Advertisement

ಮುಂಬಯಿ ದಾಳಿಗೆ ಹತ್ತು ವರ್ಷ ಹೇಗಿದೆ ಈಗ ಭಾರತದ ಸನ್ನದ್ಧತೆ?

12:30 AM Nov 26, 2018 | |

10 ವರ್ಷದ ಹಿಂದೆ ಈ ದಿನದಂದು ಇಡೀ ಭಾರತ ಬೆಚ್ಚಿ ಎದ್ದು ಕುಳಿತಿತ್ತು. 2006ರ ನವೆಂಬರ್‌ 2008ರಂದು ಪಾಕಿಸ್ಥಾನದ 10 ಆತಂಕವಾದಿಗಳು ಮುಂಬೈಗೆ ನುಗ್ಗಿ, ನಾಲ್ಕು ದಿನಗಳವರೆಗೆ ನಡೆಸಿದ ದಾಳಿಯಲ್ಲಿ 164 ಜನರು ಪ್ರಾಣ ಕಳೆದುಕೊಂಡರು ಮತ್ತು 300ಕ್ಕೂ ಅಧಿಕ ಜನ ಗಾಯಗೊಂಡರು. 

Advertisement

ಎನ್‌ಎಸ್‌ಜಿ ಕಮಾಂಡೋ ಮೇಜರ್‌ ಸಂದೀಪ್‌ ಉಣ್ಣಿಕೃಷ್ಣನ್‌, ಮಹಾರಾಷ್ಟ್ರ ಎಟಿಎಸ್‌ ಮುಖ್ಯಸ್ಥ ಹೇಮಂತ್‌ ಕರ್ಕರೆ, ಐಪಿಎಸ್‌ ಅಧಿಕಾರಿ ಅಶೋಕ್‌ ಕಾಮ್ಟೆ, ಹಿರಿಯ ಪೊಲೀಸ್‌ ಅಧಿಕಾರಿ-ಎನೌRಂಟರ್‌ ಸ್ಪೆಷಲಿಸ್ಟ್‌ ವಿಜಯ್‌ ಸಾಲಸ್ಕರ್‌, ಬರಿಗೈಯಲ್ಲಿ ಕಸಬ್‌ನನ್ನು ಹಿಡಿದು ಪ್ರಾಣಬಿಟ್ಟ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ತುಕಾರಾಂ ಓಂಬ್ಳೆ, ರೈಲ್ವೆ ಪೊಲೀಸ್‌ ಅಧಿಕಾರಿ ಶಶಾಂಕ್‌ ಶಿಂಧೆಯಂಥ ಧೀರರನ್ನು ಭಾರತ ಕಳೆದುಕೊಂಡಿತು. 

ಲಷ್ಕರ್‌-ಎ-ತಯ್ಯಬಾ ಮತ್ತು ಪಾಕ್‌ನ ಐಎಸ್‌ಐ ಕುತಂತ್ರದಿಂದ ನಡೆದ ಈ ದಾಳಿಯ ಗಾಯ ಈಗಲೂ ಮರೆಯಾಗಿಲ್ಲ. ದಾಳಿ ನಡೆಸಿದ ಉಗ್ರರಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕಮಾತ್ರ ಉಗ್ರ ಅಜ್ಮಲ್‌ ಕಸಬ್‌ನನ್ನು ನೇಣಿಗೇರಿಸಲಾಯಿತು ಎನ್ನುವುದನ್ನು ಬಿಟ್ಟರೆ ಈ ಕುತಂತ್ರದ ಹಿಂದಿರುವವರಿಗೆಲ್ಲ ಏನೂ ಆಗಿಲ್ಲ. ಈ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯೀದ್‌ ಈಗಲೂ ಪಾಕಿಸ್ಥಾನದಲ್ಲಿ ಆರಾಮಾಗಿದ್ದಾನೆ. ಭಾರತದ ವಿರುದ್ಧ ವಿಷ ಕಾರುತ್ತಲೇ ಇರುತ್ತಾನೆ. ಆತನ ವಿರುದ್ಧ ಎಷ್ಟೇ ಪುರಾವೆ ಒದಗಿಸಿದರೂ ಪಾಕಿಸ್ಥಾನ ಎಂದಿನಂತೆ ಆತನಿಗೆ ರಾಜಕೀಯ ರಕ್ಷಣೆ ಮತ್ತು ವೇದಿಕೆ ಕಲ್ಪಿಸಿಕೊಟ್ಟಿದೆ. ಇದೇನೇ ಇದ್ದರೂ, ಇಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ, ಆಗ ಇಂಥದ್ದೊಂದು ದಾಳಿಯನ್ನು ನಾವು ನಿರೀಕ್ಷಿಸಿಯೇ ಇರಲಿಲ್ಲ. ಆದರೀಗ ಇಂಥ ದಾಳಿಯ ಸಾಧ್ಯಾಸಾಧ್ಯತೆಯ ಬಗ್ಗೆ ನಮಗಷ್ಟೇ ಅಲ್ಲ, ಉಗ್ರ ಸಂಘಟನೆಗಳಿಗೂ ತಿಳಿದಿದೆ. ಪರಿಸ್ಥಿತಿ ಹೀಗಿರುವಾಗ ಇಂಥ ಘಟನೆಗಳು ಪುನಃ ಸಂಭವಿಸಿದಂತೆ ತಡೆಯಲು ಒಂದು ದೇಶವಾಗಿ ನಾವು ಎಷ್ಟು ಸಿದ್ಧರಿದ್ದೇವೆ? ಎನ್ನುವುದು. 

ಅಪಾಯ ತಗ್ಗಿದೆಯೇ?
ಭಾರತದಂಥ ಬೃಹತ್‌ ಭೌಗೋಳಿಕ ವಿಸ್ತಾರವಿರುವ ರಾಷ್ಟ್ರದಲ್ಲಿ ಅಪಾಯದ ಸಾಧ್ಯತೆ ಇದ್ದೇ ಇರುತ್ತದೆ. ಪಾಕಿಸ್ಥಾನ, ಅದಕ್ಕೆ  ನೆರವು ನೀಡುತ್ತಿರುವ ಚೀನಾ ಮತ್ತು ಏಷ್ಯಾದ ಹೊಸ ಮಗ್ಗುಲ ಮುಳ್ಳಾಗಿ ಬದಲಾಗಿರುವ-ಉಗ್ರರ ಹೊಸ ನೆಲೆ ಎಂದು ಕರೆಸಿಕೊಳ್ಳುತ್ತಿರುವ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಶಕ್ತಿಗಳು ಬೆಳೆಯುತ್ತಲೇ ಇವೆ. ಇನ್ನು ಮಧ್ಯಪ್ರಾಚ್ಯದಲ್ಲಿ ಬಲ ಕಳೆದುಕೊಂಡಿರುವ ಐಎಸ್‌ಐಎಸ್‌ ಉಗ್ರಸಂಘಟನೆಯೂ ಈಗ ನಿಧಾನಕ್ಕೆ ಪಾಕಿಸ್ಥಾನ, ಅಫ್ಘಾನಿಸ್ಥಾನ, ಪಾಕ್‌ ಆಕ್ರಮಿತ ಕಾಶ್ಮೀರ, ಬಾಂಗ್ಲಾದೇಶದಲ್ಲಿ ನೆಲೆ ಕಂಡುಕೊಳ್ಳಲಾರಂಭಿಸಿರುವುದೂ ಅಪಾಯದ ಮುನ್ಸೂಚನೆಯೇ ಸರಿ.

ಸಮುದ್ರ ಮಾರ್ಗ ಸುರಕ್ಷಿತವೇ?
26/11 ದಾಳಿಯ ವೇಳೆ ಉಗ್ರರು ಭಾರತದೊಳಗೆ ನುಸುಳಿದ್ದು ಸಾಗರ ಮಾರ್ಗದ ಮೂಲಕ. ಹೀಗಾಗಿ ಭಾರತ ಸಹಜವಾಗಿಯೇ ಸಾಗರ ಪ್ರಾಂತ್ಯದಲ್ಲಿ ಕಣ್ಗಾವಲನ್ನು ಹೆಚ್ಚಿಸಿದೆ. ಅದರಲ್ಲೂ ಮುಖ್ಯವಾಗಿ ಪಶ್ಚಿಮ ಭಾಗದಲ್ಲಿ 2008ರಲ್ಲಿ 74ರಷ್ಟಿದ್ದ  ನೌಕಾದಳದ ಹಡುಗುಗಳ ಸಂಖ್ಯೆಯೀಗ 134ಕ್ಕೆ ಏರಿದೆ. 

Advertisement

ಭಾರತದ ಕರಾವಳಿ ಭಾಗಗಳಲ್ಲಿ , ಅದರಲ್ಲೂ ಇಂಪೋರ್ಟ್‌ ಎಕ್ಸ್‌ಪೋರ್ಟ್‌ ಹೆಚ್ಚಿರುವ ಮಂಗಳೂರು, ಚೆನ್ನೈ ಮತ್ತು ಮುಂಬೈ ಕಡಲ ಪ್ರದೇಶಗಳು 10 ವರ್ಷದ ಹಿಂದಕ್ಕೆ ಹೋಲಿಸಿದರೆ ತುಸು ಭದ್ರವಾಗಿವೆ. ಆದರೆ ಸಂಪೂರ್ಣವಾಗಿ ಭದ್ರವಾಗಿಲ್ಲ,. 26/11 ದಾಳಿ ನಡೆದ ಮೇಲೆ ಎಲ್ಲಾ ಚಿಕ್ಕ ದೋಣಿಗಳಿಗೂ ಟ್ರಾÂಕಿಂಗ್‌ ಮತ್ತು ಸಂವಹನ ಉಪಕರಣಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಲಾಗಿತ್ತಾದರೂ, ಸಾಗರ ಕಣ್ಗಾವಲು ಜಾಲ ಇನ್ನೂ ಅಷ್ಟು ಸಕ್ಷಮವಾಗಿಲ್ಲ. 

ಭದ್ರತಾ ಏಜೆನ್ಸಿಗಳ ಕಾರ್ಯಕ್ಷಮತೆ ಹೇಗೆ ಬದಲಾಗಿದೆ?
26/11ನಂಥ ಘಟನೆಗಳಿಗೆ ತ್ವರಿತ ಪ್ರತಿಕ್ರಿಯೆ, ಶೀಘ್ರ ನಿಯೋಜನೆ-ನಿರ್ಧಾರ ಕೈಗೊಳ್ಳುವಿಕೆ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಭಾರತೀಯ ಭದ್ರತಾ ಏಜೆನ್ಸಿಗಳು ಚುರುಕಾಗಿವೆ ಎನ್ನಬಹುದು. ಆದರೆ ಇಂಥ ಘಟನೆಗಳಿಗೆ ಮೊದಲು ಸ್ಪಂದಿಸಬೇಕಾದವರೇ ಪೊಲೀಸರು. ಆದರೆ ಮುಂಬೈನಂಥ ಮಹಾನಗರಗಳನ್ನು ಹೊರತುಪಡಿಸಿ ದರೆ ಇತರೆಡೆಗಳಲ್ಲಿ ಪೊಲೀಸರ ಬಳಿ ಈಗಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಲ್ಲ. ಆಗಲೇ ಹೇಳಿದಂತೆ, ಸಹಜವಾಗಿಯೇ 26/11ನಂಥ ದಾಳಿಯನ್ನು ಎದುರಿಸಿದ ಮುಂಬೈ ಪೊಲೀಸ್‌ ಇಲಾಖೆ ಈಗ ನಿಜಕ್ಕೂ ಸುಧಾರಿಸಿದೆ. 

ಈಗ ಮಹಾರಾಷ್ಟ್ರ, “ಫೋರ್ಸ್‌ ಒನ್‌’ ಎನ್ನುವ ತನ್ನದೇ ಆದ ಎಲೈಟ್‌ ಪಡೆಯನ್ನು ಹೊಂದಿದೆ. ರಾಷ್ಟ್ರೀಯ ಭದ್ರತಾಪಡೆ(ಎನ್‌ಎಸ್‌ಜಿ) ಫೋರ್ಸ್‌ ಒನ್‌ನ ಕೆಲವು ತುಕಡಿಗಳಿಗೆ ತರಬೇತಿ ನೀಡುತ್ತಿದೆ. ದೇಶಾದ್ಯಂತ ಇದೇ ರೀತಿಯ ವಿಶೇಷ ಪರಿಣತ ಪಡೆಗಳ ಸಿದ್ಧತೆ ಹೇಗಿದೆ ಎನ್ನುವ ಬಗ್ಗೆ ಎನ್‌ಎಸ್‌ಜಿ ಇತ್ತೀಚೆಗೆ ಅಧ್ಯಯನ ನಡೆಸಿತ್ತು. ದೇಶದಲ್ಲಿ ಒಟ್ಟು ಏಳು ರಾಜ್ಯಗಳು ಮಾತ್ರ(ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್‌, ದೆಹಲಿ, ತಮಿಳುನಾಡು) ಇಂಥ ದಾಳಿಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯ ಹೊಂದಿವೆ ಎನ್ನುತ್ತದೆ ಅದರ ವರದಿ. ಉಳಿದೆಲ್ಲ ರಾಜ್ಯಗಳಲ್ಲಿನ ಸಿದ್ಧತೆ “ಸಾಮಾನ್ಯ’ ಅಥವಾ ಇನ್ನೂ ಕೆಳಮಟ್ಟದಲ್ಲಿದೆ ಎನ್ನುವ ಆತಂಕಕಾರಿ ಅಂಶ ಈ ವರದಿಯಲ್ಲಿದೆ.
 
ಕೇಂದ್ರ ಮಟ್ಟದಲ್ಲೇನು ಬದಲಾವಣೆಯಾಗಿದೆ?
ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭಾರತ ತನ್ನ ಶತ್ರುರಾಷ್ಟ್ರಗಳಿಗೆ ಸ್ಪಷ್ಟ ಸಂದೇಶ ನೀಡಲಾರಂಭಿಸಿದೆ. ಸರ್ಜಿಕಲ್‌ ಸ್ಟ್ರೈಕ್‌ನಂಥ ಕಾರ್ಯಾಚರಣೆಗಳು ನಮ್ಮ ರಕ್ಷಣಾ ಪಡೆಗಳ, ಭದ್ರತಾ ವ್ಯವಸ್ಥೆಯ ಉತ್ಸಾಹ ಮತ್ತು ಕಾನ್ಫಿಡೆನ್ಸ್‌ ಅನ್ನು ಹೆಚ್ಚಿಸಿರುವುದು ಸುಳ್ಳಲ್ಲ. ಆದರೆ, ದೇಶದ ಭದ್ರತೆಯ ವಿಚಾರದಲ್ಲಿ ಆಗಲೇಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ. 

Advertisement

Udayavani is now on Telegram. Click here to join our channel and stay updated with the latest news.

Next