ನೀವು ಇಲ್ಲಿರುವ ನೂರಾರು ಹುಲಿಗಳೊಂದಿಗೆ ಬೆರೆತು ಆಟವಾಡಬಹುದು. ಹುಲಿಗಳ ಜೊತೆ ವಾಕಿಂಗ್ ಮಾಡಬಹುದು. ಅಷ್ಟೇ ಏಕೆ ? ಅವುಗಳನ್ನು ಅಪ್ಪಿ, ಮುದ್ದಾಡಬಹುದು. ಅವುಗಳು ನಿಮಗೇನೂ ತೊಂದರೆ ಕೊಡುವುದಿಲ್ಲ. ಬದಲಿಗೆ ನಿಮ್ಮ ಜೊತೆ ಅವುಗಳೂ ಸಹ ಅಟವಾಡುತ್ತವೆ! ಇಂಥ ವಿಶೇಷ ಅನುಭವ ಪಡೆಯಲು ಥಾಯ್‌ಲೆಂಡಿಗೆ ಭೇಟಿ ನೀಡಬೇಕು. ಏಕೆಂದರೆ ಅಲ್ಲೇ ಇರೋದು “ಟೈಗರ್ ಟೆಂಪಲ…’!
ಥಾಯ್‌ಲೆಂಡಿನ ಸಾಯೋಕ್ ಜಿಲ್ಲೆಯಲ್ಲಿ 1994ರಲ್ಲಿ ಈ ಹುಲಿಗಳ ದೇವಸ್ಥಾನ ಸ್ಥಾಪನೆಗೊಂಡಿತ್ತು. ಈ ವನ್ಯಧಾಮದ ತುಂಬೆಲ್ಲಾ ವಿವಿಧ ಪ್ರಭೇದಗಳ ನೂರಾರು ಹುಲಿಗಳದೇ ದರ್ಬಾರು. ಇಲ್ಲಿಗೆ ಬರುವ ಪ್ರವಾಸಿಗರೆಲ್ಲರೂ ಇಲ್ಲಿನ ಹುಲಿಗಳ ಜೊತೆ ಆಟವಾಡುತ್ತಾ, ಮುದ್ದಿಸುತ್ತಾ ಅವುಗಳ ಮೈದಡವುತ್ತಾರೆ. ಇಲ್ಲಿ ಮಕ್ಕಳಾದಿಯಾಗಿ ಮುದುಕರೂ ಸಹ ಹುಲಿಗಳೊಂದಿಗೆ ಫೋಟೋ ತೆಗೆಸಿಕೊಂಡು ಸಂತಸ ಪಡುತ್ತಾರೆ.
ಈ ಟೈಗರ್ ಟೆಂಪಲ್ ಒಂದೊಮ್ಮೆ ಬೌದ್ಧ ದೇವಾಲಯವಾಗಿತ್ತು. ಪಕ್ಕದ ಹಳ್ಳಿಯ ಜನರು ಈ ದೇವಾಲಯಕ್ಕೆ ಹುಲಿಮರಿಯೊಂದನ್ನು ಕೊಡುಗೆಯಾಗಿ ನೀಡಿದರಂತೆ. ಅಲ್ಲಿಂದ ಈ ಬೌದ್ಧ ದೇವಾಲಯದ ಜೊತೆಗೆ ಹುಲಿಯ ನಂಟು ಪ್ರಾರಂಭಗೊಂಡಿತ್ತು. ಆದರೆ ದುರ್ದೈವವಶಾತ್ ಆ ಹುಲಿಮರಿ ತುಂಬಾ ದಿನ ಬದುಕುಳಿಯಲಿಲ್ಲ. ಆಮೇಲೆ ಗ್ರಾಮಸ್ಥರು ತಾಯಿಯಿಲ್ಲದೆ ತಬ್ಬಲಿಯಾಗಿದ್ದ ಅನೇಕ ಹುಲಿ ಮರಿಗಳನ್ನು ಬೌದ್ಧಾಶ್ರಮಕ್ಕೆ ನೀಡಿದರಂತೆ. ಅವೇ ಇಲ್ಲಿಯವರೆಗೂ ಬೆಳೆದುಕೊಂಡು ಬಂದಿರುವುದು. ಈಗ ಈ ಟೈಗರ್ ಟೆಂಪಲ್‌ನಲ್ಲಿ ಸುಮಾರು 150 ಹುಲಿಗಳಿವೆ. ಅವುಗಳಲ್ಲಿ ಇಂಡೋ ಚೈನೀಸ್ ಹುಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.
ಈ ತಾಣದಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಈ ಸ್ಥಳಕ್ಕೆ ಹೋಗಲು ಪ್ರವೇಶ ಶುಲ್ಕ ವಿಧಿಸಲಾಗುತ್ತದೆ. ನಿಗದಿತ ಶುಲ್ಕ ತೆತ್ತು ಪ್ರವಾಸಿಗರು ಹುಲಿಯನ್ನು ಅತಿ ಸಮೀಪದಿಂದ ನೋಡಬಹುದು. ಮಾತ್ರವಲ್ಲ ಇಷ್ಟು ದಿನ ನ್ಯಾಷನಲ್ ಜಿಯೋಗ್ರಫಿ ಚಾನೆಲ್ಲುಗಳಲ್ಲಿಯೋ, ಮೃಗಾಲಯದಲ್ಲಿಯೋ ದೂರದಿಂದ ನೋಡುತ್ತಿದ್ದ ಹುಲಿಗಳ ಮೈದಡವಿ ಖುಷಿಯನ್ನೂ ಪಡೆಯಬಹುದು. ಆದರೆ ಅಲ್ಲಿ ನೀಡುವ ಸೂಚನೆಗಳನ್ನು ಪಾಲಿಸಲು ಮರೆಯಬಾರದು. ಅಲ್ಲಿನ ಹುಲಿಗಳು ಈ ಮನುಷ್ಯರೊಂದಿಗೆ ಬೆರೆತು ಎಷ್ಟೇ ಸಾಧುತನವನ್ನು ಮೈಗೂಡಿಸಿಕೊಂಡಿದ್ದರೂ ಎಚ್ಚರಿಕೆ ವಹಿಸಲೇಬೇಕು.
ದೇವಾಲಯದಲ್ಲಿರುವ ಬೌದ್ಧ ಸನ್ಯಾಸಿಗಳು ಇಲ್ಲಿನ ಹುಲಿಗಳನ್ನು ನೋಡಿಕೊಳ್ಳುತ್ತಾರೆ. ಅವರು ಅವನ್ನು ವಾಕಿಂಗ್ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ.
ದಂಡಿನಶಿವರ ಮಂಜುನಾಥ್