Advertisement

ತೆಂಗಿಗೆ ಬೆಣ್ಣೆ-ಅಡಕೆಗೆ ಸುಣ್ಣ!

04:28 PM Oct 08, 2018 | |

ಚಿತ್ರದುರ್ಗ: ಸತತ ಬರ, ಅಂತರ್ಜಲ ಮಟ್ಟ ಕುಸಿತದಿಂದ ಅಡಕೆ, ತೆಂಗಿನ ತೋಟ ಕಳೆದುಕೊಂಡು ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಒಣಗಿ ಹೋಗಿರುವ ತೆಂಗಿನ ಮರಕ್ಕೆ ಪರಿಹಾರ ಘೋಷಣೆ ಮಾಡಿ, ಅಡಕೆ ಬೆಳೆಗಾರರನ್ನು ನಿರ್ಲಕ್ಷಿಸುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ, ಮತ್ತೂಂದು ಕಣ್ಣಿಗೆ ಸುಣ್ಣ ಹಾಕಿ ತಾರತಮ್ಯ ಮಾಡಿದೆ.

Advertisement

ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬರದಿಂದ ಒಣಗಿ ಹೋಗಿರುವ ತೆಂಗಿನ ಮರವೊಂದಕ್ಕೆ 400 ರೂ. ಅಥವಾ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ.ಗಳ ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ ಒಣಗಿದ ಅಡಕೆ ಮರಗಳಿಗೆ ಯಾವುದೇ ಪರಿಹಾರ ಘೋಷಣೆ ಮಾಡದೆ ತೆಂಗು ಮತ್ತು ಅಡಕೆ ಬೆಳೆಗಾರರಿಗೆ ತಾರತಮ್ಯವನ್ನುಂಟು ಮಾಡಿದೆ. ತುಮಕೂರು, ಹಾಸನ, ಮಂಡ್ಯ, ಮೈಸೂರು ಭಾಗದಲ್ಲಿ ಅಡಕೆ ಬೆಳೆಯದಿರುವುದು
ಇದಕ್ಕೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 10042.20 ಹೆಕ್ಟೇರ್‌ ಪ್ರದೇಶದಲ್ಲಿನ 3,074,975 ಅಡಕೆ ಮರಗಳು ಒಣಗಿ ಹೋಗಿ 626.98 ಕೋಟಿ ರೂ.ಗಳ ಬೆಳೆ ಹಾನಿಯಾಗಿದೆ. ತೋಟಗಾರಿಕೆ ಇಲಾಖೆ ಮೂಲಕ ಜಿಲ್ಲಾಧಿಕಾರಿಯವರು 2017ರಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಕೇಂದ್ರ ಸರ್ಕಾರ ಬರ ವಿಪತ್ತು ನಿಧಿಯಿಂದ ಯಾವುದೇ ಪರಿಹಾರ ನೀಡದೆ ರೈತರನ್ನು ಕಡೆಗಣಿಸಿದೆ. ಮತ್ತೂಂದು ಕಡೆ ರಾಜ್ಯ ಸಮ್ಮಿಶ್ರ ಸರ್ಕಾರ ತೆಂಗಿಗೆ ಪರಿಹಾರ ನೀಡಲು ತೀರ್ಮಾನ ಮಾಡಿರುವುದು ಉತ್ತಮ ಬೆಳವಣಿಗೆ. ಆದರೆ
ಅಡಕೆ ಮರಗಳಿಗೆ ಪರಿಹಾರ ನೀಡುವ ವಿಷಯದಲ್ಲಿ ಚಕಾರ ಎತ್ತದಿರುವುದು ಅಡಕೆ ಬೆಳೆಗಾರರಲ್ಲಿ ಬೇಸರ ಮೂಡಿಸಿದೆ. ಕಳೆದ ಹತ್ತು ವರ್ಷಗಳಿಂದ ಕಾಡುತ್ತಿರುವ ಬರ ಜಿಲ್ಲೆಯ ರೈತರ ಎದೆ ನಡುಗಿಸಿದೆ. 2016-17ರಲ್ಲಿ ಬರ ಮತ್ತು ಬಿಸಿಲಿನ ತಾಪದಿಂದಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ಎಲ್ಲ ಕೊಳವೆಬಾವಿಗಳು ಬರಿದಾಗಿ ಬತ್ತಿ ಹೋದವು. 

ಇದರ ಪರಿಣಾಮ ಜಿಲ್ಲೆಯಲ್ಲಿನ 10,103.30 ಹೆಕ್ಟೇರ್‌ ಪ್ರದೇಶದ 3,26,617 ತೆಂಗಿನ ಮರಗಳು, 10042.20 ಹೆಕ್ಟೇರ್‌ ಪ್ರದೇಶದಲ್ಲಿನ 3,074,975 ಸಂಖ್ಯೆಯ ಅಡಕೆ ಮರಗಳು ಸಂಪೂರ್ಣ ಒಣಗಿ ಹೋದವು. ಜಿಲ್ಲಾದ್ಯಂತ ಒಟ್ಟು 20145.50 ಹೆಕ್ಟೇರ್‌ ಪ್ರದೇಶದಲ್ಲಿನ 34,01,592 ಅಡಕೆ ಮತ್ತು ತೆಂಗಿನ ಮರಗಳ ಹಾನಿಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ತೆಂಗಿನ ಮರಗಳ ಹಾನಿಯಿಂದ 288.89 ಕೋಟಿ ರೂ. ಹಾಗೂ ಅಡಕೆ ಮರಗಳ ಹಾನಿಯಿಂದ 626.98 ಕೋಟಿ ರೂ.ಗಳ ಬೆಳೆ ಹಾನಿ ಸೇರಿ ಒಟ್ಟು 915.88 ಕೋಟಿ ರೂ.ಗಳ ಬೆಳೆ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾನದಂಡದ ಪ್ರಕಾರ ಬರ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವನೆಗೆ ಸರ್ಕಾರಗಳು ಗಮನ ನೀಡಿದಂತಿಲ್ಲ. ಹೀಗಾಗಿ ಜಿಲ್ಲೆಯ ರೈತರ ಸಂಕಷ್ಟ ಮತ್ತಷ್ಟು ಮುಂದುವರೆದಿದೆ. 

Advertisement

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next