Advertisement

ತಣ್ಣಗಾಗಿದ್ದ; ದೇಗುಲ ತೆರವು ವಿವಾದ ಮುನ್ನೆಲೆಗೆ

05:52 PM Sep 17, 2022 | Team Udayavani |

ಹುಬ್ಬಳ್ಳಿ: ಕಳೆದ ಐದಾರು ವರ್ಷಗಳಿಂದ ತಣ್ಣಗಾಗಿದ್ದ ಉಣಕಲ್ಲ ವೃತ್ತದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ತೆರವು, ಕಬ್ಜಾ ವಿಚಾರ ಪುನಃ ಮುನ್ನೆಲೆಗೆ ಬಂದಿದೆ. ಹೈಕೋರ್ಟ್‌ ಆದೇಶದಂತೆ ಬಿಆರ್‌ಟಿಎಸ್‌ ಕಂಪನಿ ಈ ಭೂಮಿಯನ್ನು ತನ್ನ ವ್ಯಾಪ್ತಿಗೆ ಪಡೆದಿದ್ದು, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂಬ ನೋಟಿಸ್‌ ಲಗತ್ತಿಸಿದೆ. ಈ ನಡುವೆ ಸ್ಥಳೀಯರ ಒತ್ತಾಯದ ಮೇರೆಗೆ ನಿತ್ಯದ ಪೂಜೆ-ಪುನಸ್ಕಾರಗಳು ಮುಂದುವರಿದಿದ್ದು, ಮತ್ತೂಂದು ಸುತ್ತಿನ ಹೋರಾಟಕ್ಕೆ
ವೇದಿಕೆ ಸಜ್ಜಾಗುತ್ತಿದೆ.

Advertisement

ಆಗಿದ್ದೇನು?: ಬಿಆರ್‌ಟಿಎಸ್‌ ಯೋಜನೆಗಾಗಿ ಸರ್ವೀಸ್‌ ರಸ್ತೆ ನಿರ್ಮಾಣಕ್ಕಾಗಿ ಈ ದೇವಸ್ಥಾನ ಒಳಗೊಂಡ ಸುಮಾರು 16 ಸಾವಿರ ಚದರಡಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ದೇವಸ್ಥಾನ ಇರುವ ಕಾರಣದಿಂದ 2258 ಚದರಡಿ ಭೂಮಿಗೆ ಪರಿಹಾರ ನೀಡಿರಲಿಲ್ಲ. ದೇವಸ್ಥಾನ ತೆರವುಗೊಳಿಸಿ ಖಾಲಿ ಭೂಮಿ ನೀಡಿದರೆ ಪರಿಹಾರ ನೀಡುವುದಾಗಿ ಪಟ್ಟುಹಿಡಿದಿದ್ದರು. ಭೂ ಸ್ವಾಧೀನಪಡಿಸಿಕೊಂಡ ನಂತರವೂ ಉಳಿದ ಭೂಮಿಗೆ ಪರಿಹಾರ ನೀಡಿಲ್ಲ ಎಂದು ಭೂಮಾಲೀಕ ಸತೀಶ ಮೆಹರವಾಡೆ ಎಂಬುವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಜಾಗ ಸ್ವಾಧೀನಕ್ಕೆ ಪಡೆದುಕೊಳ್ಳುವಂತೆ ಹೈಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಕೆಆರ್‌ಡಿಸಿಎಲ್‌ ವಿಶೇಷ ಭೂ ಸ್ವಾಧೀನಾಧಿಕಾರಿ ಮಹ್ಮದ್‌ ಜುಬೇರ್‌ ಅವರು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ನಂತರ ಬಿಆರ್‌ ಟಿಎಸ್‌ ಅಧಿಕಾರಿಗಳು ನೋಟಿಸ್‌ ಲಗತ್ತಿಸಿದ್ದರು.

ಎಲ್ಲರಿಗೂ ಒಂದೇ ನ್ಯಾಯ: ಬಿಆರ್‌ಟಿಎಸ್‌ ಸ್ವಾಧೀನಪಡಿಸಿಕೊಂಡಿರುವ ಇತರೆ ಕಡೆಗಳಲ್ಲಿನ ದೇವಸ್ಥಾನ, ದರ್ಗಾಗಳಿಗೆ ಇಲ್ಲದ ಕಾನೂನು ರಾಮಲಿಂಗೇಶ್ವರ ದೇವಸ್ಥಾನಕ್ಕೆ ಯಾಕೆ. ದೇವಸ್ಥಾನ ಇರುವ ಜಾಗದ ಮಾಲೀಕತ್ವ ಬಿಆರ್‌ಟಿಎಸ್‌ ತೆಕ್ಕೆಗೆ ಹೋಗಿರಬಹುದು. ಆದರೆ ಯಾವುದೇ ಕಾರಣಕ್ಕೂ ದೇವಸ್ಥಾನ ತೆರವುಗೊಳಿಸಲು ಬಿಡುವುದಿಲ್ಲ ಎನ್ನುವುದು ಭಕ್ತರ ಪಟ್ಟಾಗಿದೆ. ಒಂದು ವೇಳೆ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಿದರೆ ಈಗಾಗಲೇ ಶ್ರೀ
ರಾಮಲಿಂಗೇಶ್ವರ ದೇವಸ್ಥಾನಕ್ಕಾಗಿ ಖರೀದಿ ಮಾಡಿದ ಸ್ಥಳದಲ್ಲಿ ನಿರ್ಮಾಣದ ವಿಚಾರಗಳು ಕೂಡ ಇವೆ.

ಜನಪ್ರತಿನಿಧಿಗಳನ್ನು ಕರೆಸಲು ನಿರ್ಧಾರ
ಪ್ರಸ್ತುತ ಬೆಳವಣಿಗೆ ನಂತರ ಭಕ್ತರು, ಸ್ಥಳೀಯರು ಸಭೆ ನಡೆಸಿದ್ದಾರೆ. ದೇವಸ್ಥಾನ ತೆರವಿಗೆ ಅವಕಾಶ ನೀಡದಂತೆ ಶಾಸಕರಾದ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ಸೆ.18ರಂದು ಇವರ ನಿವಾಸಕ್ಕೆ ತೆರಳಿ ಮನವಿ ಮಾಡುವುದು, ಸಾಧ್ಯವಾದರೆ ಇಬ್ಬರು ಜನಪ್ರತಿನಿಧಿಗಳನ್ನು ದೇವಸ್ಥಾನಕ್ಕೆ ಕರೆತರುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

Advertisement

ಬಿಆರ್‌ಟಿಎಸ್‌ ಕಂಪನಿಯವರು ಹಿಂದೇ ಈ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ. ಮಾಲೀಕತ್ವ ಬದಲಾಗಿದೆ ವಿನಃ ದೇವಸ್ಥಾನ ತೆರವಿನ ಮಾತಿಲ್ಲ. ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಇನ್ನೂ ಕೆಲ ದೇವಸ್ಥಾನಗಳು, ಮಸೀದಿ, ದರ್ಗಾಗಳು ಬರುತ್ತಿವೆ. ಅವುಗಳ ಬಗ್ಗೆ ಮುಂದಿನ ಕ್ರಮ ಏನೆಂಬುದು ಸ್ಪಷ್ಟವಿಲ್ಲ. ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಒಂದೇ ನಿಯಮ ಇರಬೇಕು. ಯಾವುದೇ ಕಾರಣಕ್ಕೂ ದೇವಸ್ಥಾನ ತೆರವುಗೊಳಿಸಲು ಬಿಡುವುದಿಲ್ಲ.
ರಾಜಣ್ಣ ಕೊರವಿ, ಪಾಲಿಕೆ ಸದಸ್ಯ

ಭೂ ಸ್ವಾಧೀನ ನಿಯಮಗಳ ಪ್ರಕಾರ ಖಾಲಿ ಭೂಮಿ ನೀಡಬೇಕು. ಆದರೆ ದೇವಸ್ಥಾನ ಇರುವ ಕಾರಣಕ್ಕೆ ಕಂಪನಿ ಪರಿಹಾರ ಪಾವತಿ ಮಾಡಿರಲಿಲ್ಲ. ಆದರೆ ಭೂ ಮಾಲೀಕರು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಆದೇಶದ ಪ್ರಕಾರ ಇದೀಗ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ನಮ್ಮ ಸುಪರ್ದಿಗೆ ನೀಡಿದ್ದಾರೆ.
ಮಂಜುನಾಥ ಜಡೆನ್ನವರ, ಸಾರ್ವಜನಿಕ
ಸಂಪರ್ಕಾಧಿಕಾರಿ, ಬಿಆರ್‌ಟಿಎಸ್‌ ಕಂಪನಿ

ಹೇಮರಡ್ಡಿ ಸೈದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next