತಿದೆ ಎನ್ನುವುದು ಸುಳ್ಳಲ್ಲ.
ಸುಮಾರು ಒಂದು ಗಂಟೆಗಳ ಕಾಲ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವರು ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು. ವೀಕ್ಷಕರ ಹಾಗೂ ಉದಯವಾಣಿ. ಕಾಮ್ ಬಳಗದವರ ಬೇಡಿಕೆಯ ಹಾಡುಗಳನ್ನು ಹಾಡುವುದರ ಮೂಲಕ ಹೃದಯ ಗೆದ್ದರು. ‘
ಸೋರುತಿಹುದು ಮನಿಯ ಮಾಳಿಗಿ’, ‘ಕಾಣದ ಕಡಲಿಗೆ’, ‘ಕುರುಡು ನಾಯಿ ಸಂತೆಗೆ ಬಂದಂತೆ’.. ಹೀಗೆ ಇನ್ನು ಕೆಲವು ಭಾವ ಗೀತೆಗಳನ್ನು ಭಾವ ತುಂಬಿ ಹಾಡಿ ನೂರಾರು ವೀಕ್ಷಕರ ಶ್ಲಾಘನೆಗೆ ಪಾತ್ರರಾದರು.
ಬದುಕನ್ನು ಇಂಚಿಂಚು ಆನಂದಿಸುವ, ಸಂಗೀತವನ್ನು ಜೀವವೆಂದು ಭಾವಿಸಿ ಮುನ್ನಡೆಯುತ್ತಿದ್ದಾರೆ. ಬೇಂದ್ರೆ, ಸಂತ ಶಿಶುನಾಳ ಶರೀಫರಂತಹ ಸಾಹಿತ್ಯ, ಜಾನಪದ ದೈತ್ಯರ ಹಾಡುಗಳನ್ನು ಪ್ರಾಂಜಲ ಮನಸ್ಸಿನಿಂದ ಎದೆ ತುಂಬಿ ಹಾಡುವ ಕಲಾವತಿ ದಯಾನಂದ್ ಅವರಿಗೆ ಸಂಗೀತ ಮತ್ತಷ್ಟು ಒಲಿಯಲಿ ಎಂಬುವುದಷ್ಟೇ ನಮ್ಮ ಸದಾಶಯ.
ಓದಿ : ಕೋವಿಡ್ ಪ್ರಕರಣ ತೀವ್ರ ಹೆಚ್ಚಳ; ಬ್ರೆಜಿಲ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದ ಭಾರತ