ಜೈಪುರ್: 22 ವರ್ಷದ ಹಿಂದೂ ಯುವಕನ ಹತ್ಯೆಯ ನಂತರ ರಾಜಸ್ಥಾನದ ಭಿಲ್ವಾರಾದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಮೇ 11ರ ಬೆಳಗ್ಗೆ 6ಗಂಟೆಯಿಂದ 24ಗಂಟೆಗಳವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಟೊಮೆಟೊ ಜ್ವರ ಆತಂಕ !: ಕೇರಳದಲ್ಲಿ 80 ಕ್ಕೂ ಹೆಚ್ಚು ಪುಟ್ಟ ಮಕ್ಕಳಿಗೆ ಸೋಂಕು
ಹಿಂದೂ ಯುವಕನ ಹತ್ಯೆಯ ನಂತರ ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ, ಹಿಂದೂ ಜಾಗರಣ್ ಮಂಚ್ ಭಿಲ್ವಾರಾ ಬಂದ್ ಗೆ ಕರೆ ನೀಡಿವೆ. ವರದಿಯ ಪ್ರಕಾರ, ಹಣದ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಕೆಲವು ಯುವಕರು 22 ವರ್ಷದ ಆದರ್ಶ್ ತಪಾಡಿಯಾ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
ಇತ್ತೀಚೆಗೆ ಭಿಲ್ವಾರಾದಲ್ಲಿ ನಿರಂತರವಾಗಿ ಕೋಮು ಗಲಭೆ ನಡೆಯುತ್ತಿದೆ ಎಂದು ವಿಎಚ್ ಪಿ ಗಣೇಶ್ ಪ್ರತಾಪ್ ತಿಳಿಸಿದ್ದು, ಮೃತ ಯುವಕನ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಎಲ್ಲಿಯವರೆಗೆ ಎಲ್ಲಾ ಆರೋಪಿಗಳನ್ನು ಬಂಧಿಸುವುದಿಲ್ಲವೋ ಅಲ್ಲಿಯವರೆಗೆ ಯವಕನ ಶವದ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ವಿಎಚ್ ಪಿ ತಿಳಿಸಿದೆ.