ಮೇರಠ್ : ಪಶ್ಚಿಮ ಉತ್ತರ ಪ್ರದೇಶದ ಮೇರಠ್ ನ ಸ್ವಾಮಿಪಾದ ಎಂಬಲ್ಲಿನ ಬುಢಾನಾ ಗೇಟ್ ಸಮೀಪದ ಮಸೀದಿಯೊಂದರ ಕೋಣೆಯಲ್ಲಿ ಸಮವಸ್ತ್ರದಲ್ಲಿದ್ದ ಶಾಲಾ ಬಾಲಕಿಯೊಬ್ಬಳು ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಉದ್ರಿಕ್ತ ಸ್ಥಿತಿ ತಲೆದೋರಿತು. ಪೊಲೀಸರು ಸಕಾಲದಲ್ಲಿ ಪ್ರವೇಶಿಸಿ ಮೌಲ್ವಿಯನ್ನು ಕಸ್ಟಡಿಗೆ ತೆಗೆದುಕೊಂಡರು.
ಮಸೀದಿಯೊಳಗಿನ ಮೌಲ್ವಿ ಕೋಣೆಯಲ್ಲಿ ಶಾಲಾ ಬಾಲಕಿಯನ್ನು ಕಂಡ ಸ್ಥಳೀಯರು ಕೂಡಲೇ ಕೋಮು ಘೋಷಣೆಗಳನ್ನು ಕೂಗತೊಡಗಿದರು. ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಬಂದರು.
ಆಗ ಮೌಲ್ವಿ ಮಸೀದಿಯ ಹಿಂಬಾಗಿಲಿನಿಂದ ಪರಾರಿಯಾಗಲು ಯತ್ನಿಸುತ್ತಿದ್ದುನ್ನು ಕಂಡು ಜನರು ಆತನನ್ನು ಹಿಡಿದರು. ಉದ್ರಿಕ್ತರಾಗಿದ್ದ ಜನರು ಮೌಲ್ವಿಯನ್ನು ಬಹುತೇಕ ಚಚ್ಚಿ ಸಾಯಿಸುವುದರಲ್ಲಿದ್ದರು. ಆದರೆ ಪೊಲೀಸರು ಕೂಡಲೇ ಅಲ್ಲಿಗೆ ಧಾವಿಸಿ ಮೌಲ್ವಿಯನ್ನು ವಶಕ್ಕೆ ತೆಗೆದುಕೊಂಡು ಆತನನ್ನು ಉದ್ರಿಕ್ತ ಕೈಯಿಂದ ಪಾರು ಮಾಡಿದರು.
ಅನಂತರವೂ ಸ್ಥಳದಲ್ಲಿ ಜಮಾಯಿಸಿದ್ದ ಉದ್ರಿಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಬೇಕಾಯಿತು.
ಇಷ್ಟಾಗುವಾಗ ಕೆಲವು ಸ್ಥಳೀಯ ಬಿಜೆಪಿ ನಾಯಕರು ಸ್ಥಳಕ್ಕೆ ಧಾವಿಸಿ ಬಂದರು. ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಶಾಂತಿ ಸಾಮರಸ್ಯ ಕದಡದಂತೆ ನೋಡಿಕೊಂಡರು.