ಕನಕಗಿರಿ: ಸಮೀಪದ ಜೀರಾಳ ಗ್ರಾಮದಿಂದ ನವಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ (8 ಕಿ.ಮೀ.) ಸಂಪೂರ್ಣ ಹದಗೆಟ್ಟಿದೆ. ದಶಕದಿಂದ ಈ ರಸ್ತೆಗೆ ಮುಕ್ತಿ ಸಿಕ್ಕಿಲ್ಲ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಗ್ರಾಮಸ್ಥರು ಜಿಪಂ ಸದಸ್ಯರಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಸುಮಾರ 10 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಈ ರಸ್ತೆಯಲ್ಲಿ ಜಲ್ಲಿಕಲ್ಲುಗಳು ರಸ್ತೆ ತುಂಬಾ ಹರಡಿರುವುದರಿಂದ ದ್ವಿಚಕ್ರ ವಾಹನ, ದನ-ಕರುಗಳು, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಹಗಲು ಹೊತ್ತಿನಲ್ಲೇ ಸಂಚರಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರ ಕಂಟಕವಾಗಿದ್ದು, ಹಲವಾರು ಅಪಘಾತಗಳು ಆದ ಉದಾಹರಣೆಯೂ ಇವೆ.
ಬಸ್ ಸಂಚಾರಕ್ಕೆ ಅಡ್ಡಿ: ಜೀರಾಳ ಗ್ರಾಮದಿಂದ ನವಲಿ ಗ್ರಾಮದವರೆಗೆ ರಸ್ತೆಯ ತುಂಬಾ ಜಲ್ಲಿಕಲ್ಲುಗಳು ಹರಡಿರುವುದಿಂದ ನಿತ್ಯ ಗಂಗಾವತಿಯಿಂದ ನವಲಿ ಗ್ರಾಮಕ್ಕೆ ಸಂಚರಿಸುವ ಸಾರಿಗೆ ಬಸ್ ಸಮಯಕ್ಕೆ ಸರಿಯಾಗಿ ತಲುಪಲು ಆಗುತ್ತಿಲ್ಲ. ಇದರಿಂದ ಗಂಗಾವತಿಗೆ ತೆರಳುವ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಈ ಭಾಗದಲ್ಲಿ ಸುಮಾರು 50 ವಿದ್ಯಾರ್ಥಿಗಳು ನಿತ್ಯ ಗಂಗಾವತಿಗೆ ತೆರಳುತ್ತಾರೆ. ಸಾರಿಗೆ ಬಸ್‌ಗಳು ಈ ಮಾರ್ಗವಾಗಿ ನಿತ್ಯ ನಾಲ್ಕು ಸಲ ಸಂಚರಿಸಿದರೂ ವಿದ್ಯಾರ್ಥಿಗಳಿಗೆ ಪ್ರಯೋಜನವಿಲ್ಲದಂತಾಗಿದೆ. ಇನ್ನು ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ಹರಸಾಹಸ ಪಡಬೇಕಾಗಿದೆ.
ಸಮನ್ವಯ ಕೊರತೆ: ಈ ಭಾಗದ ಜನಪತ್ರಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ಈ ರಸ್ತೆಯು ದುರಸ್ತಿಗೊಳದೇ ಅನಾಥವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಜೀರಾಳ, ವಡಕಿ, ಚಿರ್ಚಿನಗುಡ್ಡ ಮತ್ತು ಆದಾಪುರ ಗ್ರಾಮಸ್ಥರ ಆರೋಪವಾಗಿದೆ.
ಗಮನ ಹರಿಸದ ಜಿಪಂ ಸದಸ್ಯರು: ಜೀರಾಳ ಗ್ರಾಮದಿಂದ ನವಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಜಿಪಂ ವ್ಯಾಪ್ತಿಗೆ ಬರುತ್ತದೆ. ರಸ್ತೆಯ ಅಭಿವೃದ್ಧಿಗೆ ಮುಂದಾಗಬೇಕಾದ ಜಿಪಂ ಸದಸ್ಯರೇ ಗಮನ ಹರಿಸದೇ ಮೌನವಾಗಿದ್ದಾರೆ. ಇನ್ನು ಜಿಪಂ ಸದಸ್ಯರು ಯಾರ ಕೈಗೂ ಸಿಗದಂತಾಗಿದ್ದು, ರಸ್ತೆ ದುರಸ್ತಿ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳ್ತಾರೆ ಗ್ರಾಮಸ್ಥರು.
•ಶರಣಪ್ಪ ಗೋಡಿನಾಳ