Advertisement
ಆರ್ಥಿಕ ಉಳಿತಾಯ ಹಾಗೂ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ “ಪರಿಸರ ಸ್ನೇಹಿ’ ವಾಹನಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಹತ್ತು ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ನಿರೀಕ್ಷಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
Related Articles
2024ರ ಗಣರಾಜ್ಯೋತ್ಸವಕ್ಕೆ ಇ-ಹೆದ್ದಾರಿ ಸಿದ್ಧ
ಜತೆಗೆ ರಾಜಧಾನಿ ದೆಹಲಿ-ಮುಂಬೈ ನಡುವೆ “ಎಲೆಕ್ಟ್ರಿಕ್ ಹೆದ್ದಾರಿ’ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, 1,300 ಕಿ.ಮೀ. ಉದ್ದದ 12 ಪಥದ ಈ ರಸ್ತೆಯು 1.30 ಲಕ್ಷ ಕೋಟಿ ವೆಚ್ಚದಲ್ಲಿ ತಲೆಯೆತ್ತಲಿದೆ. ಈ ಸಂಬಂಧದ ಶೇ. 60ರಷ್ಟು ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. 2024ರ ಜ. 26ಕ್ಕೆ ಇದು ಲೋಕಾರ್ಪಣೆಗೊಳ್ಳಲಿದೆ. ಈ “ಹಸಿರು ಕಾರಿಡಾರ್’ನಲ್ಲಿ ಮಾರ್ಗದುದ್ದಕ್ಕೂ ವಿದ್ಯುತ್‌ಚಾಲಿತ ವಾಹನಗಳಿಗೆ ಎಲ್ಲ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ಇದಕ್ಕಾಗಿ ಅತ್ಯಂತ ಕಡಿಮೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
Advertisement
ಇದಲ್ಲದೆ, ನಾಗ್ಪುರದಲ್ಲಿ ಒಳಚರಂಡಿ ನೀರನ್ನು ಇಂಧನವನ್ನಾಗಿ ಪರಿವರ್ತಿಸಲಾಗುತ್ತಿದೆ. ಹೀಗೆ ಉತ್ಪಾದಿಸಿದ ಇಂಧನವನ್ನು ಬಳಸಿ ನೂರು ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ದೇಶದಲ್ಲೇ ಈ ಪ್ರಯೋಗ ಇದೇ ಮೊದಲು ಎಂದ ಅವರು, ಇಂತಹ ಹಲವು ಪ್ರಯತ್ನಗಳು ಭವಿಷ್ಯದಲ್ಲಿ ದೇಶದ ಆರ್ಥಿಕತೆಯ ಐತಿಹಾಸಿಕ ಬದಲಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಒಂದು ಕೋಟಿಗಿಂತ ಹೆಚ್ಚು ಜನ ಉದ್ಯಾನ ನಗರಿಯಲ್ಲಿ ವಾಸಿಸುತ್ತಿದ್ದು, 50 ಲಕ್ಷ ಮಂದಿ ದ್ವಿಚಕ್ರ ವಾಹನ ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕ ಯುವಕರು ಆಗಿದ್ದಾರೆ. ನಗರದಾದ್ಯಂತ ಸುಮಾರು ನೂರು ಚಾರ್ಜಿಂಗ್ ಸ್ಟೇಷನ್‌ಗಳು ಸೇರಿದಂತೆ ವಿದ್ಯುತ್‌ಚಾಲಿತ ವಾಹನಗಳಿಗೆ ಮೂಲಸೌಕರ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಟಿವಿಎಸ್ ಮೋಟಾರ್ ಕಂಪೆನಿ ಅಧ್ಯಕ್ಷ ವೇಣು ಶ್ರೀನಿವಾಸನ್ ಉಪಸ್ಥಿತರಿದ್ದರು.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು 4.4 ಕಿ.ವಾ. ಸಾಮರ್ಥ್ಯದ್ದಾಗಿದೆ. ಸಂಪೂರ್ಣ ಚಾರ್ಜ್ ಮಾಡಿದರೆ, ಗಂಟೆಗೆ ಗರಿಷ್ಠ 75 ಕಿ.ಮೀ. ವೇಗದಲ್ಲಿ ಇದು ಸಂಚರಿಸಬಲ್ಲದು. ಸದ್ಯ ಬಿಳಿ ಬಣ್ಣದಲ್ಲಿ ಇದು ಲಭ್ಯವಿದ್ದು, ರಿಮೋಟ್ ಚಾರ್ಜ್ ಸ್ಥಿತಿ, ಅಧಿಕ ವೇಗದ ಎಚ್ಚರಿಕೆ, ಬ್ಯಾಟರಿ ಚಾರ್ಜ್ ಬಗ್ಗೆ ಮುನ್ಸೂಚನೆ, ಜಿಯೊ ಫೆನ್ಸಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಇದು ಒಳಗೊಂಡಿದೆ. ಇದರ ಬೆಲೆ 1.15 ಲಕ್ಷ ರೂ. ಎಂದು ವೇಣು ಶ್ರೀನಿವಾಸನ್ ವಿವರಿಸಿದರು. ಇದೇ ವೇಳೆ ಸ್ಮಾರ್ಟ್ ಹೋಂ ಚಾರ್ಜಿಂಗ್ ಯೂನಿಟ್ ಕೂಡ ಉದ್ಘಾಟನೆಗೊಂಡಿತು.