ಕೂಳೂರು: ಹೆದ್ದಾರಿ ಇಲಾಖೆ ಮಾಡಬೇಕಾದ ರಸ್ತೆ ನಿರ್ವಹಣೆ, ದುರಸ್ತಿ ಕೆಲಸವನ್ನು ಶಾಸಕ ಡಾ| ಭರತ್ ಶೆಟ್ಟಿ ವೈ. ಮುಂದಾಳತ್ವದಲ್ಲಿ ಸೋಮವಾರ ಮಾಡಲಾಯಿತು.
ಕೂಳೂರಿನಿಂದ ಮಂಗಳೂರು ನಗರವನ್ನು ಸಂಪರ್ಕಿಸುವ ಪ್ರಮುಖ ಸರ್ವಿಸ್ ರಸ್ತೆ ಸಂಪೂರ್ಣ ಕೆಟ್ಟು ಹೋದ ಬಗ್ಗೆ ಉದಯವಾಣಿ ಸುದಿನ ಜು. 4ರಂದು ವರದಿ ಪ್ರಕಟಿಸಿತ್ತು. ಈ ಬಗ್ಗೆ ತತ್ಕ್ಷಣ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಸ್ಪಂದಿಸಿ, ಸ್ವಯಂ ಗುತ್ತಿಗೆದಾರರನ್ನು ಕಳಿಸಿ ಹೊಂಡಗಳಿಗೆ ಜಲ್ಲಿಪುಡಿ, ಕಲ್ಲುಗಳನ್ನು ಹಾಕಿ ಮುಚ್ಚಿಸಿದರು.
ತಾತ್ಕಾಲಿಕವಾಗಿ ರಸ್ತೆಯಲ್ಲಿ ಓಡಾಡಲು ಅನುಕೂಲವಾಗುವಂತೆ ದುರಸ್ತಿ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕರು, ನಿರ್ವಹಣೆಯನ್ನು ಹೆದ್ದಾರಿ ಇಲಾಖೆ ಮಾಡಬೇಕು. ಮಾಧ್ಯಮ ವರದಿ, ಸ್ಥಳೀಯರು, ವಾಹನ ಸವಾರರು ದೂರು ನೀಡಿದ ಮೇರೆಗೆ ತತ್ಕ್ಷಣ ಸ್ಪಂದಿಸಿ ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದೇನೆ. ಈ ರಸ್ತೆಯಲ್ಲಿ ಬಸ್ ಸಹಿತ ವಿವಿಧ ವಾಹನಗಳು ದಿನ ನಿತ್ಯ ಓಡಾಡುತ್ತವೆ. ಹಾಗಾಗಿ ಕಾಂಕ್ರೀಟ್ ಕಾಮಗಾರಿ ನಡೆಸುವ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು. ಹೆದ್ದಾರಿ ಇಲಾಖೆ ಅಧಿಕಾರಿಗಳು ಮಳೆಗಾಲದಲ್ಲಿ ತುರ್ತಾಗಿ ಸ್ಪಂದಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
Related Articles
ಸ್ಥಳೀಯ ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಅವರು ಹೆದ್ದಾರಿ ಇಲಾಖೆಯ ಗಮನಕ್ಕೆ ತಂದರೂ ಸ್ಪಂದಿಸಲಿಲ್ಲ. ಯಾವುದೇ ಜೀವ ಹಾನಿ ಅಥವಾ ಅಪಘಾತವಾದಲ್ಲಿ ಹೆದ್ದಾರಿ ಇಲಾಖೆಯ ಮೇಲೆ ನಿರ್ಲಕ್ಷ್ಯ ವಹಿಸಿದರೆ ಕೇಸು ದಾಖಲಿಸಲೂ ತಯಾರಿದ್ದೇವೆ. ಜನರ ಅನುಕೂಲಕ್ಕಾಗಿ ಕಾಂಕ್ರೀಟ್ ರಸ್ತೆ ಮಾಡುವ ಬಗ್ಗೆ ಶಾಸಕರು ಸ್ಪಂದಿಸಿದ್ದಾರೆ ಎಂದರು.
ಈ ಸಂದರ್ಭ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.