Advertisement
ಪ್ರತಿ ಕುಟುಂಬಕ್ಕೆ ತಾತ್ಕಾಲಿಕ ಶೆಡ್ ಮನೆ ನಿರ್ಮಿಸಿ ಅಡುಗೆ ಮಾಡಿಕೊಳ್ಳಲು ಸಿಲಿಂಡರ್, ಸ್ಟೌವ್ ಸೇರಿ ಪಾತ್ರೆ ಒದಗಿಸಲು ನಿರ್ಧರಿಸಲಾಗಿದೆ. ಮಳೆ ಬಂದರೂ ಸೋರದಂತೆ ಅಲ್ಯುಮಿನಿಯಂ ಶೆಡ್‌ಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ.
Related Articles
Advertisement
ನಿರಾಶ್ರಿತರ ಶಿಬಿರದಲ್ಲಿ ಇರುವ ಅನೇಕರ ಮನೆ ಪೂರ್ಣ ಹಾನಿಗೊಳಗಾಗಿದೆ. ಕೆಲವರ ಮನೆ ಭಾಗಶಃ ಹಾನಿಯಾಗಿದೆ. ಇನ್ನು ಕೆಲವರ ಮನೆಗೆ ಯಾವುದೇ ಹಾನಿಯಾಗಿಲ್ಲ. ಆದರೆ, ತೋಟ ಹಾಗೂ ಜಮೀನಿಗೆ ನಷ್ಟವಾಗಿದೆ. ಮನೆಗೆ ಯಾವುದೇ ಹಾನಿಯಾಗದವರು ಮಳೆ ಪ್ರಮಾಣ ಸಂಪೂರ್ಣ ಇಳಿದ ನಂತರ ವಾಪಸ್ ಅದೇ ಮನೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಇನ್ನು, ಮನೆ ಸಂಪೂರ್ಣ ಹಾನಿಯಾದವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡುವುದು ಅನಿವಾರ್ಯವಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಸುತ್ತಮುತ್ತ ಗುಡ್ಡ ಇಲ್ಲದ ಸಮತಟ್ಟಾದ ಎರಡು ಜಾಗ ಗುರುತಿಸಿ ವಿವರ ಸಲ್ಲಿಸಿದ್ದೇವೆ. ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದ ನಂತರ ತಾತ್ಕಾಲಿಕ ಶೆಡ್ ನಿರ್ಮಾಣ ಆರಂಭಿಸಲಿದ್ದೇವೆ ಎಂದು ಮಡಿಕೇರಿ ತಹಶೀಲ್ದಾರ್ ಕುಸುಮಾ ತಿಳಿಸಿದರು.
ನಿರಾಶ್ರಿತರ ಶಿಬಿರದಲ್ಲಿ ಹೆಚ್ಚುದಿನ ಅಧಿಕ ಜನರನ್ನು ಸಲವುದು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ತುರ್ತು ಅಗತ್ಯ ಇರುವವರಿಗೆ ಶೆಡ್‌ಗಳ ನಿರ್ಮಾಣ ಮಾಡಲೇ ಬೇಕಾಗುತ್ತದೆ. 443 ಕುಟುಂಬಗಳನ್ನು ಗಮನದಲ್ಲಿ ಇಟ್ಟುಕೊಂಡು ಅಲೂಮಿನಿಯಂ ಶೆಡ್‌ಗಳ ನಿರ್ಮಾಣ ಮಾಡಲಾಗುತ್ತದೆ. ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಶೆಡ್ ನಿರ್ಮಿಸಲಾಗುತ್ತದೆ. ಶೌಚಾಲಯ ಸೇರಿ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತದೆ ಎಂದು ಹೇಳಿದರು.
ಶಾಶ್ವತ ಮನೆ:ನಿರಾಶ್ರಿತರ ಕೇಂದ್ರದಿಂದ ಶೆಡ್‌ಗೆ ವರ್ಗಾಯಿಸಿದ ನಂತರ ಕನಿಷ್ಠ ಮೂರ್‍ನಾಲ್ಕು ತಿಂಗಳಾದರೂ ಅದೇ ಶೆಡ್‌ನಲ್ಲಿ ಇರಬೇಕಾಗುತ್ತದೆ. ನಂತರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದಂತೆ ಶಾಶ್ವತ ಪರಿಹಾರ ನೀಡಲಾಗುತ್ತದೆ. ಮನೆ ನಿರ್ಮಾಣ ಜವಾಬ್ದಾರಿ ಪಂಚಾಯತಿ, ನಗರಸಭೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕವೇ ಮಾಡಲಾಗುತ್ತದೆ. ಅನೇಕ ಕುಟುಂಬಗಳು ಮನೆ ಎಲ್ಲಿದೆ ಎಂಬುದನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ. ಇಂತಹ ಕುಟುಂಬಕ್ಕೆ ಪರ್ಯಾಯ ಜಾಗ ನೀಡಿ ಮನೆ ನಿರ್ಮಿಸಬೇಕಾಗುತ್ತದೆ. ಇದೆಲ್ಲವೂ ಸರ್ಕಾರ ಅಂತಿಮ ತೀರ್ಮಾನದ ಮೇಲೆಯೇ ಅವಲಂಬಿಸಿದೆ ಎಂದು ಹೇಳಿದರು. ಚೆಕ್ ಮೂಲಕವೇ ಪರಿಹಾರ:
ಮನೆ, ಜಮೀನು ಕಳೆದುಕೊಂಡ ಎಲ್ಲರಿಗೂ ಪರಿಹಾರ ಸಿಕ್ಕೇ ಸಿಗುತ್ತದೆ. ಮನೆ ಪೂರ್ಣ ಹಾನಿಯಾಗಿರುವುದು, ಭಾಗಶಃ ಹಾನಿಯಾಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಅದರ ಸ್ಥಿತಿಗತಿಯ ಆಧಾರದಲ್ಲಿ ಪರಿಹಾರ ನೀಡಲಾಗುತ್ತದೆ. ಬೆಳೆ ಹಾನಿಯ ಪರಿಹಾರವನ್ನೂ ನೀಡಲಾಗುತ್ತದೆ. ನಗದು ನೀಡುವುದರಿಂದ ಅವ್ಯವಹಾರ ಆಗುವ ಸಾಧ್ಯತೆ ಇದೆ ಅಥವಾ ಫಲಾನುಭವಿಗಳಲ್ಲದವರೂ ಪರಹಾರ ಪಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಚೆಕ್ ಮೂಲಕವೇ ಎಲ್ಲ ರೀತಿಯ ಪರಿಹಾರ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಪ್ರಾಥಮಿಕ ಪರಿಹಾರ:
ನಿರಾಶ್ರಿತರ ಕೇಂದ್ರದಲ್ಲಿ ಇರುವ 443 ಕುಟುಂಬಗಳಿಗೆ ಪ್ರಾಥಮಿಕ ಪರಿಹಾರವಾಗಿ 3800 ರೂ. ಚೆಕ್ ಮೂಲಕ ವಿತರಿಸುವ ಕಾರ್ಯ ಆರಭವಾಗಿದೆ. ಶುಕ್ರವಾರ ಬಹುತೇಕ ಕುಟುಂಬಗಳಿಗೆ ಪ್ರಾಥಮಿಕ ಪರಿಹಾರ ಹಂಚಿಕೆ ಮಾಡಲಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರವೇ ಪರಿಹಾರದ ಚೆಕ್ ನೀಡಲಾಗಿದೆ. ಅಗತ್ಯವಾಗಿ ಬೇಕಿರುವ ಬಟ್ಟೆ, ಪಾತ್ರೆ ಇತ್ಯಾದಿಗಳನ್ನು ಈ ಹಣದಿಂದ ಖರೀದಿಸಬಹುದಾಗಿದೆ. ನಿರಾಶ್ರಿಯರ ಶಿಬಿರದಲ್ಲಿ ಇರುವ ಎಲ್ಲರಿಗೂ ಅಗತ್ಯ ಬಟ್ಟೆ, ಹೊದಿಕೆ ಇತ್ಯಾದಿ ಉಚಿತವಾಗಿಯೇ ನೀಡಲಾಗಿದೆ. ಪರಿಹಾರ ಚೆಕ್ ಮೂಲಕ ನೀಡಿದ್ದರಿಂದ ನಗದು ಪಡೆಯುವಾಗ ಒಂದೆರೆಡು ದಿನ ವಿಳಂಬವಾಗಬಹುದು. ಆದರೆ, ಅರ್ಹ ಫಲಾನುಭವಿಗೆ ಸರ್ಕಾರ ಸೌಲಭ್ಯ ತಲುಪುತ್ತದೆ ಎಂದು ತಹಸೀಲ್ದಾರ್ ವಿವರಿಸಿದರು. 700 ಕೋಟಿ ರೂ. ಬೆಳೆನಷ್ಟ ಅಂದಾಜು
ಈ ಮಧ್ಯೆ, ಮಳೆಯಿಂದ 6755 ಹೆಕ್ಟೇರ್ ತೋಟಗಾರಿಕೆ ಹಾಗೂ 2830 ಕೃಷಿ ಭೂಮಿಯಲ್ಲಿ ಬೆಳೆ ನಾಶವಾಗಿದೆ. ಕಾಫಿ, ಶುಂಠಿ, ಏಲಕ್ಕಿ, ಬಾಳೆ, ಭತ್ತ ಹೀಗೆ ಸುಮಾರು 700 ಕೋಟಿ ರೂ. ಮೊತ್ತದ ಬೆಳೆ ನಾಶದ ಅಂದಾಜು ಮಾಡಲಾಗಿದೆ. – ರಾಜು ಖಾರ್ವಿ ಕೊಡೇರಿ